ಉಚಿತ ಪ್ರಯಾಣಕ್ಕೆ ವಿಳಾಸ ದಾಖಲೆಯ Xerox Copy ಸಾಕು – KSRTC ಸುತ್ತೋಲೆ

ಭಾನುವಾರದಿಂದ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಆಗಿದೆ. ಮಹಿಳಾ ಪ್ರಯಾಣಿಕರು ವಿಳಾಸ ದಾಖಲೆ ತೋರಿಸುವ ಸಂಬಂಧ ಕೆಎಸ್​ಆರ್​ಟಿಸಿ ಕೊಂಚ ಬದಲಾವಣೆ ಮಾಡಿದೆ.

ಝೆರಾಕ್ಸ್​ ಕಾಪಿ ಸಾಕು:

ಪ್ರಯಾಣದ ವೇಳೆ ಆಧಾರ್​ ಕಾರ್ಡ್​ ಅಥವಾ ಮತದಾರರ ಗುರುತಿನ ಚೀಟಿ ಅಥವಾ ರೇಷನ್​ ಕಾರ್ಡ್​ ಹೀಗೆ ವಿಳಾಸದ ಮಾಹಿತಿ ಇರುವ ದಾಖಲೆಗಳ ಜೆರಾಕ್ಸ್​ ಪ್ರತಿಯನ್ನು ತೋರಿಸದರೆ ಸಾಕು.

ಈ ದಾಖಲೆಗಳ ಮೂಲ ಪ್ರತಿಯನ್ನು ತೋರಿಸುವ ಅಗತ್ಯವಿಲ್ಲ. ಭಾವಚಿತ್ರ ಇರುವ ವಿಳಾಸ ದಾಖಲೆಗಳ ಝೆರಾಕ್ಸ್​ ಪ್ರತಿ ತೋರಿಸದರೆ ಸಾಕು ಎಂದು ಕೆಎಸ್​ಆರ್​ಟಿಸಿ ಆದೇಶದಲ್ಲಿ ಹೇಳಿದೆ.

ಈ ನಿಯಮ ಬಿಎಂಟಿಸಿ, ವಾಯುವ್ಯ ಕರ್ನಾಟಕ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್​ಗಳಲ್ಲೂ ಅನ್ವಯವಾಗಲಿದೆ.

ಶಕ್ತಿ ಸ್ಮಾರ್ಟ್​ ಕಾರ್ಡ್​ಗೆ ಅಗತ್ಯ ದಾಖಲೆಗಳು:

ಮೂರು ತಿಂಗಳೊಳಗೆ ಶಕ್ತಿ ಸ್ಮಾರ್ಟ್​ ಕಾರ್ಡ್​ಗೆ ವಿಳಾಸದ ಮಾಹಿತಿ ಇರುವ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಆಧಾರ್​ ಕಾರ್ಡ್​, ಮತದಾರರ ಗುರುತಿನ ಚೀಟಿ, ಪ್ಯಾನ್​ ಕಾರ್ಡ್​, ಪಡಿತರ ಚೀಟಿ ಒಳಗೊಂಡಂತೆ ಸರ್ಕಾ ನೀಡಿರುವ ಭಾವಚಿತ್ರ ಇರುವ ಗುರುತಿನ ಚೀಟಿಯ ಮಾಹಿತಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

ಸೇವಾಸಿಂಧು ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು ಅಥವಾ ಆನ್​ಲೈನ್​ನಲ್ಲೇ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಧ ದಿನದಲ್ಲೇ 5 ಲಕ್ಷ ಮಂದಿ ಪ್ರಯಾಣ:

ಶಕ್ತಿ ಯೋಜನೆ ಜಾರಿಯಾದ ಬಳಿಕ ನಿನ್ನೆ 11 ಗಂಟೆಗಳ ಅವಧಿಯಲ್ಲಿ ಕರ್ನಾಟಕದಲ್ಲಿ 5 ಲಕ್ಷದ 71 ಸಾವಿರದಷ್ಟು ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ.

5.71 ಲಕ್ಷದಷ್ಟು ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣದ ವೆಚ್ಚ 1 ಕೋಟಿ 40 ಲಕ್ಷದ 22 ಸಾವಿರ ರೂಪಾಯಿ.

ನಿನ್ನೆ ಮಧ್ಯಾಹ್ನ 1 ಗಂಟೆಯಿಂದ ಮಧ್ಯರಾತ್ರಿ 12 ಗಂಟೆವರೆಗೆ ಶಕ್ತಿ ಯೋಜನೆಯಡಿಯಲ್ಲಿ ಪ್ರಯಾಣಿಸಿದ ಮಹಿಳಾ ಪ್ರಯಾಣಿಕರ ಸಂಖ್ಯೆಯನ್ನು ಸಾರಿಗೆ ಇಲಾಖೆ ಬಿಡುಗಡೆ ಮಾಡಿದೆ.

ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್​ನಲ್ಲಿ 1 ಲಕ್ಷದ 93 ಸಾವಿರದ 831 ಮಂದಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಇವರ ಉಚಿತ ಪ್ರಯಾಣದ ವೆಚ್ಚ 58 ಲಕ್ಷದ 16 ಸಾವಿರ ರೂಪಾಯಿ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 2 ಲಕ್ಷದ 1 ಸಾವಿರದ 215 ಮಂದಿ ಮಹಿಳೆಯರು ಪ್ರಯಾಣಿಸಿದ್ದು ಇವರ ಉಚಿತ ಪ್ರಯಾಣದ ವೆಚ್ಚ 26 ಲಕ್ಷದ 19 ಸಾವಿರ ರೂಪಾಯಿ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 1 ಲಕ್ಷದ 22 ಸಾವಿರದ 354 ಮಂದಿ ಪ್ರಯಾಣಿಸಿದ್ದು ಇವರ ಉಚಿತ ಪ್ರಯಾಣದ ವೆಚ್ಚ 36 ಲಕ್ಷದ 17 ಸಾವಿರ ರೂಪಾಯಿ.

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 53 ಸಾವಿರದ 623 ಮಂದಿ ಪ್ರಯಾಣಿಸಿದ್ದು ಇವರ ಉಚಿತ ಪ್ರಯಾಣದ ವೆಚ್ಚ 19 ಲಕ್ಷದ 70 ಸಾವಿರ ರೂಪಾಯಿ.