KA-01 F 232.. ಒಂದು ಹೃದಯಸ್ಪರ್ಷಿ ಕಥನ

ಅಮೆರಿಕಾದಲ್ಲಿ ಉನ್ನತ ಹುದ್ದೆಯಲ್ಲಿರುವ ಬೆಂಗಳೂರಿನ ಚೆಂಗಪ್ಪ ಕನ್ನಡ ನೆಲದ ಮಣ್ಣಿನ ವಾಸನೆಯನ್ನು ಮರೆತಿಲ್ಲ. ಅದರಲ್ಲೂ ತಾವು ಕಲಿತ ಶಾಲೆಗೆ ನಿತ್ಯವೂ ಓಡಾಡುತ್ತಿದ್ದ ಬಿಎಂಟಿಸಿ ಬಸ್ ಅನ್ನು ನೆನಪಿನ ಅಂಗಳದಿಂದ ತೆಗೆದುಹಾಕಿಲ್ಲ. ಆ ನೆನಪು ನಿತ್ಯನೂತನವಾಗಿರ ಇರಬೇಕೆಂಬ ಉದ್ದೇಶದಿಂದ ತಾವು ಬಾಲ್ಯದಲ್ಲಿ ಶಾಲೆಗೆ ಓಡಾಡುತ್ತಿದ್ದ ಬಸ್ ನೋಂದಣಿ ನಂಬರ್ ಅನ್ನೇ ತಮ್ಮ ಕಾರಿಗೆ ಹಾಕಿಸಿಕೊಂಡಿದ್ದಾರೆ. ಈ ಹೃದಯಸ್ಪರ್ಷಿ ಕಥನದ ಬಗ್ಗೆ ಲೇಖಖರಾದ ಶ್ರೀವತ್ಸ ಜೋಶಿಯವರು ತಮ್ಮ ಫೇಸ್ಬುಕ್ ಗೋಡೆಯ ಮೇಲೆ ಅನಾವರಣ ಮಾಡಿದ್ದಾರೆ.

ಅಟ್ಟ ಹತ್ತಿದ ಮೇಲೆ ಏಣಿ ಮರೆಯುವವರು ಅನೇಕರಿರುತ್ತಾರೆ, ಕೆಲವೊಮ್ಮೆ ನಾವೂ ಅಂಥವರಲ್ಲೊಬ್ಬರಾಗುವುದೂ ಇದೆ.

ಆದರೆ “ಅಟ್ಟ ಹತ್ತಿದ ಮೇಲೆ ಏಣಿ ಮರೆಯದೇ ಇರುವವರು” ಬದುಕಿನಲ್ಲಿ ಸಿಕ್ಕಿದಾಗ ಅವರ ಬಗ್ಗೆ ಸಹಜವಾಗಿ ಅಭಿಮಾನ, ಗೌರವ ಮೂಡುತ್ತದೆ. ನಮಗೆ ಪ್ರೇರಣೆಯಾಗುತ್ತದೆ. ಇದು ಅಂಥದೊಂದು ಹೃದಯಸ್ಪರ್ಶಿ ಪ್ರಸಂಗ.

ಚೆಂಗಪ್ಪ ಎಂಬ ಕನ್ನಡಿಗ, ಈಗ ಅಮೆರಿಕದ ಕ್ಯಾಲಿಫೋರ್ನಿಯಾ ನಿವಾಸಿ, ತಾನು ಹೊಸದಾಗಿ ಕೊಂಡಿರುವ ಟೆಸ್ಲಾ ಕಾರ್‌ನ ರಿಜಿಸ್ಟ್ರೇಷನ್ ನಂಬರ್ “KA1F232” ಎಂದು ಇಟ್ಟುಕೊಂಡಿರುವುದು, 1990ರ ದಶಕದಲ್ಲಿ ತಾನು ಬೆಂಗಳೂರಿನಲ್ಲಿ ಶಾಲೆಗೆ ಹೋಗುವಾಗ ದಿನಾ ಬಳಸುತ್ತಿದ್ದ “KA-01 F 232” ರಿಜಿಸ್ಟ್ರೇಷನ್ ನಂಬರ್‌ನ ಬಿಎಂಟಿಸಿ ಬಸ್ ಮತ್ತು ಅದರ ಡ್ರೈವರ್ ಆಗಿದ್ದ ಧನಪಾಲ್ ಮಂಚೇನಹಳ್ಳಿ ಅವರ ಮೇಲಿನ ಅಭಿಮಾನದಿಂದ!

ಕೆಂಪು ಬಣ್ಣದ ಟೆಸ್ಲಾ ಕಾರ್‌ನ ಬಳಿ ನಿಂತು ಚೆಂಗಪ್ಪ ಅಭಿಮಾನದಿಂದ ಮಾತನಾಡಿರುವುದನ್ನೂ, ಆ ವಿಡಿಯೊವನ್ನು ತನ್ನ ಬಾಲ್ಯದ ಹೀರೊ ಬಿಎಂಟಿಸಿ ಬಸ್ ಡ್ರೈವರ್ ಧನಪಾಲ್ ಅವರಿಗೆ ಕಳುಹಿಸಿ ಅವರು ಫೇಸ್‌ಬುಕ್‌ನಲ್ಲಿ ಅದರ ಜೊತೆಗೆ ಆಗಿನ ಆ ಬಸ್ಸಿನ ಫೋಟೊ ಮತ್ತು ಒಂದು ಚಿಕ್ಕ ಟಿಪ್ಪಣಿ ಪೋಸ್ಟ್ ಮಾಡಿರುವುದನ್ನೂ ನೀವು ನೋಡಲೇಬೇಕು!

“ನಾನು 1992ರಲ್ಲಿ ಬಿಎಂಟಿಸಿ ಘಟಕ 11ರಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುವಾಗ ಅನೇಕ ಶಾಲಾ ಮಕ್ಕಳಿಗೆ ನನ್ನ ಬಸ್ಸೆಂದರೆ ತುಂಬಾ ಅಚ್ಚುಮೆಚ್ಚಾಗಿತ್ತು. ಆ ಮಕ್ಕಳಲ್ಲಿ ಚೆಂಗಪ್ಪ ಮತ್ತು ಆದಿತ್ಯ ಎಂಬ ಹುಡುಗರಂತೂ ನನ್ನ ವಾಹನದ ಬಾನೆಟ್ ಮೇಲೆ ಕುಳಿತು ಅನೇಕ ವರ್ಷಗಳು ಶಾಲೆಗೆ ಪ್ರಯಾಣ ಮಾಡಿದ್ದಾರೆ. ಆದಿತ್ಯ ಈಗ ಜರ್ಮನಿಯಲ್ಲಿದ್ದಾನೆ. ಚೆಂಗಪ್ಪ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿದ್ದಾನೆ. ಇತ್ತೀಚಿಗೆ ಅವನು ಒಂದು ಕಾರನ್ನು ಖರೀದಿಸಿದ್ದಾನೆ, ಅದರ ನಂಬರ್ ಆಗ ನಾನು ಚಲಾಯಿಸುತ್ತಿದ್ದ ಬಿಎಂಟಿಸಿ ಬಸ್ಸಿನ ನಂಬರನ್ನೇ ತೆಗೆದುಕೊಂಡಿದ್ದಾನೆ. ಈಗಲೂ ಅವನು ನನ್ನ ಸಂಪರ್ಕದಲ್ಲಿದ್ದಾನೆ. ಅವನ ಅಭಿಮಾನಕ್ಕೆ ನಾನು ಚಿರಋಣಿ.

ಕೆ. ಧನಪಾಲ್.”

ನಾವು ಯಾರುಯಾರೋ ‘ರೀಲ್’ ಹೀರೊಗಳ ಮೇಲೆ ಅಭಿಮಾನ ಇಟ್ಟುಕೊಳ್ಳುತ್ತೇವೆ; ಅದಕ್ಕಿಂತ, ಶ್ರಮಜೀವಿಯಾಗಿ ಪ್ರಾಮಾಣಿಕ ದುಡಿಮೆಯಿಂದ ಎಲ್ಲರ ಪ್ರೀತಿ ಗಳಿಸುವ ಒಬ್ಬ ಸಾಮಾನ್ಯ ಬಸ್ ಡ್ರೈವರ್ ’ರಿಯಲ್’ ಹೀರೊ ಎನ್ನುವ ಅಭಿಮಾನ ಹೆಚ್ಚು ತೂಕದ್ದು ಎಂದು ನನಗಂತೂ ಅನಿಸುತ್ತದೆ. ಈ ಪ್ರಸಂಗದಿಂದ ಅದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ . ಚೆಂಗಪ್ಪ ಮತ್ತು ಧನಪಾಲ್ ಇಬ್ಬರಿಗೂ ಅಭಿನಂದನೆಗಳು ಮತ್ತು ಶುಭಹಾರೈಕೆಗಳು. ಅಂತೆಯೇ ಫೇಸ್‌ಬುಕ್‌ನಲ್ಲಿ ಇದು ನನ್ನ ಕಣ್ಣಿಗೆ ಬೀಳುವುದಕ್ಕೆ ಕಾರಣರಾದ ಸನ್ಮಿತ್ರ ಸುದರ್ಶನ್ ರೆಡ್ಡಿಯವರಿಗೂ ಧನ್ಯವಾದ.

– ಶ್ರೀವತ್ಸ ಜೋಶಿ. ವಾಷಿಂಗ್ಟನ್ ಡಿಸಿ. 4ಮೇ2023.