ಸ್ಯಾನಿಟರಿ ಪ್ಯಾಡ್ ಕೇಳಿದ ಶಾಲಾ ಬಾಲಕಿಗೆ ‘ಕಾಂಡೋಮ್ ಬೇಕಾ’ ಎಂದ ಮಹಿಳಾ ಅಧಿಕಾರಿ – ನೆಟ್ಟಿಗರಿಂದ ಆಕ್ರೋಶ

ಶಾಲೆಗಳಲ್ಲಿ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ನೀಡಲು ಸಾಧ್ಯವೇ ಎಂದು ಶಾಲಾ ವಿದ್ಯಾರ್ಥಿನಿಯೊಬ್ಬಳು ಕೇಳಿದ ಪ್ರಶ್ನೆಗೆ ಮಹಿಳಾ ಅಧಿಕಾರಿಯೊಬ್ಬರು ಅಸಂಬದ್ಧವಾಗಿ ಮಾತನಾಡಿದ ಘಟನೆಯ ವಿಡಿಯೋ ವೈರಲ್ ಆಗಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ ಒಳಗಾಗಿದೆ.

ಬಿಹಾರದ ಶಾಲಾ ಬಾಲಕಿಯೊಬ್ಬಳು, ಸರ್ಕಾರವು 20- 30 ರೂಪಾಯಿಗೆ ಸ್ಯಾನಿಟರಿ ಪ್ಯಾಡ್ ಕೊಡಬಹುದೇ? ಎಂದಷ್ಟೇ ಕೇಳಿದ್ದಳು.

ಇದಕ್ಕೆ ವ್ಯಂಗ್ಯವಾಗಿ ಉತ್ತರಿಸಿರುವ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ, ನೀವು ಸರ್ಕಾರವು ಜೀನ್ಸ್ ಕೂಡ ಕೊಡಬಹುದು ಎಂದು ನಾಳೆ ಹೇಳುತ್ತೀರಿ. ಮತ್ತೆ ಅದರ ಬಳಿಕ ಸುಂದರವಾದ ಜೋಡಿ ಶೂಗಳು ಏಕೆ ಬೇಡ? ಆಮೇಲೆ ನೀವು ಕುಟುಂಬ ಯೋಜನಾ ಮಾದರಿಗಳಾದ ಕಾಂಡೋಮ್ ಅನ್ನು ಕೂಡ ಸರ್ಕಾರ ನೀಡಲಿ ಎಂದು ನಿರೀಕ್ಷಿಸುತ್ತೀರಾ ಎಂದು ಹೇಳಿದ್ದಾರೆ.

ಜನರ ಮತಗಳಿಂದ ಸರ್ಕಾರ ಸೃಷ್ಟಿಯಾಗುತ್ತದೆ ಎಂದು ವಿದ್ಯಾರ್ಥಿನಿ ಅಧಿಕಾರಿಗೆ ನೆನಪಿಸಿದ್ದಾರೆ. ಆಗ ಮತ್ತೆ ಕುಹಕವಾಡಿದ ಅಧಿಕಾರಿಣಿ, ಇದು ಮೂರ್ಖತನದ ಪರಮಾವಧಿ. ಅಷ್ಟಾದರೆ ಮತ ಹಾಕಬೇಡಿ. ಪಾಕಿಸ್ತಾನಿಗಳಾಗಿ. ನೀವು ಹಣ ಮತ್ತು ಸೇವೆಗಳಿಗೆ ಮತ ಹಾಕುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಅಗ್ನಿಪಥ್ ಪ್ರತಿಭಟನೆ : ಬಿಹಾರದಲ್ಲಿ ಬಿಜೆಪಿ ಕಚೇರಿ ಧ್ವಂಸ

ಈ ಘಟನೆ ನಡೆದಿರುವುದು ‘ಸಶಕ್ತ ಹೆಣ್ಣುಮಕ್ಕಳು, ಸಮೃದ್ಧ ಬಿಹಾರ’ ಯೋಜನೆ ಕುರಿತಾದ ಕಾರ್ಯಾಗಾರದಲ್ಲಿ. ಹೆಣ್ಣುಮಕ್ಕಳ ಮೌಲ್ಯವನ್ನು ವೃದ್ಧಿಸುವ ಕಡೆಗೆ ಎಂಬ ವಾಕ್ಯ ಈ ಯೋಜನೆಯ ಅಡಿಶೀರ್ಷಿಕೆ ಎನ್ನುವುದೇ ವಿಪರ್ಯಾಸ.

ಈ ಕಾರ್ಯಾಗಾರದಲ್ಲಿ ಕೊಳೆಗೇರಿಯಲ್ಲಿ ವಾಸಿಸುವ ವಿದ್ಯಾರ್ಥಿನಿ, ಹೆಣ್ಣುಮಕ್ಕಳಿಗೆ ಕಡಿಮೆ ದರದಲ್ಲಿ ಸರ್ಕಾರದಿಂದ ಸ್ಯಾನಿಟರಿ ಪ್ಯಾಡ್ ಒದಗಿಸುವಂತೆ ಮನವಿ ಮಾಡಿದ್ದಳು. ಬಿಹಾರ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಮುಖ್ಯಸ್ಥೆಯಾಗಿರುವ ಕೌರ್ ಭಮ್ರಾ ಅವರ ನೇತೃತ್ವದಲ್ಲಿ ಯುನಿಸೆಫ್ ಹಾಗೂ ಇತರೆ ಸಂಘಟನೆಗಳ ಸಹಭಾಗಿತ್ವದಲ್ಲಿ ಮಂಗಳವಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆದರೆ ಈ ಪ್ರಶ್ನೆ- ಉತ್ತರದ ಬಿರುಸಿನ ಚಕಮಕಿ ಅಷ್ಟಕ್ಕೆ ನಿಲ್ಲಲಿಲ್ಲ. ತಮ್ಮ ಶಾಲೆಯಲ್ಲಿನ ಬಾಲಕಿಯರ ಶೌಚಾಲಯದ ಕೊಠಡಿ ಮುರಿದುಹೋಗಿದೆ. ಅದರೊಳಗೆ ಬಾಲಕರು ಪ್ರವೇಶಿಸುತ್ತಾರೆ ಎಂದು ಬಾಲಕಿಯೊಬ್ಬಳು ಅಹವಾಲು ತೋಡಿಕೊಂಡಳು. “ನನಗೆ ಹೇಳಿ, ನಿಮ್ಮ ಮನೆಗಳಲ್ಲಿ ಪ್ರತ್ಯೇಕ ಶೌಚಾಲಯಗಳಿವೆಯೇ? ವಿಭಿನ್ನ ಸ್ಥಳಗಳಲ್ಲಿ ಅನೇಕ ವಿಷಯಗಳ ಬಗ್ಗೆ ನೀವು ಕೇಳುತ್ತಾ ಇದ್ದರೆ ಅದು ಹೇಗೆ ನಡೆಯುತ್ತದೆ?” ಎಂದು ಅಧಿಕಾರಿಣಿ ಕಿಡಿಕಾರಿದ್ದಾರೆ.

ಮಹಿಳಾ ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಭಮ್ರಾ ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ನೆಟ್ಟಿಗರು ಈ ಅಧಿಕಾರಿಯ ದರ್ಪಕ್ಕೆ ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ : BIG BREAKING: ಬಿಹಾರ ಸಿಎಂ ನಿತೀಶ್​ ಕುಮಾರ್​ ರಾಜೀನಾಮೆ – ಮಹಾಮೈತ್ರಿ ಕೂಟ ಸರ್ಕಾರಕ್ಕೆ ಹಾದಿ ಸುಗಮ