ವಾಹನಗಳ ತಪಾಸಣೆ ಹೆಸರಲ್ಲಿ ಅಕ್ರಮವಾಗಿ ವಾಹನ ಸವಾರರಿಂದ ಹಣ ಪಡೆಯುತ್ತಿದ್ದ ಪ್ರಕರಣದಲ್ಲಿ ಬೆಂಗಳೂರಿನ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಹಾಗೂ ಕಾನ್ಸ್ಟೇಬಲ್ ಅವರನ್ನು ಅಮಾನತು ಮಾಡಲಾಗಿದೆ.
ತಪಾಸಣೆ ನೆಪದಲ್ಲಿ ಹೊರರಾಜ್ಯಗಳ ವಾಹನಗಳ ಚಾಲಕರುಗಳಿಂದ ಕೇವಲ ದಾಖಲಾತಿ ಪರಿಶೀಲನೆಗಾಗಿ ವಾಹನ ನಿಲ್ಲಿಸಿ ಅಕ್ರಮ ಹಣ ಸಂಗ್ರಹಿಸುತ್ತಿದ್ದ ಎ.ಎಸ್.ಐ ಮತ್ತು ಹೆಡ್ ಕಾನ್ಸ್ ಟೇಬಲ್ ರವರುಗಳನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಿ ಶಿಸ್ತು ಕ್ರಮ ಜರುಗಿಸಲಾಗಿರುತ್ತದೆ ಎಂದು ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಆದೇಶ ಹೊರಡಿಸಿದ್ದಾರೆ.
ಇದೇ ಜೂನ್ 10 ರಂದು ಹಲಸೂರು ಗೇಟ್ ಪೊಲೀಸ್ ಠಾಣೆಯ ಸರಹದ್ದಿನ ದೇವಾಂಗ ಜಂಕ್ಷನ್ನಲ್ಲಿ ಕೇರಳದ ನಿವಾಸಿಯಾದ ಸಂತೋಷ್ ಅವರ ಕಾರನ್ನು ತಡೆದು ಎಎಸ್ಐ ಮಹೇಶ್ ಡಿಸಿ ಹಾಗೂ ಕಾನ್ಸ್ಟೇಬಲ್ ಗಂಗಾದರಪ್ಪ ತಪಾಸಣೆ ಮಾಡಿದ್ದರು. ಕಾರಿನಲ್ಲಿ ವಾಷ್ ಬೇಸಿನ್ ಇರುವ ಕಾರಣಕ್ಕೆ ಕಾರನ್ನು ಸೀಜ್ ಮಾಡಲಾಗುವುದು. 20 ಸಾವಿರ ದಂಡದ ಮೊತ್ತವನ್ನು ಕೋರ್ಟ್ನಲ್ಲಿ ಕಟ್ಟಬೇಕಾಗುತ್ತದೆ ಎಂದು ಹೆದರಿಸಿದ್ದರು. ಅನಂತರ ಅವರಿಂದ 2500 ರೂ. ಪಡೆದು ಯಾವುದೇ ರಸೀದಿ ನೀಡಿರಲಿಲ್ಲ.
ತಪಾಸಣೆ ನೆಪದಲ್ಲಿ ಹೊರರಾಜ್ಯಗಳ ವಾಹನಗಳ ಚಾಲಕರುಗಳಿಂದ ಕೇವಲ ದಾಖಲಾತಿ ಪರಿಶೀಲನೆಗಾಗಿ ವಾಹನ ನಿಲ್ಲಿಸಿ ಅಕ್ರಮ ಹಣ ಸಂಗ್ರಹಿಸುತ್ತಿದ್ದ ಎ.ಎಸ್.ಐ ಮತ್ತು ಹೆಡ್ ಕಾನ್ಸ್ ಟೇಬಲ್ ರವರುಗಳನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಿ, ಶಿಸ್ತು ಕ್ರಮ ಜರುಗಿಸಲಾಗಿರುತ್ತದೆ. @DgpKarnataka @CPBlr @BlrCityPolice @jointcptraffic pic.twitter.com/MdnmyK7GEI
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 27, 2022
ಈ ಬಗಗ್ಎ ಸಂತೋಷ್ ಅವರು ಪೊಲೀಸ್ ಆಯುಕ್ತರಿಗೆ ಈಮೇಲ್ ಮಾಡಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳಾದ ಎಎಸ್ಐ ಮಹೇಶ್ ಡಿಸಿ ಹಾಗೂ ಕಾನ್ಸ್ಟೇಬಲ್ ಗಂಗಾದರಪ್ಪ ಅವರ ಹಣ ಪಡೆದಿರುವುದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.