ಮೂಡುಬಿದಿರೆ ತಾಲೂಕಿನಲ್ಲಿ ಹೈಟೆಕ್ ಜೂಜು ಅಡ್ಡೆಗಳ ಹಾವಳಿ – ಸಾರ್ವಜನಿಕರ ಆಕ್ರೋಶ – ಹಾಗೇನಿಲ್ಲ ಅಂತಿದ್ದಾರೆ ಪೊಲೀಸರು

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಜುಗಾರಿ ಅಡ್ಡೆಗಳು ನಡೆಯುತ್ತಿದ್ದರೂ ಪೊಲೀಸರು ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಮೂಡುಬಿದ್ರೆ ತಾಲೂಕಿನ ಸಾರ್ವಜನಿಕರಿಂದ ಕೇಳಿ ಬಂದಿದೆ.

ಮೂಡುಬಿದಿರೆ ಠಾಣಾ ವ್ಯಾಪ್ತಿಯ ಬೆಳುವಾಯಿ, ಕಡಂದಲೆ, ಪುಚ್ಚೇರಿ ಸುತ್ತಮುತ್ತ ಎಗ್ಗಿಲ್ಲದೇ ಜೂಜು ಅಡ್ಡೆ (ಜುಗಾರಿ ಅಡ್ಡೆ) ನಡೆಯುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪ.

ಈ ಜೂಜು ಅಡ್ಡೆಗಳ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದರೂ ಪೊಲೀಸರು ಸಕಾಲಕ್ಕೆ ದಾಳಿ ಮಾಡುತ್ತಿಲ್ಲ. ಜೂಜುಕೋರರಿಗೆ ಪೊಲೀಸರ ಭಯ ಇಲ್ಲವಾಗಿದೆ. ಜೂಜು ದಂಧೆಯಿಂದ ತಾಲೂಕಲ್ಲಿ ಅದೆಷ್ಟೋ ಕುಟುಂಬಗಳು ಬೀದಿಗೆ ಬರುವ ಸ್ಥಿತಿ ನಿರ್ಮಾಣ ಆಗಿದೆ, ಇದಕ್ಕೆ ಆಡಳಿತಾರೂಢ ಜನಪ್ರತಿನಿಧಿಗಳು, ಶಾಸಕರು, ರಾಜಕೀಯ ಪಕ್ಷಗಳ ನಾಯಕರ ಬೆಂಬಲವೂ ಇದೆ ಎನ್ನುವುದು ಸ್ಥಳೀಯರ ಮಾತು.

ಕಳೆದ ಎರಡು ವರ್ಷಗಳಲ್ಲಿ ಮೂಡುಬಿದಿರೆ ಠಾಣಾ ವ್ಯಾಪ್ತಿಯಲ್ಲಿ ಜೂಜು ದಂಧೆ ಹೆಚ್ಚಿದೆ ಎನ್ನುವ ಆರೋಪವೂ ಕೇಳಿಬಂದಿದೆ.

ಪೊಲೀಸರ ಪ್ರತಿಕ್ರಿಯೆ ಏನು..?

ಸಾರ್ವಜನಿಕರ ಈ ಆರೋಪದ ಬಗ್ಗೆ ಪ್ರತಿಕ್ಷಣ ವೆಬ್​ಸೈಟ್​ ಮೂಡುಬಿದಿರೆ ಠಾಣೆಯ ಠಾಣಾಧಿಕಾರಿ ನಿರಂಜನ್​ ಕುಮಾರ್​​ ಅವರ ಪ್ರತಿಕ್ರಿಯೆನ್ನು ಕೇಳಿದಾಗ ಅವರು ಆರೋಪವನ್ನು ನಿರಾಕರಿಸಿದ್ದು, ಮೂಡುಬಿದಿರೆ – ಕಾರ್ಕಳ ಗಡಿಭಾಗದಲ್ಲಿ ಕೆಲವು ಸ್ಥಳಗಳಲ್ಲಿ ಜೂಜು ಆಡ್ತಾರೆ, ಆದರೆ ಅದು ನಮಗೆ ಗೊತ್ತಾಗುವುದಿಲ್ಲ ಎಂದು ಪೊಲೀಸ್​ ಅಧಿಕಾರಿ ನಿರಂಜನ್​ ಕುಮಾರ್​ ಒಪ್ಪಿಕೊಂಡರು.

ನಮಗೆ ಸಿಕ್ಕ ಮಾಹಿತಿ ಆಧಾರದಲ್ಲಿ ನಾವು ಸ್ಥಳಗಳ ಮೇಲೆ ದಾಳಿ ನಡೆಸಿದ್ದೇವೆ. ಆದರೆ ಅಲ್ಲಿ ಜೂಜು ಅಡ್ಡೆ ನಡೆದಿರುವುದು ಕಂಡಿಲ್ಲ. ಒಂದು ವೇಳೆ ಜೂಜು ಅಡ್ಡೆ ಕಂಡುಬಂದರೆ ನಾವು ಮುಲಾಜಿಲ್ಲದೇ ಕ್ರಮಕೈಗೊಳ್ತ ಇದ್ವಿ. ಮಾಹಿತಿ ಇದ್ರೆ ಪಕ್ಕ ರೈಡ್​ ಮಾಡ್ತೀವಿ.ಸದ್ಯಕ್ಕೆ ಯಾವುದೂ ಇಲ್ಲ ಅಲ್ಲಿ. ವೀಡಿಯೋ ಮತ್ತು ಲೋಕೇಷನ್​ ಕಳುಹಿಸಿದವರು ಯಾವಾಗ ನಮಗೆ ಕಳ್ಸಿದ್ರೋ ಗೊತ್ತಿಲ್ಲ. ನಮಗೆ ಮೊದಲೇ ಮಾಹಿತಿ ಕೊಟ್ರೆ ಒಳ್ಳೆಯದು ಎಂದು ಪ್ರತಿಕ್ಷಣಕ್ಕೆ ಪ್ರತಿಕ್ರಿಯಿಸಿದರು.