ಟ್ರೆಂಡ್ ಆಯ್ತು #ByeByeBJP ಹ್ಯಾಷ್​ ಟ್ಯಾಗ್

ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ಚುನಾವಣಾ ಕಣ ಇನ್ನಷ್ಟು ರಂಗೇರಿದೆ. ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಮನೆ ಮನೆ ಪ್ರಚಾರದ ಜೊತೆಗೆ ಸೋಷಿಯಲ್ ಮೀಡಿಯಾಗಳನ್ನು ಬಳಸಿಕೊಳ್ಳತೊಡಗಿವೆ. ಈ ವಿಚಾರದಲ್ಲಿ ಆಡಳಿತ ಪಕ್ಷ ಬಿಜೆಪಿಗಿಂತ ವಿರೋಧ ಪಕ್ಷ ಕಾಂಗ್ರೆಸ್ ಮುಂದಿದೆ. ಬಿಜೆಪಿ ವಿರುದ್ಧ 40ಪರ್ಸೆಂಟ್ ಅಸ್ತ್ರ ಸೇರಿ ಹಲವು ಅಸ್ತ್ರಗಳನ್ನು ಪ್ರಯೋಗಿಸಿದೆ. ಇವೀಗ ಟ್ರೆಂಡ್ ಆಗಿವೆ.

#ByeByeBJP ಎಂಬ ಹ್ಯಾಶ್​ ಟ್ಯಾಗ್ ಬಳಸಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಟ್ವಿಟ್ಟರ್ ಅಭಿಯಾನ ನಡೆಸಿದ್ದಾರೆ. ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಸಾರುವ ವೀಡಿಯೋ, ಚಿತ್ರ, ವ್ಯಂಗ್ಯ ಚಿತ್ರ, ಮಾಧ್ಯಮ ವರದಿ ಮತ್ತು ಇತರೆ ಬರಹಗಳನ್ನು ಬಳಸಿಕೊಂಡಿರುವ ಕಾಂಗ್ರೆಸ್ ಸರಣಿ ಟ್ವೀಟ್​ ಮಾಡುತ್ತಿದೆ.

ಬಿಜೆಪಿ ನಾಯಕರ ದ್ವೇಷ ಭಾಷಣ, ಕೋಮು ಗಲಭೆ, ನಂದಿನಿ-ಅಮೂಲ್ ವಿವಾದ, ಪೆಸಿಎಂ, ರಸ್ತೆ ಗುಂಡಿ, ಹಿಜಬ್, ಹಲಾಲ್ ಕಟ್, 40 ಪರ್ಸೆಂಟ್ ಕಮೀಷನ್, ಚನ್ನಗಿರಿಯ ಬಿಜೆಪಿ ಶಾಸಕರ ಕೆಎಸ್​ಡಿಎಲ್ ಹಗರಣ, ನಿರುದ್ಯೋಗ ಸೇರಿದಂತೆ ಹಲವು ವಿಚಾರ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಅಭಿಯಾನ ನಡೆಸಿದೆ.

40 ಪರ್ಸೆಂಟ್ ಕಮೀಷನ್ ಸರ್ಕಾರಕ್ಕೆ ನನ್ನ ಮತ ಇಲ್ಲ ಎನ್ನುವ ಪೋಸ್ಟರ್ ಹಿಡಿದ ಹಲವರು ವಿಧಾನಸೌಧದ ಮುಂದೆಯೇ ಪೋಸ್ ನೀಡಿದ್ದಾರೆ.

ಈ ಟ್ವಿಟ್ಟರ್ ಅಭಿಯಾನದಲ್ಲಿ ಕೆಪಿಸಿಸಿ, ಯುವ ಕಾಂಗ್ರೆಸ್ ನಾಯಕರು, ಕೇರಳ ಕಾಂಗ್ರೆಸ್​,​ ರಾಜಸ್ಥಾನ ಕಾಂಗ್ರೆಸ್ ಸೇವಾದಳ, ರಾಷ್ಟ್ರೀಯ ನಾಯಕಿ ಅಲ್ಕಾ ಲಂಬಾ ಸೇರಿ ಅನೇಕರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.