ಅಥವಾ, ಗಾಂಧೀಜಿಗೆ ನಮಿಸುವ ಬೂಟಾಟಿಕೆ ನಿಲ್ಲಿಸಿ – ಮೋದಿಗೊಂದು ಸವಾಲ್

ಮಹಾತ್ಮಾ ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ಭಾರತಾಂಬೆಯ ಸುಪುತ್ರ ಎಂದು ಕೇಂದ್ರ ಗಿರಿರಾಜ್ ಸಿಂಗ್ ಬಣ್ಣಿಸಿರುವುದಕ್ಕೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್​ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮೋದಿಯವರೇ, ಗೋಡ್ಸೆ ಭಕ್ತರನ್ನು ಬಿಜೆಪಿಯಿಂದ ಹೊರದಬ್ಬಿ ಅಥವಾ ಗಾಂಧೀಜಿ ಪ್ರತಿಮೆಗಳಿಗೆ ನಮಿಸುವ ಬೂಟಾಟಿಕೆಯನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ಪಕ್ಷ ಸವಾಲು ಹಾಕಿದೆ.

ಬಿಜೆಪಿಯ ಹಿರಿಯ ನಾಯಕರು ಗೋಡ್ಸೆಯನ್ನು ವೈಭವೀಕರಿಸುತ್ತಿದ್ದರೂ ಪ್ರಧಾನಿ ಮೋದಿ ಏನು ಮಾಡುತ್ತಿಲ್ಲ. ಅವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಇಂದು ನಾವು ಪ್ರಧಾನಿ ಮೋದಿಗೆ ಸವಾಲು ಹಾಕುತ್ತೇವೆ. ಇವುಗಳಲ್ಲಿ ಒಂದನ್ನು ನೀವು ಮಾಡಬೇಕು. ನಿಮ್ಮ ಪಕ್ಷದಿಂದ ಗೋಡ್ಸೆ ಭಕ್ತರನ್ನು ಹೊರಹಾಕಿ ಅಥವಾ ಗಾಂಧೀಜಿಯ ಮುಂದೆ ಶಿರಬಾಗಿ ನಮಿಸುವ ಬೂಟಾಟಿಕೆಯನ್ನು ಕೊನೆಗೊಳಿಸಿ. ಗಾಂಧೀಜಿಯ ಈ ದೇಶದಲ್ಲಿಗೋಡ್ಸೆ ಆರಾಧಕರಿಗೆ ಸ್ಥಾನ ಇರಬಾರದು.. ಮೋದಿ ಅವರೇ ನಿರ್ಧರಿಸಿ

ಎಂದು ಕಾಂಗ್ರೆಸ್ ಟ್ವೀಟ್​ ಮಾಡಿದೆ.

ಈ ಟ್ವೀಟ್​ ಜೊತೆಗೆ ಪ್ರಧಾನಿ ಮೋದಿ ಇತ್ತೀಚಿಗೆ ಜಪಾನ್​ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ ಮಾಡಿ, ಶಿರಬಾಗಿ ನಮಿಸುವ ಫೋಟೋವನ್ನು ಕಾಂಗ್ರೆಸ್ ಹಂಚಿಕೊಂಡಿದೆ.

ಎಐಸಿಸಿ ಪ್ರಧಾನಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್​ ಮಾಡಿ,

ಮೊದಲು ಉತ್ತರಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು, ಗೋಡ್ಸೆಯನ್ನು ದೇಶಭಕ್ತ ಎಂದಿದ್ದರು. ಇದೀಗ ಗಿರಿರಾಜ್ ಸಿಂಗ್ ಸರದಿ. ಆದರೆ, ಮಹಾತ್ಮರ ಕನ್ನಡಕವನ್ನು ಸ್ವಚ್ಛಭಾರತ್ ಲೋಗೋ ಮಾಡಿದ ವ್ಯಕ್ತಿಯೇ ಇಂದು, ತಮ್ಮ ಸಹೋದ್ಯೋಗಿಗಳ ಮಾತುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತಿಲ್ಲ

ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.