ಅಹಿಂದ ಸಮುದಾಯಕ್ಕೆ ಸೇರಿದ ಪ್ರಮುಖರಿಗೆ ಸಚಿವ ಸ್ಥಾನ ನೀಡುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಅಲ್ಪಸಂಖ್ಯಾತ, ದಲಿತ ಮತ್ತು ಲಿಂಗಾಯತ ಸಮುದಾಯದ ಪ್ರಮುಖರಿಗೆ ಯಾವುದೇ ಕಾರಣಕ್ಕೂ ಸಚಿವ ಸ್ಥಾನ ನೀಡದಂತೆ ಡಿಕೆಶಿವಕುಮಾರ್ ಹೈಕಮಾಂಡ್ ಎದುರು ಪಟ್ಟು ಹಿಡಿದಿದ್ದಾರೆ.
ದಲಿತ ಸಮುದಾಯದ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ, ಲಿಂಗಾಯತ ಸಮುದಾಯದ ಬಸವರಾಯ ರಾಯರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಅಹಿಂದ ಮತಗಳ ಕ್ರೋಢೀಕರಣದ ಹಿಂದೆ ಪ್ರಮುಖ ಪಾತ್ರ ವಹಿಸಿದ್ದ ಹೆಚ್ ಸಿ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ನೀಡಲು ಡಿಕೆಶಿ ವಿರೋಧಿಸಿರುವುದು ದಲಿತ ಸಮುದಾಯದ ಕೆಂಗಣ್ಣಿಗೆ ಕಾರಣವಾಗಿದೆ.
ಸಂತೋಷ್ ಲಾಡ್ಗೂ ವಿರೋಧ:
ಕಲಘಟಗಿ ಶಾಸಕ ಸಂತೋಷ್ ಲಾಡ್ಗೆ ಸಚಿವ ಸ್ಥಾನ ನೀಡದಂತೆ ದೆಹಲಿಯಲ್ಲಿ ಡಿಕೆಶಿವಕುಮಾರ್ ಪ್ರಯತ್ನ ತೀವ್ರಗೊಳಿಸಿದ್ದಾರೆ. ಆದ್ರೆ ಸಿದ್ದರಾಮಯ್ಯ ಆಪ್ತ ವಲಯದಲ್ಲಿರುವ ಸಂತೋಷ್ ಲಾಡ್ಗೆ ಸಚಿವ ಸ್ಥಾನ ಸಿಗುವುದು ಖಚಿತ ಎಂದು ಮೂಲಗಳು ತಿಳಿಸಿವೆ.
ಲಕ್ಷ್ಮೀ ಹೆಬ್ಬಾಳ್ಕರ್ಗೆ ಸಚಿವ ಸ್ಥಾನ ಸಾಧ್ಯತೆ:
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ.
ಜಮೀರ್, ಎಂಬಿ ಪಾಟೀಲ್ಗೂ ವಿರೋಧಿಸಿದ್ದ ಡಿಕೆಶಿ:
ಮೇ 20ರಂದು ಮೊದಲ ಪ್ರಮಾಣವಚನದ ವೇಳೆ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದನ್ನು ವಿರೋಧಿಸಿ ಡಿಕೆಶಿ ಪಟ್ಟು ಹಿಡಿದಿದ್ದರು. ಯಾವುದೇ ಕಾರಣಕ್ಕೂ ಜಮೀರ್ಗೆ ಸಚಿವ ಸ್ಥಾನ ನೀಡಕೂಡದು ಎಂದು ಡಿಕೆಶಿ ಹಠ ಹಿಡಿದಿದ್ದರು.
ವಿಧಾನಭಾ ಚುನಾವಣೆಯಲ್ಲಿ ಜಮೀರ್ ಅಹ್ಮದ್ ಖಾನ್ 100 ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪಕ್ಷದ ಗೆಲುವಿಗೆ ಕೆಲಸ ಮಾಡಿದ್ದಾರೆ. ಒಂದು ವೇಳೆ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ ಅಂದ್ರೆ ಮುಸಲ್ಮಾನ ಸಮುದಾಯಕ್ಕೆ ಬೇರೆಯದ್ದೇ ಸಂದೇಶ ರವಾನೆ ಆಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೈಕಮಾಂಡ್ಗೆ ಎಚ್ಚರಿಕೆ ಕೊಟ್ಟ ಬಳಿಕ ಜಮೀರ್ ಹೆಸರು ಮೊದಲ ಪಟ್ಟಿಯಲ್ಲಿ ಅಂತಿಮಗೊಂಡಿತ್ತು.
ಎಂಬಿ ಪಾಟೀಲ್ಗೂ ವಿರೋಧ:
ಎಂಬಿ ಪಾಟೀಲ್ ಅವರಿಗೂ ಸಚಿವ ಸ್ಥಾನ ಕೊಡುವುದಕ್ಕೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದರು. ಎಂಬಿ ಪಾಟೀಲ್ಗೆ ಸಚಿವ ಸ್ಥಾನ ಕೊಟ್ಟರೆ ಭವಿಷ್ಯದಲ್ಲಿ ತಮ್ಮ ಪ್ರತಿಸ್ಪರ್ಧಿ ಆಗ್ತಾರೆ ಎಂಬ ಆತಂಕ ಡಿಕೆಶಿ ಅವರದ್ದು.
ಆದರೆ ಎಂಬಿ ಪಾಟೀಲ್ ಕಾಂಗ್ರೆಸ್ನಲ್ಲಿ ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿದ್ದು ಅವರಿಗೆ ಸಚಿವ ಸ್ಥಾನ ಕೊಡಲೇಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ ಬಳಿಕವಷ್ಟೇ ಅವರ ಹೆಸರು ಮೊದಲ ಪಟ್ಟಿಯಲ್ಲಿ ಅಂತಿಮಗೊಂಡಿತ್ತು.
ADVERTISEMENT
ADVERTISEMENT