ಪುನೀತ್ ಕೆರೆಹಳ್ಳಿಗೆ ಜಾಮೀನು ಮಂಜೂರು

ಜಾನುವಾರು ಸಾಗಾಟ ವೇಳೆ ಇದ್ರೀಶ್ ಪಾಷಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕುಮಾರ್‌ ಅಲಿಯಾಸ್‌ ಪುನೀತ್‌ ಕೆರೆಹಳ್ಳಿ ಹಾಗೂ ಇತರೆ ನಾಲ್ವರು ಆರೋಪಿಗಳಿಗೆ ಹೈಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳು ಪ್ರತ್ಯೇಕವಾಗಿ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ಜಿ ಉಮಾ ನೇತೃತ್ವದ ರಜಾಕಾಲೀನ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

ಆರೋಪಿಗಳಾದ ಪುನೀತ್‌ ಕುಮಾರ್‌ ಅಲಿಯಾಸ್‌ ಪುನೀತ್‌ ಕೆರೆಹಳ್ಳಿ, ಗೋಪಿ, ಸುರೇಶ್‌, ಪವನ್‌ ಕುಮಾರ್‌ ಎ ಎನ್‌, ಪಿ ಲಿಂಗಪ್ಪಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ ಶ್ಯಾಮ್‌ ಅವರು “ಮರಣೋತ್ತರ ಪರೀಕ್ಷೆಯಲ್ಲಿ ಇದ್ರೀಶ್‌ ಪಾಷಾ ಅವರ ದೇಹದಲ್ಲಿ ತರಚಿದ ಗಾಯಗಳ ಬಗ್ಗೆ ಮಾತ್ರ ಉಲ್ಲೇಖವಾಗಿದೆ. ಗಂಭೀರ ಗಾಯಗಳ ಬಗ್ಗೆ ಯಾವುದೇ ಮಾಹಿತಿ ಉಲ್ಲೇಖವಾಗಿಲ್ಲ.. ಪ್ರಕರಣವು ಸಾತನೂರು ಠಾಣೆಯ 100 ಮೀಟರ್‌ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಹೀಗಿದ್ದಾಗ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಗಲೇಬೇಕಿತ್ತು. ಈಗ ತನಿಖೆ ಪೂರ್ಣಗೊಂಡಿದ್ದು, ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ಪೂರ್ಣಗೊಳಿಸಲಾಗಿದೆ. ಏನೇನು ವಶಪಡಿಸಿಕೊಳ್ಳಬೇಕು ಎಲ್ಲವೂ ಪೂರ್ಣಗೊಂಡಿದೆ. ಇದೀಗ ಆರೋಪ ಪಟ್ಟಿ ಸಲ್ಲಿಕೆಯಾಗಿ, ವಿಚಾರಣೆ ನಡೆಯಬೇಕಿದೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದ್ದರು.

ಈ ವಾದವನ್ನು ಹೈಕೋರ್ಟ್ ಪುರಸ್ಕರಿಸಿದೆ.

ಮಾರ್ಚ್‌ 31ರಂದು ಮಂಡ್ಯದ ಕಡೆಯಿಂದ ಬರುತ್ತಿದ್ದ ಜಾನುವಾರು ಸಾಗಣೆ ವಾಹನವೊಂದನ್ನು ಸಾತನೂರು ಪೊಲೀಸ್‌ ಠಾಣೆ ಸಮೀಪ ಅಡ್ಡಗಟ್ಟಿದ್ದ ಪುನೀತ್‌ ಕೆರೆಹಳ್ಳಿ ಹಾಗೂ ಆತನ ಸಹಚರರು ವಾಹನದಲ್ಲಿ ಇದ್ದವರ ಮೇಲೆ ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಪುನೀತ್ ಕೆರೆಹಳ್ಳಿ ತಂಡ ಮಾಡುವ ಹಲ್​ಚಲ್ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು