ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಗೆ ನಾಲ್ಕೇ ತಿಂಗಳು ಬಾಕಿ ಇರುವಂತೆ ಯಾವ ಪಕ್ಷದಿಂದ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಗಳು ಆಗಬಹುದು ಎಂಬ ಕುತೂಹಲ ಹಾಗೇ ಇದೆ.
ಮೂಲಗಳ ಪ್ರಕಾರ ಕಲ್ಯಾಣ ಕರ್ನಾಟಕದಲ್ಲಿ ಬರುವ ಬೀದರ್ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷದಿಂದ ಉಮೇದುವಾರರು ಬಹುತೇಕ ಅಂತಿಮ ಆಗಿದ್ದಾರೆ.
ಬಸವಕಲ್ಯಾಣದಿಂದ ಯಾರಿಗೆ ಟಿಕೆಟ್..?
ಬಸವಕಲ್ಯಾಣದಿಂದ ಮಾಜಿ ವಿಧಾನಪರಿಷತ್ ಸದಸ್ಯ, ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರ ಪುತ್ರ ವಿಜಯ್ ಸಿಂಗ್ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ನಿಚ್ಚಳವಾಗಿದೆ. ತಮಗೆ ಟಿಕೆಟ್ ಪಕ್ಕಾ ಆಗಿದೆ ಎಂದು ವಿಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇವರ ಕಿರಿಯ ಸಹೋದರ ಅಜಯ್ ಸಿಂಗ್ ಜೇವರ್ಗಿ ಕ್ಷೇತ್ರದ ಶಾಸಕರು
2018ರಲ್ಲಿ ಬಸವಕಲ್ಯಾಣದಿಂದ ನಾರಾಯಣರಾವ್ ಅವರು ಗೆದ್ದು ಕಾಂಗ್ರೆಸ್ ಶಾಸಕರಾಗಿದ್ದರು. ನಾರಾಯಣರಾವ್ ಅವರ ನಿಧನದಿಂದ 2021ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲಿ ವಿಜಯ್ ಸಿಂಗ್ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಅವರ ಬದಲು ನಾರಾಯಣರಾವ್ ಅವರ ಪತ್ನಿ ಮಾಲಾ ನಾರಾಯಣರಾವ್ ಅವರಿಗೆ ಟಿಕೆಟ್ ಸಿಕ್ಕಿತ್ತು.
ತಮಗೆ ಟಿಕೆಟ್ ಸಿಗದಿದ್ದ ಹಿನ್ನೆಲೆಯಲ್ಲಿ ವಿಜಯ್ ಸಿಂಗ್ ಅವರು ಮುನಿಸಿಕೊಂಡಿದ್ದರು. ಉಪ ಚುನಾವಣೆಯ ಪ್ರಚಾರದಿಂದಲೂ ದೂರ ಉಳಿದಿದ್ದರು.
ಆದರೆ ಉಪ ಚುನಾವಣೆಯಲ್ಲಿ ಮಾಲಾ ನಾರಾಯಣರಾವ್ ಸೋತು ಬಿಜೆಪಿ ಪಕ್ಷದಿಂ ಶರಣು ಸಲಗಾರ್ ವಿಧಾನಸಭೆಗೆ ಆಯ್ಕೆ ಆಗಿದ್ದರು.
ವಿಜಯ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ.
2018ರಲ್ಲಿ 35 ವರ್ಷಗಳ ಬಳಿಕ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿತ್ತಾದರೂ ಉಪ ಚುನಾವಣೆಯಲ್ಲಿ ಸೋತಿತ್ತು.
ಈ ಕ್ಷೇತ್ರದಲ್ಲಿ ಮರಾಠ, ಲಿಂಗಾಯತ ಮತ್ತು ಮುಸ್ಲಿಂ ಮತಗಳು ಅಧಿಕವಾಗಿವೆ.
ADVERTISEMENT
ADVERTISEMENT