ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿದಂತೆ ದೇಶದ ಹಲವಾರು ಸಮಸ್ಯೆಗಳ ಕುರಿತು ಫೆಬ್ರವರಿ 16 ರಂದು ಭಾರತ್ ಬಂದ್ ನಡೆಸಲಿದ್ದೇವೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಷ್ಕರಕ್ಕೆ ಹಲವು ಕಾರಣವಾಗಿದೆ. ಎಂಎಸ್‌ಪಿ ಗ್ಯಾರಂಟಿ, ನಿರುದ್ಯೋಗ, ಅಗ್ನಿವೀರ್ ಯೋಜನೆ, ನಿವೃತ್ತರಾಗುವ ಜನರಿಗೆ ಪಿಂಚಣಿ ಯೋಜನೆ ಸಿಗದಿರುವುದು ಬಹುದೊಡ್ಡ ಸಮಸ್ಯೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ್ ಬಂದ್‌ಗೆ ನಿರ್ಧಾರ ಮಾಡಲಾಗಿದೆ.
ಫೆ. 16ರ ಭಾರತ್ ಬಂದ್‌ಗೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸೇರಿದಂತೆ ಹಲವಾರು ರೈತ ಸಂಘಟನೆಗಳು ಬೆಂಬಲಿಸಿವೆ. ಭಾರತ್ ಬಂದ್‌ಗೆ ರೈತರ ಸಂಘಟನೆಗಳು, ವ್ಯಾಪಾರಸ್ಥರು ಮತ್ತು ಸಾಗಣೆದಾರರು ಬೆಂಬಲಿಸಲು ಮನವಿ ಮಾಡಿದರು.
ಈಗಾಗಲೇ ವ್ಯಾಪಾರಿಗಳ ಬಳಿಯೂ ಬೆಂಬಲಕ್ಕಾಗಿ ಮನವಿ ಮಾಡಿದ್ದೇವೆ. ಜನರು ಸಹ ಆ ದಿನ ಯಾವುದೇ ಖರೀದಿಯನ್ನು ಮಾಡಬಾರದು. ರೈತರು ಮತ್ತು ಕಾರ್ಮಿಕರಿಗೆ ಬೆಂಬಲವಾಗಿ ಅಂಗಡಿಗಳನ್ನು ಮುಚ್ಚುವಂತೆ ನಾವು ಅಂಗಡಿಕಾರರಲ್ಲಿ ಮನವಿ ಮಾಡುತ್ತೇವೆ. ಇದು ಬರೀ ರೈತರ ಧರಣಿಯಲ್ಲ, ಇತರ ಸಂಘಟನೆಗಳೂ ಇದರಲ್ಲಿ ಪಾಲ್ಗೊಳ್ಳಲಿವೆ ಎಂದು ಮಾಹಿತಿ ನೀಡಿದರು.