ADVERTISEMENT
ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಹೆಚ್ ಡಿ ರೇವಣ್ಣ ಎಸಗಿರುವ ಲೈಂಗಿಕ ದೌರ್ಜನ್ಯದ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣಗಳ ಸಂಬಂಧ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಈ ಸಂಬಂಧ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಡಿಯೋಗಳನ್ನು ಯಾರೇ ಆಗಲಿ ಸಾಮಾಜಿಕ ಜಾಲತಾಣಗಳಲ್ಲಿ (ವಾಟ್ಸಾಪಿನಂತಹ ಮೆಸೆಂಜರ್ ಆಪ್ ಮೂಲಕವೂ ಸೇರಿ) ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಕಲಂ 67(ಎ) ಐಟಿ ಆಕ್ಟ್ ಹಾಗೂ ಕಲಂ 228ಎ(1), 292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಖಾಸಗಿ ಮೆಸೇಜಿಂಗ್ ಆಪ್ಗಳ ಮುಖಾಂತರ ಹಂಚುವುದನ್ನೂ ಪತ್ತೆ ಹಚ್ಚುವುದು ಸಾಧ್ಯವಿದ್ದು, ಅಂಥದ್ದರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇದು ಸಂಬಂಧಿಸಿದ ಬಅಪಶು ಮಹಿಳೆಯರ ಘನತೆ ಹಾಗೂ ಗೌಪ್ಯತೆಗೆ ಕುಂದುಂಟು ಮಾಡುವುದಾಗಿದ್ದು, ಅದನ್ನುಗಂಭೀರವಾಗಿ ಪರಿಗಣಿಸಲಾಗುವುದು.
ಪ್ರಕರಣದ ಯಾವುದೇ ಸಂತ್ರಸ್ತ ವ್ಯಕ್ತಿಯು ಈಗಾಗಲೇ ಆರಂಭಿಸಲಾಗಿರುವ ನಮ್ಮ ಹೆಲ್ತ್ ಲೈನ್ 6360938947 ಈ ನಂಬರ್ ಅನ್ನು ಬೆಳಗ್ಗೆ 8ರಿಂದ ರಾತ್ರಿ 8ರ ನಡುವೆ ಯಾವಾಗ ಬೇಕಾದರೂ ಸಂಪರ್ಕಿಸಬಹುದಾಗಿದೆ. ಈ ನಂಬರಿಗೆ ಕರೆ ಮಾಡುವ ಯಾವುದೇ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಲಾಗುವುದು. ಅವರು ಎಸ್ ಐ ಟಿ ಕಚೇರಿಗೆ ಬರುವ ಅಗತ್ಯವೂ ಇಲ್ಲ. ಸಂತ್ರಸ್ತರಿಗೆ ಅಗತ್ಯವಿರುವ ನೆರವನ್ನು ಒದಗಿಸಲಾಗುವುದು.
ಯಾವುದೇ ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವ ಕೆಲಸವನ್ನು ಮಾಧ್ಯಮ ಸಂಸ್ಥೆಗಳು, ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ಅಥವಾ ಇನ್ಯಾರೇ ಆದರೂ ಮಾಡಬಾರದೆಂದು ಈ ಮೂಲಕ ಸೂಚಿಸಲಾಗುತ್ತಿದೆ. ಈ ವಿಚಾರದಲ್ಲಿ ಅಗತ್ಯ ಕಂಡುಬಂದರೆ ಕಾನೂನು ಕ್ರಮ ಜರುಗಿಸಲಾಗುವುದು.
ಯಾವುದೇ ಲೈಂಗಿಕ ಹಿಂಸೆ ಅಥವಾ ಅತ್ಯಾಚಾರ ಪ್ರಕರಣಗಳಲ್ಲಿ ನಾಚಿಕೆ ಪಟ್ಟುಕೊಳ್ಳಬೇಕಾದ್ದು, ಹಿಂಜರಿಯಬೇಕಾದ್ದು, ಅವಮಾನ ಎಂದು ಭಾವಿಸಬೇಕಾದ್ದು ಅಂತಹ ಪ್ರಕರಣಗಳಲ್ಲಿ ಅಪರಾಧವೆಸಗಿದ ವ್ಯಕ್ತಿಯೇ ಹೊರತು, ಶೋಷಣೆಗೆ ಒಳಗಾದ ವ್ಯಕ್ತಿ ಅಲ್ಲ ಎಂಬುದನ್ನು ಅರಿಯಬೇಕು ಮತ್ತು ಸೂಕ್ತ ಸಂವೇದನೆಯಿಂದ ಪ್ರವರ್ತಿಸುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ.
ಈ ವಿಚಾರದಲ್ಲಿ ಎಸ್ ಐ ಟಿಯು ಅತ್ಯಂತ ಹೆಚ್ಚಿನ ಸಂವೇದನೆಯಿಂದ ನಡೆದುಕೊಳ್ಳಅದೆ. ಈಗಾಗಲೇ ಇದಕ್ಕೆ ಅಗತ್ಯವಿರುವ ವೃತ್ತಿಪರ ಕೌನ್ಸೆಲರುಗಳು, ವೈದ್ಯರುಗಳು, ಇಂತಹ ಕಾರ್ಯದಲ್ಲಿ ಅನುಭವವಿರುವ ಸಂಸ್ಥೆಗಳ ನೆರವನ್ನು ಎಸ್ ಐ ಟಿ ಪಡೆದುಕೊಂಡಿದೆ. ಸಾರ್ವಜನಿಕರೂ ಈ ವಿಚಾರದಲ್ಲಿ ಸ್ಪಂದಿಸುವುದು ಅಗತ್ಯ ಎಂದು ಎಸ್ಐಟಿ ಹೇಳಿದೆ.
ADVERTISEMENT