ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯೇ ಕೊಚ್ಚಿ ಹೋಗಿ ಸೃಷ್ಟಿಯಾದ 30 ಅಡಿ ಆಳದ ಕಂದಕಕ್ಕೆ ಇಬ್ಬರು ಬೈಕ್ ಸವಾರರು ಬಿದ್ದು ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ನಾಗಾವಿ ಗ್ರಾಮದಲ್ಲಿ ನಡೆದಿದೆ.
ಲಕ್ಕುಂಡಿ ಗ್ರಾಮದ ಮಂಜುನಾಥ ಮಾದರ (19), ಬಸವರಾಜ್ ಜವಳಬೆಂಚಿ (17) ಮೃತ ಯುವಕರು, ಮಂಜುನಾಥ್ ಮಾದರ ಅವರ ಸೋದರ ಸಂಬಂಧಿಯ ಹುಟ್ಟು ಹಬ್ಬವಿತ್ತು, ಹೀಗಾಗಿ ಇಬ್ಬರು ಕೇಕ್ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ : ಕಂದಕಕ್ಕೆ ಬಿದ್ದ ಬಸ್ : ಶಾಲಾ ಮಕ್ಕಳು ಸೇರಿ 11 ಜನರ ಸಾವು
ರಸ್ತೆ ಕೊಚ್ಚಿ ಹೋಗಿದ್ದರೂ ಇನ್ನೂ ಅದನ್ನು ದುರಸ್ತಿ ಮಾಡಿಸದೆ ಇರುವ ಕಾರಣ ಈ ಸಾವು ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ನಾಗಾವಿ ಗ್ರಾಮದಿಂದ ಬೆಳದಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ 30 ಅಡಿ ಆಳಕ್ಕೆ ಕೊರೆದು ಕಂದಕ ಸೃಷ್ಟಿ ಆಗಿದ್ದ ವಿಷಯ ಜಿಲ್ಲಾಡಳಿತಕ್ಕೆ ತಿಳಿದಿದೆ. ಸ್ಥಳ ವೀಕ್ಷಣೆಯೂ ಮಾಡಲಾಗಿದೆ.
ಆದರೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ಬ್ಯಾರಿಕೇಡ್, ಸುರಕ್ಷತಾ ಫಲಕ ಅಳವಡಿಸದಿರುವುದೇ ಸಾವಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳದಲ್ಲಿ ಪೊಲೀಸರ ನಿಯೋಜನೆ ಮಾಡದೇ ಇಲಾಖೆ ನಿರ್ಲಕ್ಷಿಸಿದೆ ಎಂದು ದೂರಿದ್ದಾರೆ.
ಘಟನಾ ಸ್ಥಳಕ್ಕೆ ಗದಗ ಸಹಾಯಕ ಆಯುಕ್ತೆ ಅನ್ನಪೂರ್ಣ ಮುದುಕಮ್ಮನವರ್, ತಹಶೀಲ್ದಾರ್ ಕಿಶನ್ ಕಲಾಲ್ ಭೇಟಿ ನೀಡಿದ್ದರು.
ಇದನ್ನೂ ಓದಿ : ಬಂಟ್ವಾಳ : ಕಂದಕಕ್ಕೆ ಉರುಳಿದ ಕಾರು – 6 ಜನ ಪವಾಡಸದೃಶ್ಯ ಪಾರು