ಡಿಕೆಶಿವಕುಮಾರ್​ ಎಂಬ ಅಹಿಂದ ವಿರೋಧಿ – ಎಲ್ಲವೂ ನನ್ನಿಂದಲೇ, ಎಲ್ಲವೂ ನನಗೊಬ್ಬನಿಗೇ ಬೇಕು,,!

ಅಹಿಂದ ಮತಗಳಿಂದಲೇ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​​ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​ ಅವರನ್ನು ಮನವೊಲಿಸುವ, ಡಿಕೆಶಿ ಅವರನ್ನು ಓಲೈಕೆ ಮಾಡುವ ಭರದಲ್ಲಿ ಈ ಚುನಾವಣೆಯಲ್ಲಿ ತಮ್ಮ ಬೆನ್ನಿಗೆ ಬಂಡೆಯಾಗಿ ನಿಂತ ಪ್ರಮುಖ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಒಂದು ವೇಳೆ ಮುಖ್ಯಮಂತ್ರಿ ಆಗದಿದ್ದರೆ ತಾವೊಬ್ಬರೇ ಉಪ ಮುಖ್ಯಮಂತ್ರಿ ಆಗಬೇಕೆಂಬ ಹಠದಲ್ಲಿ ಡಿಕೆಶಿವಕುಮಾರ್​ ಅವರು ಉಳಿದ ಸಮುದಾಯದ ನಾಯಕರನ್ನು ಉಪ ಮುಖ್ಯಮಂತ್ರಿ ಮಾಡಬಾರದೆಂದು ಹಿಡಿದ ಹಠಕ್ಕೆ ಕಾಂಗ್ರೆಸ್​ ರಾಷ್ಟ್ರೀಯ ನಾಯಕರು ಶರಣಾಗಿದ್ದಾರೆ.

ಡಿಕೆಶಿ ಅವರ ಈ ಹಠಮಾರಿ ಧೋರಣೆಯಿಂದ ದಲಿತ, ಲಿಂಗಾಯತ, ಮುಸಲ್ಮಾನ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುತ್ತಿಲ್ಲ.

ನಾನು ಮುಖ್ಯಮಂತ್ರಿ ಆಗದಿದ್ದರೂ ಪರ್ವಾಗಿಲ್ಲ, ಅಹಿಂದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬಾರದೆಂಬ ಹಠಮಾರಿತನದಲ್ಲಿ ನೀವೇ ಸಿಎಂ ಆಗಿ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೇಳಿದ್ದ ಡಿಕೆಶಿ ಈಗ ಪ್ರಮುಖ ಸಮುದಾಯಗಳ ನಾಯಕರು ಉಪ ಮುಖ್ಯಮಂತ್ರಿ ಆಗದಂತೆ ತಡೆದಿದ್ದಾರೆ.

ಕಾಂಗ್ರೆಸ್​​ ಅಧಿಕಾರಕ್ಕೆ ಬರಲು ಡಿಕೆಶಿಯೊಬ್ಬರೇ ಕಾರಣರಲ್ಲ:

ಮೇ 13ರಂದು ಫಲಿತಾಂಶ ಬಂದ ಬಳಿಕ ಡಿಕೆಶಿ ಅವರ ವರಸೆಯೇ ಬದಲಾಗಿದೆ. ಮತದಾನದವರೆಗೂ ಸಾಮೂಹಿಕ ನಾಯಕತ್ವದ ವಾದ ಮಾಡುತ್ತಿದ್ದ ಡಿಕೆಶಿ ಕಾಂಗ್ರೆಸ್​ ಪ್ರಚಂಡ ಬಹುಮತ ಬಂದ ಬಳಿಕ ತಮ್ಮಿಂದಲೇ ಕಾಂಗ್ರೆಸ್​ ಚುನಾವಣೆ ಗೆದ್ದಿದೆ ಎಂಬ ವಕಾಲತ್ತುಗಳನ್ನು ಮಾಡುತ್ತಿದ್ದಾರೆ.

ಆದರೆ ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ಡಿಕೆಶಿಯೊಬ್ಬರೇ ಕಾರಣರಲ್ಲ. ಸಿದ್ದರಾಮಯ್ಯನವರ ಜನಪ್ರಿಯ ನಾಯಕತ್ವದ ಜೊತೆಗೆ ಉಳಿದ ನಾಯಕರು ಕೂಡಾ ಪಕ್ಷಕ್ಕೆ ಬೆನ್ನೆಲುಬಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ನಂತರದ ಅತ್ಯಂತ ಪ್ರಭಾವಿ ಹುದ್ದೆ ಕರ್ನಾಟಕ ಕಾಂಗ್ರೆಸ್​ನ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ. ಈ ಸಮಿತಿಯ ಅಧ್ಯಕ್ಷರಾಗಿರುವವರು ಮಾಜಿ ಸಚಿವ ಎಂಬಿ ಪಾಟೀಲ್​. ಇವರು ಪಕ್ಷ ಸಂಘಟನೆ ಮತ್ತು ಸಂಪನ್ಮೂಲದ ರೂಪದಲ್ಲೂ ಪಕ್ಷ ಅಧಿಕಾರಕ್ಕೆ ಬರಲಿಕ್ಕೆ ಕಾರಣಿಕರ್ತರು.

ಜಾತಿ ಸಮೀಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್​​ ನಾಲ್ವರು ಕಾರ್ಯಾಧ್ಯಕ್ಷರನ್ನು ಮಾಡಿತ್ತು. ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್​, ಧ್ರುವನಾರಾಯಣ್​, ಸತೀಶ್​ ಜಾರಕಿಹೊಳಿ. ಧ್ರುವ ನಾರಾಯಣ್​ ನಿಧನದ ಬಳಿಕ ದಲಿತ ಸಮುದಾಯದ ಬಿ ಎನ್​ ಚಂದ್ರಪ್ಪ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಈ ಮೂಲಕ ಕಾಂಗ್ರೆಸ್​ ಸರ್ವ ಜನಾಂಗಗಳಿಗೂ ರಾಜಕೀಯ ಪ್ರಾತಿನಿಧ್ಯ ಕೊಡುವ ಉದ್ದೇಶವಾಗಿತ್ತು.

ಅಹಿಂದ ಮತಗಳು:

ಕಾಂಗ್ರೆಸ್​​ಗೆ ಈ ಬಾರಿ ಅಧಿಕ ಪ್ರಮಾಣದಲ್ಲಿ ಅಹಿಂದ ಮತಗಳು ಕೈ ಹಿಡಿದಿವೆ. ಶೇಕಡಾ 60ರಷ್ಟು ದಲಿತರು ಮತ್ತು ಶೇಕಡಾ 44ರಷ್ಟು ಆದಿವಾಸಿಗಳು ಮತ್ತು ಶೇಕಡಾ 88ರಷ್ಟು ಮುಸಲ್ಮಾನರ ಮತದೊಂದಿಗೆ ಕಾಂಗ್ರೆಸ್​ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.

ಜಾತಿವಾರು ಲೆಕ್ಕಾಚಾರ:

ಕಾಂಗ್ರೆಸ್​ನಲ್ಲಿ ಗೆದ್ದಿರುವ 135 ಶಾಸಕರ ಪೈಕಿ 39 ಶಾಸಕರು ಲಿಂಗಾಯತರು, ಒಕ್ಕಲಿಗ ಸಮುದಾಯದ 21 ಶಾಸಕರು, ಪರಿಶಿಷ್ಟ ಜಾತಿಯ 17 ಶಾಸಕರಿದ್ದರು.

ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂಬ ಅಸ್ತ್ರವನ್ನೇ ಮುಂದಿಟ್ಟುಕೊಂಡಿದ್ದ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬಳಿಕ ಡಿಕೆಶಿ ವಿರೋಧದ ಕಾರಣದಿಂದ ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡುತ್ತಿಲ್ಲ. ಚುನಾವಣೆಗೂ ಮೊದಲೇ ಮುಸಲ್ಮಾನರೂ ನಮ್ಮವರೇ ಎಂದಿದ್ದ ಡಿಕೆಶಿ ಈಗ ಮುಸಲ್ಮಾನ ಸಮುದಾಯಕ್ಕೂ ಡಿಸಿಎಂ ಸ್ಥಾನ ನೀಡದಂತೆ ಹಠ ಹಿಡಿದಿದ್ದಾರೆ, ಆ ಹಠಕ್ಕೆ ಕಾಂಗ್ರೆಸ್​ ಮಣಿದಿದೆ.

ಡಿಕೆಶಿಯೊಬ್ಬರಿಗಷ್ಟೇ ಬಂಪರ್​:

ಡಿಕೆಶಿವಕುಮಾರ್​ ಹಿಡಿದ ಹಠಕ್ಕೆ ಕಾಂಗ್ರೆಸ್​ ಅವರಿಗೆ ಬಂಪರ್​ ನೀಡಿದೆ. ಉಪ ಮುಖ್ಯಮಂತ್ರಿ ಹುದ್ದೆ, ಸಂಪನ್ಮೂಲಭರಿತವಾದ ಎರಡು ಖಾತೆಗಳು, 2024ರವರೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ.

ಹಾಗಾದರೆ ಪಕ್ಷದ ಉಳಿದ ಸಮುದಾಯದ ಪ್ರಮುಖ ನಾಯಕರಿಗೆ ಸಿಕ್ಕಿದ್ದೇನು..?