ADVERTISEMENT
ಈ ವರ್ಷದ ಅಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇವತ್ತು ಮಹಿಳೆಯರ ಖಾತೆಗೆ 1 ಸಾವಿರ ರೂಪಾಯಿ ಹಾಕುವ ಯೋಜನೆಗೆ ಚಾಲನೆ ನೀಡಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರು ಲಾಡ್ಲಿ ಬೆಹಾನಾ ಯೋಜನೆಗೆ ಚಾಲನೆ ನೀಡಿದ್ದಾರೆ.
ಈ ಯೋಜನೆಯಡಿಯಲ್ಲಿ ಮಧ್ಯಪ್ರದೇಶದ 1.25 ಕೋಟಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 10ರಂದು ರಾಜ್ಯ ಸರ್ಕಾರದಿಂದ 1 ಸಾವಿರ ರೂಪಾಯಿ ಜಮೆ ಆಗಲಿದೆ.
ಗ್ಯಾರಂಟಿ ವಿರೋಧಿಸಿದ್ದ ಪ್ರಧಾನಿ ಮೋದಿ:
ಒಂದೆಡೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ಸಾಲದ ಸುಳಿಗೆ ಸಿಲುಕಿ ದಿವಾಳಿ ಆಗಬೇಕಾಗುತ್ತದೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಕರ್ನಾಟಕ ಚುನಾವಣೆ ಭಾಷಣದಲ್ಲಿ ಹೇಳುವ ಮೂಲಕ ಉಚಿತಗಳ ವಿರುದ್ಧ ಮಾತಾಡಿದ್ದರು.
ಇತ್ತ ಅವರದ್ದೇ ಪಕ್ಷ ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡು 1 ಸಾವಿರ ರೂಪಾಯಿ ಜಮೆ ಮಾಡುವ ಯೋಜನೆ ಘೋಷಿಸಿದೆ.
ಯೋಜನೆ ಅನುಷ್ಠಾನಕ್ಕೆ 8 ಸಾವಿರ ಕೋಟಿ ರೂಪಾಯಿ ಬೇಕಾಗುತ್ತದೆ.
ಜನವರಿ 28ರಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಅವರು ಯೋಜನೆ ಘೋಷಣೆ ಮಾಡಿದರು.
ಮಾರ್ಚ್ 5ರಂದು ಯೋಜನೆಗೆ ಅರ್ಹ ಮಹಿಳೆಯರಿಂದ ಅರ್ಜಿ ಸ್ವೀಕಾರ ಆರಂಭವಾಯಿತು. ಏಪ್ರಿಲ್ 30ರಂದು ಅರ್ಜಿ ಸಲ್ಲಿಕೆ ಕೊನೆಯಾದ ಬಳಿಕ ಮೇ 31ರಂದು ಅರ್ಹ ಫಲಾನುಭವಿಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿತು.
ಇವತ್ತು ಮಹಿಳೆಯರ ಖಾತೆಗೆ 1 ಸಾವಿರ ರೂಪಾಯಿ ಜಮೆ ಮಾಡುವ ಮೂಲಕ ಯೋಜನೆ ಜಾರಿಯಾಗಿದೆ.
ಷರತ್ತುಗಳು ಅನ್ವಯ:
ಬಿಜೆಪಿ ಸರ್ಕಾರ ಈ ಯೋಜನೆಗೆ ಪ್ರಮುಖ 7 ಷರತ್ತುಗಳನ್ನು ಹಾಕಿದೆ.
1. 23ರಿಂದ 60 ವರ್ಷದ ಮಹಿಳೆಯರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ.
2. ಕುಟುಂಬದ ಆದಾಯ ಎರಡೂವರೆ ಲಕ್ಷ ರೂಪಾಯಿಗಿಂತ ಜಾಸ್ತಿ ಇದ್ದರೆ ಅವರಿಗೆ ಯೋಜನೆಯ ಲಾಭ ಸಿಗಲ್ಲ.
3. ವಿಧವಾ ವೇತನ ಸೇರಿದಂತೆ ರಾಜ್ಯ ಅಥವಾ ಕೇಂದ್ರ ಸರ್ಕಾರದ ಇತರೆ ಯೋಜನೆಗಳಡಿಯಲ್ಲಿ ತಿಂಗಳಿಗೆ ಹಣಕಾಸು ನೆರವು ಪಡೆಯುತ್ತಿದ್ದರೆ ಅವರಿಗೆ ಈ ಯೋಜನೆ ಲಾಭ ಸಿಗಲ್ಲ.
4. ಕುಟುಂಬದಲ್ಲಿ ಯಾರಾದರೂ ಆದಾಯ ತೆರಿಗೆ ಪಾವತಿಸಿದರೆ ಆ ಕುಟುಂಬವೂ ಯೋಜನೆಯಿಂದ ಹೊರಗುಳಿದಿದೆ.
5. ಸರ್ಕಾರಿ ನೌಕರರ ಕುಟುಂಬದವರು ಯೋಜನೆಯ ಫಲಾನುಭವಿಗಳಲ್ಲ.
6. 4 ಚಕ್ರದ ವಾಹನಗಳಿದ್ದರೆ (ಟ್ರ್ಯಾಕ್ಟರ್ ಒಳಗೊಂಡಂತೆ) ಆ ಕುಟುಂಬದ ಮಹಿಳೆಯರಿಗೂ ಯೋಜನೆ ಅನ್ವಯಿಸಲ್ಲ.
7. 5 ಎಕರೆಗಿಂತ ಅಧಿಕ ಭೂಮಿ ಹೊಂದಿದ್ದರೆ ಆ ಕುಟುಂಬಕ್ಕೈ ಯೋಜನೆ ಲಾಭ ಸಿಗಲ್ಲ.
ADVERTISEMENT