ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕ ರಾಜ್ಯ ಸೇರಿ ಒಟ್ಟು 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಒಟ್ಟು 1,206 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕರ್ನಾಟಕದ 14 ಕ್ಷೇತ್ರಗಳಲ್ಲಿ 247 ಅಭ್ಯರ್ಥಿಗಳ ಭವಿಷ್ಯ ನಾಳೆ ಮತಯಂತ್ರದಲ್ಲಿ ಭದ್ರವಾಗಲಿದೆ.
ಶುಕ್ರವಾರ ಬೆಳಗ್ಗೆ 7 ಗಂಟೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಈಗಾಗಲೇ ಚುನಾವಣಾ ಆಯೋಗ ಅಂತಿಮ ಹಂತದ ಸಿದ್ಧತೆ ಮುಗಿಸಿದ್ದು, 14 ಲೋಕಸಭಾ ಕ್ಷೇತ್ರಗಳಲ್ಲಿ ಮಸ್ಟರಿಂಗ್ ಮಾಡುತ್ತಿದೆ. ಬೆಂಗಳೂರಿನ ಸೆಂಟ್ ಜೋಸೆಫ್ ಹೈಸ್ಕೂಲ್ನ ಮಸ್ಟರಿಂಗ್ ಸೆಂಟರ್ನಲ್ಲಿ ಮತಯಯಂತ್ರ ವಿತರಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 8ಸಾವಿರದ 984 ಮತಗಟ್ಟೆಗಳಿದ್ದು, ಸಿಬ್ಬಂದಿ ಇಂದು ಸಂಜೆಯೇ ಮತಗಟ್ಟೆ ತಲುಪಲಿದ್ದಾರೆ. ಮತಯಂತ್ರ ಸ್ವೀಕರಿಸುವ ವೇಳೆ ಮಸ್ಟರಿಂಗ್ ಕೇಂದ್ರದಲ್ಲೇ ಸಿಬ್ಬಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮಲ್ಲೇಶ್ವರಂನ ಪದವಿ ಪೂರ್ವ ಕಾಲೇಜಿನಲ್ಲೂ ಸ್ಟ್ರಾಂಗ್ ರೂಮ್ ತೆರೆದು ಸಿಬ್ಬಂದಿಗೆ ಇವಿಎಂ ಹಂಚಿಕೆ ಮಾಡಲಾಗಿದೆ. ಇವಿಎಂ ವಿವಿಪ್ಯಾಟ್, ವೋಟರ್ ಲಿಸ್ಟ್, ಶಾಯಿ ವಿತರಿಸಲಾಗಿದೆ.
ನಾಳೆ ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಮತದಾನ ನಡೆಯಲಿದ್ದು. ಎಲ್ಲಾ ಕ್ಷೇತ್ರದಲ್ಲೂ ಭರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇನ್ನೂ ಬೆಂಗಳೂರಿನಲ್ಲಿ 13 ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, 14 ಕ್ಷೇತ್ರಗಳಲ್ಲಿ ಒಟ್ಟು 2,88,19,342 ಮತದಾರರಿದ್ದಾರೆ. ಈ ಪೈಕಿ 1,44,17,530 ಪುರುಷ ಮತದಾರರು, 1,43,87,585 ಮಹಿಳಾ ಮತದಾರರಿದ್ದಾರೆ.
ಮತಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ, ಮತದಾನದ ವೇಳೆ ವೇಳೆ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮನ್ರೆಗಾ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಡ್ರೈವಿಂಗ್ ಲೈಸೆನ್ಸ್ ತೋರಿಸಿ ಕೂಡ ಮತದಾನದ ಹಕ್ಕು ಚಲಾಯಿಸಬಹುದು. 30,600 ಮತಗಟ್ಟೆಗಳ ಪೈಕಿ 19,701 ಮತಗಟ್ಟೆಗಳಲ್ಲಿ ಲೈವ್ವೆಬ್ಕಾಸ್ಟ್ ಇರಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಎಲೆಕ್ಷನ್ ಡ್ಯೂಟಿಗಾಗಿ ಚುನಾವಣಾ ಆಯೋಗ ಕೆಎಸ್ಆರ್ಟಿಸಿ,ಬಿಎಂಟಿಸಿ, ಖಾಸಗಿ ಬಸ್ ಮತ್ತು ಶಾಲಾ ವಾಹನಗಳೂ ಸೇರಿದಂತೆ 3,800 ಬಸ್ಗಳನ್ನ ಬಳಸಿಕೊಳ್ಳುತ್ತಿದೆ.