ಯಡಿಯೂರಪ್ಪನವರೇ ಅದಕ್ಕೊಂದು ಅವಕಾಶ ಮಾಡಿಕೊಡಿ – ಡಿಕೆಶಿ ವಾರ್ನಿಂಗ್‌

ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಡಿ ಕೆ ಶಿವಕುಮಾರ್‌ ಮತ್ತು ಅನರ್ಹ ಶಾಸಕರೂ ಆಗಿರುವ ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ ಕೆ ಸುಧಾಕರ್‌ ನಡುವೆ ಪ್ರತಿಷ್ಟೆಯ ಪ್ರಶ್ನೆಯಾಗಿ ಮಾರ್ಪಟ್ಟಿರುವ ಕನಕಪುರ ವೈದ್ಯಕೀಯ ಕಾಲೇಜು ವಿಷಯಕ್ಕೆ ಮತ್ತೆ ಜೀವ ಬಂದಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ವಾಪಸ್‌ ಕೊಡುವಂತೆ ಆಗ್ರಹಿಸಿ ಡಿಕೆಶಿ ಸಿಎಂ ಬಿಎಸ್‌ವೈಗೆ ಪತ್ರ ಬರೆದಿದ್ದಾರೆ.

ಕನಕಪುರಕ್ಕೆ ವೈದ್ಯಕೀಯ ಕಾಲೇಜನ್ನು ವಾಪಸ್‌ ಕೊಡಬೇಕು ಮತ್ತು ಈ ಸಂಬಂಧ ಕಾಮಗಾರಿ ಆರಂಭಕ್ಕೆ ಭೂಮಿ ಪೂಜೆಗೆ ದಿನಾಂಕ ನಿಗದಿ ಮಾಡಬೇಕು.  ಒಂದು ವೇಳೆ ದ್ವೇಷ ರಾಜಕಾರಣವೇ ನಿಮ್ಮ ಏಕಮಾತ್ರ ಉದ್ದೇಶವಾಗಿದ್ದರೆ ಕನಕಪುರ ಜನತೆಗೆ ನ್ಯಾಯ ಒದಗಿಸುವ ಸಲುವಾಗಿ ನಾನು ನನ್ನದೇ ರೀತಿಯಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ನೀವು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ನಾನು ಭಾವಿಸಿದ್ದೇನೆ

ಎಂದು ಯಡಿಯೂರಪ್ಪಗೆ ಬರೆದಿರುವ ಪತ್ರದಲ್ಲಿ ಡಿಕೆಶಿ ಎಚ್ಚರಿಸಿದ್ದಾರೆ.

ಉಪ ಚುನಾವಣೆ ನೀತಿ ಸಂಹಿತೆ ಜಾರಿ ಆಗುವುದಕ್ಕೆ ಒಂದು ದಿನ ಮೊದಲು ಚಿಕ್ಕಬಳ್ಳಾಪುರದಲ್ಲಿ ಕಾಲೇಜಿಗಾಗಿ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಉಪ ಚುನಾವಣೆಯಲ್ಲೂ ಸುಧಾಕರ್‌ ಇದೇ ವಿಷಯವನ್ನು ಚುನಾವಣಾ ಅಸ್ತ್ರವಾಗಿ ಮಾಡಿಕೊಂಡಿದ್ದರು. ಆದರೆ ತಾಲೂಕಿಗೊಂದು ವೈದ್ಯಕೀಯ ಕಾಲೇಜು ಕೊಡಲು ಸಾಧ್ಯವಿಲ್ಲ ಎನ್ನುವುದು ಬಿಜೆಪಿ ಸರ್ಕಾರದ ವಾದ.

ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದ ನಿಮ್ಮಂತಹವರೇ ಏಕವ್ಯಕ್ತಿ ಸರ್ಕಾರದಲ್ಲಿ ಕನಕಪುರಕ್ಕೆ ಮೀಸಲಾಗಿದ್ದ ವೈದ್ಯಕೀಯ ಕಾಲೇಜನ್ನು ರಾತ್ರೋರಾತ್ರಿ ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಿ ನಿರ್ಧಾರ ತೆಗೆದುಕೊಂಡಿದ್ರಿ ಎಂಬುದನ್ನು ತಿಳಿದು ನನಗೆ ಆಘಾತವಾಗಿದೆ. ಕರ್ನಾಟಕದ ಯಾವುದೇ ಭಾಗದ ವೈದ್ಯಕೀಯ ಕಾಲೇಜು ಅನುದಾನವನ್ನು ರದ್ದು ಮಾಡದೆಯೇ ಕನಕಪುರಕ್ಕೆ ವೈದ್ಯಕೀಯ ಕಾಲೇಜು ಕೊಡಲಾಗಿತ್ತು ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ.

ನೀವು ಬಸವಣ್ಣನ ಅನುಯಾಯಿ ಎಂದು ಹೇಳುತ್ತಿದ್ದ ಅವರ ತತ್ವಗಳ ಪ್ರಕಾರವೇ ನೀವು ಕೆಲಸ ಮಾಡುತ್ತಿದ್ದೀರಿ ಎನ್ನುತ್ತಿದ್ದರೂ ಇತ್ತೀಚಿಗೆ ಬೇರೆಯದ್ದೇ ಬೆಳವಣಿಗೆ ಆಗುತ್ತಿದೆ.

ನಂಜುಡಪ್ಪ ಸಮಿತಿ ವರದಿ ಪ್ರಕಾರ ಕನಕಪುರ ಹಿಂದುಳಿದ ತಾಲೂಕು ಆಗಿದ್ದು ವಿರೋಧ ಪಕ್ಷದ ನಾಯಕರಾಗಿ ನೀವು ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ವೈದ್ಯಕೀಯ ಕಾಲೇಜು ಕೊಡುವುದಕ್ಕೆ ಒಪ್ಪಿಗೆ ನೀಡಿದ್ದೀರಿ. ಬಳಿಕ ಸರ್ಕಾರ ಡಿಸೆಂಬರ್‌ ೧೩, ೨೦೧೮ರಲ್ಲಿ ಕನಕಪುರದಲ್ಲಿ ಕಿಮ್ಸ್‌ ಸ್ಥಾಪನೆಗೆ ಒಪ್ಪಿಗೆ ನೀಡಿತ್ತು. ಕಾಲೇಜಿಗೆ ಬೇಕಾದ ೨೫ ಎಕರೆ ಭೂಮಿಯನ್ನು ನೀಡಲು ಕರ್ನಾಟಕ ಗೃಹ ಮಂಡಳಿ ಒಪ್ಪಿಗೆ ನೀಡಿತ್ತು ಮತ್ತು ಕಾಮಗಾರಿಗಾಗಿ ಟೆಂಡರ್‌ನ್ನು ಕರೆಯಲಾಗಿತ್ತು. ಭೂಮಿ ಪೂಜೆಗೆ ನಾನು ನಿಮ್ಮನ್ನು ಕರೆಯಬೇಕು ಎಂದುಯ ಅಂದುಕೊಂಡಿದ್ದೆ

ಎಂದು ಕನಕಪುರ ಶಾಸಕರೂ ಆಗಿರುವ ಡಿಕೆ ಶಿವಕುಮಾರ್‌ ೨ ಪುಟಗಳ ಪತ್ರದಲ್ಲಿ ಯಡಿಯೂರಪ್ಪಗೆ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here