ಕೇರಳ ಪಿಎಫ್​​ಐನಿಂದ ಹಿಂಸಾತ್ಮಕ ಪ್ರತಿಭಟನೆ : 5.20 ಕೋ. ನಷ್ಟ ಭರಿಸುವಂತೆ ಹೈಕೋರ್ಟ್​ ಸೂಚನೆ

ಎನ್‍ಐಎ (NIA) ದಾಳಿ ಖಂಡಿಸಿ ನಡೆಸಿದ ಪ್ರತಿಭಟನೆ ವೇಳೆ ಆದ ನಷ್ಟಕ್ಕಾಗಿ 5.20 ಕೋಟಿ ರೂ. ಪರಿಹಾರವನ್ನು ಭರಿಸಿಕೊಡುವಂತೆ ಪಿಎಫ್‍ಐ (PFI) ಕೇರಳ ಪ್ರಧಾನ ಕಾರ್ಯದರ್ಶಿಗೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ.

ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ನೇತೃತ್ವದ ದ್ವಿಸದಸ್ಯ ಪೀಠ ಈ ಸೂಚನೆ ನೀಡಿದೆ. ಎನ್‍ಐಎ ದಾಳಿ ಖಂಡಿಸಿ ಪಿಎಫ್‍ಐ ಕಾರ್ಯಕರ್ತರು ಸೆ.23 ರಂದು ನಡೆಸಿದ ಪ್ರತಿಭಟನೆ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡಿದ್ದ ಹೈಕೋರ್ಟ್, ಪ್ರಕರಣದ ವಿಚಾರಣೆ ನಡೆಸಿತ್ತು. ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಲಾಗಿದೆ, ಕೇರಳ ಸಾರಿಗೆಯ ಬಸ್‍ಗಳಿಗೆ ಕಲ್ಲು ತೂರಲಾಗಿತ್ತು.

ಇದನ್ನೂ ಓದಿ : ಪಿಎಫ್​​ಐ ಮೇಲೆ ಎನ್​ಐಎ ದಾಳಿ ಬೆನ್ನಲ್ಲೇ, ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್

ಪ್ರತಿಭಟನೆಯಿಂದ 5.06 ಕೋಟಿ ನಷ್ಟವಾಗಿದೆ ಎಂದು ಕೋರ್ಟ್‍ಗೆ ಕೇರಳ ಸಾರಿಗೆ ಸಂಸ್ಥೆ ಹೇಳಿತ್ತು. ಇಂದು ನಡೆದ ವಿಚಾರಣೆ ವೇಳೆ ಬೆಂಬಲಿಗರು ಮಾಡಿದ ಗಲಭೆಗೆ ಪಿಎಫ್‍ಐ ಪ್ರಧಾನ ಕಾರ್ಯದರ್ಶಿ ಸಂಪೂರ್ಣ ಜವಾಬ್ದಾರಿಯಾಗಿದ್ದು ಅವರೇ 5.20 ಕೋಟಿ ರೂ. ಹಣವನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಎರಡು ವಾರಗಳಲ್ಲಿ ನೀಡಬೇಕು ಎಂದು ಪೀಠ ಸೂಚನೆ ನೀಡಿದೆ.

ಗೃಹ ಇಲಾಖೆ ನಷ್ಟವಾಗಿರುವ ಆಸ್ತಿ ಪಾಸ್ತಿಯನ್ನು ಲೆಕ್ಕಹಾಕಿ ಸಂತ್ರಸ್ತರಿಗೆ ಹಣವನ್ನು ವರ್ಗಾವಣೆ ಮಾಡಬೇಕು, ಒಂದು ವೇಳೆ ಪರಿಹಾರ ಹಂಚಿಕೆ ವೇಳೆ ಹಣದ ಮೊತ್ತ ಕಡಿಮೆಯಾದರೆ ಹೆಚ್ಚುವರಿ ಹಣವನ್ನೂ ಪಿಎಫ್‍ಐ ಪ್ರಧಾನ ಕಾರ್ಯದರ್ಶಿಯೇ ನೀಡಬೇಕು ಎಂದು ಇದೇ ವೇಳೆ ಕೋರ್ಟ್ ಉಲ್ಲೇಖಿಸಿದೆ.

ಇದನ್ನೂ ಓದಿ : BIG BREAKING: ಪಿಎಫ್ಐ 5 ವರ್ಷಗಳವರೆಗೆ ನಿಷೇಧ