ADVERTISEMENT
ಮುಸಲ್ಮಾನ ಮಹಿಳೆಯರ ಬಗ್ಗೆ ಅಸಭ್ಯ, ಅಶ್ಲೀಲ ಮತ್ತು ಮಾನಹಾನಿಕರ ಮತ್ತು ಮುಸಲ್ಮಾನರ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಸಾಮಾಜಿಕ ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ಕೊಟ್ಟಿರುವ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಾಗಿದೆ.
ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ನೀಡಿರುವ ದೂರಿನ ಸಾರಾಂಶ ಈ ರೀತಿ ಇದೆ.
ವಿಷಯ : ಮಹಿಳೆಯರನ್ನು ಚುಡಾಯಿಸಿ, ಲೈಂಗಿಕವಾಗಿ ಅವಮಾನಿಸಿ, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದಿಸಿ, ಸಾರ್ವಜನಿಕವಾಗಿ ಬೆದರಿಕೆಯೊಡ್ಡಿ, ಧರ್ಮವನ್ನು ಅವಮಾನಿಸಿ, ಧರ್ಮಗಳ ಮಧ್ಯೆ ಎತ್ತಿಕಟ್ಟಿ ಗಲಭೆ ನಡೆಸಿ ಸಾವು ನೋವುಗಳನ್ನು ಪ್ರಚೋದಿಸಿದ ವೃತ್ತಿಪರ ಕ್ರಿಮಿನಲ್ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಇತರರ ವಿರುದ್ದ IPC 1860 – 354, 294, 509, 506, 153A, 295, 295A, 298 ಮತ್ತು IPC 12 Contempt of Court Act 1971 ಅಡಿಯಲ್ಲಿ ಪ್ರಕರಣ ದಾಖಲಿಸಿ ರೌಡಿಶೀಟರ್ ತೆರೆದು ಕಾನೂನು ಕ್ರಮ ಕೈಗೊಳ್ಳುವಂತೆ ದೂರು.
ರವಿವಾರ ದಿನಾಂಕ 24.12.2023 ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ಎಂಬಾತನು “ಮುಸ್ಲಿಂ ಮಹಿಳೆಯರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ. ಮುಸ್ಲಿಂ ಯುವಕರು ಮಾತ್ರ ಅಲ್ಲ. ಮುಸ್ಲಿಂ ಯುವತಿಯರು ಮೋಸ ಮಾಡುತ್ತಿದ್ದಾರೆ. ಹಿಂದೂ ಯುವಕ ಯುವತಿಯರನ್ನ ಲವ್ ಜಿಹಾದ್ ಮಾಡುತ್ತಿದ್ದಾರೆ. ನಿಮ್ಮಲ್ಲಿ ಯುವತಿ ಯುವಕರು ಇಲ್ಲವೇ?” ಎಂದು ಹೇಳಿಕೆ ನೀಡಿದ್ದಾನೆ. ಈ ಹೇಳಿಕೆಯು ಮಹಿಳೆಯರ ಖಾಸಗಿತನ, ಮಹಿಳೆಯನ್ನು ಲೈಂಗಿಕವಾಗಿ ನಿಂದಿಸುವ, ಮಹಿಳೆಯ ಮೇಲೆ ಸಾರ್ವಜನಿಕರು ಬಲಪ್ರಯೋಗಿಸುವಂತೆ ಪ್ರಚೋದಿಸುವ, ಮಹಿಳೆಗೆ ಲೈಂಗಿಕ, ಜೀವ ಬೆದರಿಕೆ ಒಡ್ಡುವ, ಮಹಿಳೆಯರ ಖಾಸಗಿ ವಿಷಯವನ್ನು ಅಶ್ಲೀಲಗೊಳಿಸುವಿಕೆ, ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯ ಬಗೆಗೆ ಅಶ್ಲೀಲವಾಗಿ ಮಾತನಾಡಿದ, ಸಾರ್ವಜನಿಕವಾಗಿ ಮಹಿಳೆಯರನ್ನು ಚುಡಾಯಿಸಿದ, ಮಹಿಳೆಯರ ಘನತೆಗೆ ಅಡ್ಡಿಯಾದ ಪ್ರಕರಣವಾದ್ದರಿಂದ ಐಪಿಸಿ ಸೆಕ್ಷನ್ 294, 354, 509, 506, ಪ್ರಕಾರ ಅಪರಾಧವಾಗಿದೆ.
ಮುಂದುವರೆದು ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, “ದೇಶವನ್ನ ಉಳಿಸಿಕೊಳ್ಳುವ ಮಹತ್ ಕಾರ್ಯ ಹಿಂದೂಗಳಿಂದ ಮಾತ್ರ ಸಾಧ್ಯ. ಮುಸ್ಲಿಂಮರಿಗೆ ಹಲವು ದೇಶಗಳು ಇವೆ. ಆದರೆ ಹಿಂದೂಗಳಿಗೆ ಭಾರತ ಮಾತ್ರ ಇರೋದು. ಹಿಂದೂಗಳಿಗೆ ಬೇರೆ ಕಡೆ ಜಾಗ ಇಲ್ಲ, ಅದಕ್ಕಾಗಿ ನಾವು ಹೋರಾಟ ಮಾಡಬೇಕು.ದೇಶದಲ್ಲಿ ನಾವು ಹಿಂದೂಗಳು ಉಳಿಯುವುದು ಹೇಗೆ? ಹಿಂದೂಗಳು ಕಡಿಮೆ ಆದರೇ ಪಾಕಿಸ್ತಾನ ಜಿಂದಾಬಾದ್ ಅನ್ನುತ್ತಾರೆ. ದೇಶದ ಆದಾಯದ ಮೊದಲ ಭಾಗ ಮುಸಲ್ಮಾನರಿಗೆ ಎಂದು ಮನಮೋಹನ್ ಸಿಂಗ್ ಹೇಳಿದ್ರು. 10 ಸಾವಿರ ಕೋಟಿ ಮುಸ್ಲಿಮರಿಗೆ ಮೀಸಲು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಯಾರಪ್ಪನ ದುಡ್ಡು ಅವರಿಗೆ ನೀವು ಮೀಸಲಿಡಲು. ಸರ್ಕಾರಕ್ಕೆ ತೆರಿಗೆ ಕಟ್ಟುವುದು ಹಿಂದೂಗಳು” ಎಂದು ಹೇಳಿದ್ದಾನೆ. ಇದು ಎರಡು ಧರ್ಮಗಳನ್ನು ಎತ್ತಿಕಟ್ಟಿ ಗಲಭೆ ಮಾಡಿಸುವ, ಧರ್ಮಗಳ ಮಧ್ಯೆ ಅಪನಂಬಿಕೆ ಹುಟ್ಟಿಸಿ, ಸಾಮಾಜಿಕ ಅಶಾಂತಿ ಸೃಷ್ಟಿಸುವ, ಧರ್ಮವೊಂದನ್ನು ಅವಹೇಳನ ಮಾಡುವ ಕೃತ್ಯವಾಗಿದ್ದು ಐಪಿಸಿ 153a, 295, 295a, 298 ಪ್ರಕಾರ ಅಪರಾಧವಾಗಿದೆ.
ಮುಂದುವರೆದು ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟನು “ನಮ್ಮ ಕೋರ್ಟ್ ವ್ಯವಸ್ಥೆ ಹೇಗಿದೆ? ಕಸಾಬ್ ಗಾಗಿ ರಾತ್ರಿ ಕೋರ್ಟ್ ತೆರೆಯಿತು” ಎಂದು ಸಾರ್ವಜನಿಕವಾಗಿ ಹೇಳಿದ್ದಾನೆ. ಭಾರತದ ಸಂವಿಧಾನ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲದ ವ್ಯಕ್ತಿ ಮಾತ್ರ ಹೀಗೆ ಹೇಳಲು ಸಾಧ್ಯ. ಭಯೋತ್ಪಾದಕ ಕಸಬ್ ಗೂ ಭಾರತದ ಮುಸ್ಲಿಂ ಸಮುದಾಯಕ್ಕೂ ಯಾವ ಸಂಬಂಧವೂ ಇಲ್ಲ. ಮುಸ್ಲೀಮರೂ ಸೇರಿದಂತೆ ಭಾರತದ ಪ್ರತಿಯೊಬ್ಬ ನಾಗರಿಕರು ಕಸಬ್ ನ ಕೃತ್ಯವನ್ನು ಖಂಡಿಸುತ್ತಾರೆ. ಆದರೆ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನು ಕಸಬ್ ನನ್ನು ತನ್ನ ಕೃತ್ಯಗಳಿಗೆ ಬಳಸಿಕೊಂಡಿದ್ದಾನೆ. ಮಾತ್ರವಲ್ಲದೆ ಕಸಬ್ ಗೆ ಶಿಕ್ಷೆ ನೀಡಿರುವ ನ್ಯಾಯಾಲಯವನ್ನು ಟೀಕಿಸಿದ್ದಾನೆ. “ಕಸಬ್ ಗಾಗಿ ಕೋರ್ಟ್ ರಾತ್ರಿ ತೆರೆಯಿತು. ಕೋರ್ಟ್ ವ್ಯವಸ್ಥೆ ಹೇಗಿದೆ” ಎಂದು ಟೀಕಿಸಿ ಕಸಬ್ ಗೆ ಶಿಕ್ಷೆ ನೀಡಲು ನ್ಯಾಯಾಲಯ ಕೈಗೊಂಡಿರುವ ತುರ್ತು ಕ್ರಮವನ್ನು ಟೀಕಿಸುವ ಮೂಲಕ IPC 12 Contempt of Court Act 1971 ಪ್ರಕಾರ ಗುರುತರ ಅಪರಾಧ ಮಾಡಿದ್ದಾನೆ.
ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ಟನು ವೃತ್ತಿಪರ ಕ್ರಿಮಿನಲ್ ಆರೋಪಿಯಾಗಿದ್ದಾನೆ. ಜೀವನ ನಿರ್ವಹಣೆಗಾಗಿ ಯಾವುದೇ ನಿರ್ದಿಷ್ಟ ವೃತ್ತಿ ಹೊಂದಿಲ್ಲದ ಈತ ಈ ಹಿಂದೆಯೂ ಸಾಮಾಜಿಕ ಅಶಾಂತಿ, ಗಲಭೆ ಸೃಷ್ಟಿ, ಮಹಿಳೆಯರ ಅವಹೇಳನ, ಹುಡುಗಿಯರ ಚುಡಾವಣೆ, ಧರ್ಮಗಳ ಅವಹೇಳನ ಪ್ರಕರಣಗಳದ್ದೇ ರೀತಿಯ ಕೃತ್ಯಗಳನ್ನು ಹಲವು ಬಾರಿ ನಡೆಸಿದ್ದಾನೆ. ಕರ್ನಾಟಕದ ಹಲವು ಠಾಣೆಗಳಲ್ಲಿ ಈತನ ವಿರುದ್ದ ಈ ಹಿಂದೆ ಇಂತದ್ದೇ ಪ್ರಕರಣಗಳು ದಾಖಲಾಗಿದೆ. ಆದರೂ ಬುದ್ದಿ ಕಲಿಯದ ಈತ ತನ್ನ ಚಾಳಿಯನ್ನು ಮುಂದುವರೆಸಿದ್ದು, ಆದ್ದರಿಂದ ಈತನ ವಿರುದ್ದ ರೌಡಿ ಹಾಳೆ ತೆರೆದು, IPC 1860 – 354, 294, 509, 506, 153A, 295, 295A, 298 ಮತ್ತು IPC 12 Contempt of Court Act 1971 ಅಡಿಯಲ್ಲಿ ಪ್ರಕರಣ ದಾಖಲಿಸಿ ಮಹಿಳೆಯರಿಗೆ ಮತ್ತು ಸಾರ್ವಜನಿಕರಿಗೆ ರಕ್ಷಣೆ ನೀಡಬೇಕು ಎಂದು ದೂರು
ತಮ್ಮ ವಿಶ್ವಾಸಿ
ನಜ್ಮಾ ನಝೀರ್ ಚಿಕ್ಕನೇರಳೆ
ADVERTISEMENT