ನಮ್ಮ ದೇಹವನ್ನು ಆರೋಗ್ಯವಾಗಿಡಲು ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದರಲ್ಲೂ ಇತ್ತೀಚೆಗೆ ಆಹಾರ, ಮಾನಸಿಕ ಒತ್ತಡ, ಖಿನ್ನತೆ, ಇನ್ನಿತರ ತೊಂದರೆಗಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಕೆಲವು ಪದಾರ್ಥಗಳನ್ನು, ಹಣ್ಣು- ತರಕಾರಿಗಳನ್ನು ಸೇವಿಸುವುದು ಉತ್ತಮ. ತಜ್ಞರ ಪ್ರಕಾರ ಆರೋಗ್ಯವನ್ನು ಸುಧಾರಿಸಲು ವಿವಿಧ ಹಣ್ಣುಗಳನ್ನು ಸೇವಿಸಬೇಕು. ಅದರಲ್ಲೂ ಡ್ರ್ಯಾಗಪ್ ಫ್ರೂಟ್ ತಿನ್ನುವುದರಿಂದ ದೇಹಕ್ಕೆ ಎಲ್ಲಾ ರೀತಿಯ ಜೀವಸತ್ವಗಳು ಮತ್ತು ಖನಿಜಗಳು ದೊರೆಯುತ್ತವೆ. ಡ್ರ್ಯಾಗಪ್ ಫ್ರೂಟ್ ಗುಲಾಬಿ ಬಣ್ಣದ್ದಾಗಿದ್ದು, ಒಳಗೆ ಬಿಳಿ ತಿರುಳು ಇರುತ್ತದೆ. ಅಲ್ಲದೆ ಈ ಹಣ್ಣಿನಲ್ಲಿ ಕಪ್ಪು ಬೀಜಗಳಿವೆ. ಈ ಹಣ್ಣು ಸೇವಿಸುವುದರಿಂದ ಅನೇಕ ಕಾಯಿಲೆಗಳಿಂದ ದೂರ ಇರಬಹುದು.
ಡ್ರ್ಯಾಗನ್ ಫ್ರೂಟ್ ಎಂಬ ಹೆಸರು ಹೇಗೆ ಬಂತು? ಡ್ರ್ಯಾಗನ್ ಚೀನಾದಲ್ಲಿ ಇರುವ ಒಂದು ಪವಿತ್ರ ಪ್ರಾಣಿ. ತನ್ನ ಬಾಯಿಯ ಮೂಲಕ ಅಗ್ನಿಯನ್ನು ಹೊತ್ತಿಸುವ ಮತ್ತು ಶತ್ರುಗಳನ್ನು ಕೊಲ್ಲುವ ಪ್ರಾಣಿಯನ್ನು ಚೀನಿಯರು ಡ್ರ್ಯಾಗನ್ ಎಂದು ಕರೆಯುತ್ತಿದ್ದರು ಮತ್ತು ಈಗಲೂ ಈ ಪ್ರಾಣಿ ಜೀವಂತವಾಗಿದೆ ಎಂದು ನಂಬುತ್ತಾರೆ. ಆದರೆ ಈ ಹಣ್ಣನ್ನು ಡ್ರ್ಯಾಗನ್ ಫ್ರೂಟ್ ಎಂದು ಹೆಸರಿಸಲು ಕಾರಣ ಅದರ ಆಕರ್ಷಕ ಬಣ್ಣ ಮತ್ತು ನೋಟ. ಗುಲಾಬಿ ಬಣ್ಣದಲ್ಲಿರುವ ಈ ಹಣ್ಣಿನ ಸುತ್ತಲಿನ ದಳಗಳು ಹಳದಿ ಮತ್ತು ಹಸಿರುಯುತವಾಗಿರುತ್ತದೆ. ಇದು ದಕ್ಷಿಣ ಅಮೆರಿಕಾದಲ್ಲಿ ಈ ಹಣ್ಣನ್ನು ಮೊದಲಿಗೆ ಬೆಳೆಯಲು ಆರಂಭಿಸಿದರು. ನಂತರದಲ್ಲಿ ಪೂರ್ವ ಏಷ್ಯಾ, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಜನರು ಈ ಹಣ್ಣನ್ನು ಬೆಳೆಯಲಾರಂಭಿದರು. ಇತ್ತೀಚೆಗೆ ಭಾರತದಲ್ಲಿ ಕೂಡ ಈ ಹಣ್ಣನ್ನು ಬೆಳೆಯುತ್ತಾರೆ.
ಡ್ರ್ಯಾಗನ್ ಹಣ್ಣಿನ ಉಪಯೋಗಗಳು ಈ ಡ್ರ್ಯಾಗನ್ ಹಣ್ಣು ಕಡಿಮೆ ಕ್ಯಾಲೊರಿಯನ್ನು ಹೊಂದಿದೆ. ಇದರಲ್ಲಿ ನಾರಿನಂಶವೂ ಅಧಿಕವಾಗಿದ್ದು, ಕಬ್ಬಿಣ, ಪ್ರೋಟೀನ್, ಕಾರ್ಬೋಹೈಡ್ರೇಟ್, ಮೆಗ್ನೀಸಿಯಮ್, ವಿಟಮಿನ್ ಸಿ, ವಿಟಮಿನ್ ಇ, ಕ್ಯಾರೊಟಿನಾಯ್ಡ್ಗಳು, ಪಾಲಿಫಿನಾಲ್ಗಳಂತಹ ಅಮೂಲ್ಯ ಪೋಷಕಾಂಶಗಳು ಲಭ್ಯವಿದೆ. ಡ್ರ್ಯಾಗನ್ ಹಣ್ಣಿನ ಬೆಲೆ ಸ್ವಲ್ಪ ಹೆಚ್ಚಾಗಿದ್ದರೂ, ಇದು ದೇಹಕ್ಕೆ ಶಕ್ತಿ ಹೆಚ್ಚಿಸುವ ಪೋಷಕಾಂಶಗಳನ್ನು ಒದಗಿಸುತ್ತದೆ. ಅದಕ್ಕಾಗಿಯೇ ಈ ಹಣ್ಣನ್ನು ತಿನ್ನುವುದು ತುಂಬಾ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ.
ರೋಗಗಳನ್ನು ದೂರವಿಡುವ ಹಣ್ಣು ಪ್ರಸ್ತುತ ಯುಗದಲ್ಲಿ ಮಾನವರು ಒಂದಿಲ್ಲಾ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ವಿವಿಧ ಸೋಂಕುಗಳು ಮತ್ತು ರೋಗಗಳಿಂದ ದೂರ ಇರಲು ಈ ಹಣ್ಣು ಸೇವಿಸಿ. ಡ್ರ್ಯಾಗನ್ ಹಣ್ಣು ತಿನ್ನುವುದು ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಉತ್ಕರ್ಷಣ ನಿರೋಧಕಗಳು, ಹೃದ್ರೋಗ, ಕ್ಯಾನ್ಸರ್ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿದೆ. ಡ್ರ್ಯಾಗನ್‌ನ ಹೆಚ್ಚಿನ ಫೈಬರ್ ಅಂಶವು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮಧುಮೇಹಿಗಳಿಗೆ ತುಂಬಾ ಉಪಯುಕ್ತವಾಗಿದ್ದು, ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಡ್ರ್ಯಾಗನ್ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.
ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಡ್ರ್ಯಾಗನ್ ಹಣ್ಣು ತುಂಬಾ ಪ್ರಯೋಜನಕಾರಿ. ಇದು ಮಲಬದ್ಧತೆಯ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆಯಿದ್ದರೂ, ಡ್ರ್ಯಾಗನ್ ಹಣ್ಣು ನಿಮಗೆ ಉತ್ತಮ ಆಯ್ಕೆಯಾಗಿದೆ. ಅದೇ ಸಮಯದಲ್ಲಿ, ಡ್ರ್ಯಾಗನ್ ಹಣ್ಣಿನಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಲೈಕೋಪೀನ್ ಸಹ ಕಂಡುಬರುತ್ತವೆ. ಕ್ಯಾರೊಟಿನಾಯ್ಡ್ ಸಮೃದ್ಧ ಆಹಾರವನ್ನು ಸೇವಿಸುವುದರಿಂದ ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವೂ ಕಡಿಮೆಯಾಗುತ್ತದೆ. ಆಹಾರದಲ್ಲಿ ನಾರುಗಳನ್ನು ಹೊಂದಿರುವುದು ಬಹಳ ಮುಖ್ಯ. ಡ್ರ್ಯಾಗನ್ ಹಣ್ಣಿನಿಂದ ಸಾಕಷ್ಟು ಪ್ರಮಾಣದ ನಾರಿನಾಂಶವನ್ನು ಪಡೆಯ ಬಹುದಾಗಿದೆ.
ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನೂ ನಿಯಂತ್ರಿಸುವ ಸಾಮರ್ಥ್ಯವನ್ನು ಡ್ರ್ಯಾಗನ್ ಫ್ರೂಟ್ ಹೊಂದಿದ್ದು,ಈ ಹಣ್ಣಿನಲ್ಲಿ ಆಂಟಿ-ಆಕ್ಸಿಡೆಂಟ್, ಫೈಬರ್ ಮತ್ತು ವಿಟಮಿನ್ ಸಿ ಇರುತ್ತದೆ. ಇದು ಅನೇಕ ಗಂಭೀರ ಕಾಯಿಲೆಗಳ ಚೇತರಿಕೆಗೆ ಸಹಾಯ ಮಾಡುತ್ತದೆ. ಡ್ರ್ಯಾಗನ್ ಹಣ್ಣಿನಲ್ಲಿ ವಿಟಮಿನ್ ಸಿ ಗಮನಾರ್ಹ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರಿಂದಾಗಿ ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಡ್ರ್ಯಾಗನ್ ಹಣ್ಣಿನಲ್ಲಿರುವ ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಬಿಳಿ ರಕ್ತ ಕಣಗಳನ್ನು ರಕ್ಷಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ದೇಹದಲ್ಲಿ ಹೆಚ್ಚಿಸುತ್ತದೆ. ಇದು ಸೋಂಕು ಅಥವಾ ಇತರೆ ಯಾವುದೇ ಕಾಯಿಲೆಗಳು ನಮ್ಮನ್ನು ಹಾನಿ ಮಾಡದಂತೆ ತಡೆಯುತ್ತದೆ.
ಡ್ರ್ಯಾಗನ್ ಹಣ್ಣು ತಿನ್ನುವುದರಿಂದ ದೇಹಲ್ಲಿನ ಕಬ್ಬಿಣಾಂಶದ ಕೊರತೆಯನ್ನು ನಿವಾರಿಸಬಹುದಾಗಿದ್ದು, ಇತರ ಎಲ್ಲಾ ಹಣ್ಣುಗಳಿಗೆ ಹೋಲಿಸಿದರೆ ಡ್ರ್ಯಾಗನ್ ಹಣ್ಣಿನಲ್ಲಿ ಮೆಗ್ನೀಸಿಯಮ್ ಅಧಿಕವಾಗಿದೆ.
ಡ್ರ್ಯಾಗನ್ ಹಣ್ಣನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸ ಬಹುದಾಗಿದ್ದು, ಇದರಲ್ಲಿ ಆಲಿಗೋಸ್ಯಾಕರೈಡ್‌ಗಳು ಪ್ರಿಬಯಾಟಿಕ್ ಗುಣಗಳಿವೆ. ಈ ಹಣ್ಣಿನ ಸೇವನೆಯಿಂದ ಕರುಳಿನಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾ ಹೆಚ್ಚಾಗಲಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಡ್ರ್ಯಾಗನ್ ಹಣ್ಣು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಸಂಧಿವಾತವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಈ ಹಣ್ಣಿನ ಬೀಜಗಳಲ್ಲಿ ಫೈಟೊಕೆಮಿಕಲ್ಸ್ ಉತ್ಕರ್ಷಣ ನಿರೋಧಕ ಮತ್ತು ಆಂಟಿವೈರಲ್ ಗುಣಗಳಿದ್ದು, ಇದು ಡೆಂಘೀ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಡ್ರ್ಯಾಗನ್ ಹಣ್ಣನ್ನು ತಿನ್ನುವುದರಿಂದ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸಿಕೊಳ್ಳಬಹುದು. ಇದಕ್ಕೆ ಮುಖ್ಯ ಕಾರಣ ಅದರಲ್ಲಿ ಕಂಡುಬರುವ ಕ್ಯಾಲ್ಸಿಯಂ ಮತ್ತು ರಂಜಕದ ಪ್ರಮಾಣ. ಡ್ರ್ಯಾಗನ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಅಸ್ತಮಾ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.