B.Ed ಪದವೀಧರರು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರಾಗಲು ಅರ್ಹರಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಅನಿರುದ್ಧ ಬೋಸ್ ಮತ್ತು ನ್ಯಾಯಮೂರ್ತಿ ಸುಧಾನ್ಶು ಧುಲಿಯಾ ಅವರಿದ್ದ ಸುಪ್ರೀಂಕೋರ್ಟ್ನ ದ್ವಿಸದಸ್ಯ ಪೀಠ ರಾಜಸ್ಥಾನ ಹೈಕೋರ್ಟ್ನ ತೀರ್ಪನ್ನು ಎತ್ತಿಹಿಡಿದಿದೆ.
ಹಿನ್ನೆಲೆ ಏನು..?
2018ರ ಜೂನ್ 28ರಂದು ಶಿಕ್ಷಕರ ಶಿಕ್ಷಣಕ್ಕಾಗಿರುವ ರಾಷ್ಟ್ರೀಯ ಪರಿಷತ್ತು ಹೊರಡಿಸಿದ ಅಧಿಸೂಚನೆ ಪ್ರಕಾರ ಒಂದರಿಂದ ಐದನೇ ತರಗತಿವರೆಗೆ ಪ್ರಾಥಮಿಕ ಶಿಕ್ಷಕರಾಗಲು B.Ed ಪದವೀಧರರು ಅರ್ಹರೆಂದು ಆದೇಶಿಸಿತ್ತು. ಆದರೆ ರಾಜಸ್ಥಾನ ಶಿಕ್ಷಣ ಮಂಡಳಿ ಹೊರಡಿಸಿದ್ದ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಅರ್ಹತಾ ಪಟ್ಟಿಯಿಂದ B.Ed ಪದವೀಧರರನ್ನು ಕೈಬಿಡಲಾಗಿತ್ತು. ರಾಜಸ್ಥಾನ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿತ್ತು.
ಇತ್ತ ಪ್ರಾಥಮಿಕ ಶಿಕ್ಷಣ (D.EI.Ed) ಡಿಪ್ಲೋಮಾ ಪದವೀಧರರು B.Ed ಪದವೀಧರರು ಪ್ರಾಥಮಿಕ ಶಿಕ್ಷಕರಾಗಲು ಅರ್ಹ ಎಂಬ ರಾಷ್ಟ್ರೀಯ ಪರಿಷತ್ತು ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ದಾವೆ ಹೂಡಿದ್ದರು.
ಸುಪ್ರೀಂಕೋರ್ಟ್ ಹೇಳಿದ್ದೇನು..?
ಸಂವಿಧಾನದ ವಿಧಿ 21ಎ ಅಡಿಯಲ್ಲಿ ಶಿಕ್ಷಣ ಹಕ್ಕು ಮೂಲಭೂತ ಹಕ್ಕಾಗಿದೆ. ಗುಣಮಟ್ಟದ ಶಿಕ್ಷಣ ಮೂಲಭೂತ ಹಕ್ಕಾಗಿದೆ. ಒಂದು ವೇಳೆ ಅರ್ಥಪೂರ್ಣ ಶಿಕ್ಷಣವಾಗದೇ ಹೋದರೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣದಿಂದ ಪ್ರಯೋಜನವಿಲ್ಲ. ಅಂದರೆ ಪ್ರಾಥಮಿಕ ಶಿಕ್ಷಣ ಗುಣಮಟ್ಟದ ಶಿಕ್ಷಣವಾಗಿರಬೇಕು.
ಗುಣಮಟ್ಟದ ಶಿಕ್ಷಣಕ್ಕೆ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು ಇರುವುದು ಮೊದಲ ಆದ್ಯತೆಯಾಗಿದೆ. ಶಿಕ್ಷಕರ ಅರ್ಹತೆಯಲ್ಲಿ ಯಾವುದೇ ರಾಜಿ ಗುಣಮಟ್ಟದ ಶಿಕ್ಷಣದಲ್ಲೂ ರಾಜಿ ಮಾಡಿಕೊಂಡಂತೆ.
B.Ed ಪದವೀಧರರಿಗೆ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪಾಠ ಮಾಡಲು ತರಬೇತಿ ನೀಡಲಾಗುತ್ತದೆಯೇ ಹೊರತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಲ್ಲ. ಆದರೆ D.EI.Ed ಡಿಪ್ಲೋಮಾ ಪದವೀಧರರಿಗೆ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪಾಠ ಮಾಡಲು ಯೋಗ್ಯವಾದ ತರಬೇತಿಗಳನ್ನು ನೀಡಲಾಗುತ್ತದೆ
ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ADVERTISEMENT
ADVERTISEMENT