ರಾಜ್ಯ ಬಿಜೆಪಿ ರಾಜಕಾರಣ ದೆಹಲಿಗೆ ಶಿಫ್ಟ್ ಆಗಿದ್ದು, ಕ್ಷಣ ಕ್ಷಣಕ್ಕೂ ನಿಗೂಢತೆ ಹೆಚ್ಚಾಗುತ್ತಿದೆ. ಒಂದು ದಿನದ ಸಲುವಾಗಿ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನ ಕಳೆದರೂ ಬೆಂಗಳೂರು ಹಾದಿಯಿಡಿಯುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ರಾತ್ರಿ 9 ಗಂಟೆಯ ವಿಮಾನದಲ್ಲಿ ಬೆಂಗಳೂರಿಗೆ ಹೊರಡುತ್ತಾರೆ ಎಂದು ಹೇಳಲಾಗುತ್ತಿದ್ದರೂ, ಖಚಿತವಿಲ್ಲ.
ಇಂದು ಕೇಂದ್ರ ಗೃಹಮಂತ್ರಿ ಅಮಿತ್ ಶಾರನ್ನು ಕೇಂದ್ರದ ಮತ್ತೊಬ್ಬ ಸಚಿವ ಪ್ರಹ್ಲಾದ್ ಜೋಷಿ ಜೊತೆ ಭೇಟಿ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹತ್ವದ ಚರ್ಚೆ ನಡೆಸಿದ್ದರು. ಅಮಿತ್ ಶಾ ಭೇಟಿ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು,
ಮುಂದಿನ ಒಂದು ವಾರ ಬಹಳ ಮುಖ್ಯ. ನಮ್ಮ ರಾಜ್ಯದ ರಾಜಕೀಯ ಸ್ಥಿತಿಗತಿಗಳನ್ನು ಆಧರಿಸಿ ಕೆಲ ಬದಲಾವಣೆ ಆಗಬಹುದು
ಎಂದು ಹೇಳುವ ಮೂಲಕ ಕುತೂಹಲ ಹುಟ್ಟಿಸಿದ್ದಾರೆ.
ಈ ಬೆಳವಣಿಗೆಗಳ ನಡುವೆ, ದಿಢೀರ್ ಬೆಳವಣಿಗೆಯಲ್ಲಿ ಹೈಕಮಾಂಡ್ ಬುಲಾವ್ ಮೇರೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ಮತ್ತು ಆರ್ ಎಸ್ಎಸ್ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸುವ ಅರಗ ಜ್ಞಾನೇಂದ್ರ ಅವರಿಗೆ ಪದೋನ್ನತಿ ಕಾದಿದೆಯೋ? ಅಥವಾ ತಲೆದಂಡ ಕಾದಿದೆಯೋ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ರಾಜ್ಯ ಬಿಜೆಪಿಯಲ್ಲಿ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.