Bitcoin ಹಗರಣ: ಈ ಹಿಂದೆ ತನಿಖೆ ಮಾಡಿದ್ದ CCB ಪೊಲೀಸ್​ ಅಧಿಕಾರಿಗಳ ವಿರುದ್ಧವೇ FIR

ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮುಖ್ಯಮಂತ್ರಿ ಆದ ಬಳಿಕ ಕರ್ನಾಟಕ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದ್ದ ಬಿಟ್​ಕಾಯಿನ್​ ಹಗರಣ (Bit Coin Scam) ಸಂಬಂಧ ವಿಶೇಷ ತನಿಖಾ ತಂಡ (SIT) ಈ ಹಿಂದೆ ಹಗರಣದ ತನಿಖೆ ಮಾಡಿದ್ದ ಬೆಂಗಳೂರು ನಗರದ ಅಪರಾಧ ಪತ್ತೆ ದಳ (Bengaluru CCB) ಪೊಲೀಸ್​ ಅಧಿಕಾರಿಗಳ ತಂಡದ ವಿರುದ್ಧವೇ ಎಫ್​ಐಆರ್ (FIR)​ ದಾಖಲಿಸಿದೆ.

ಆಗಸ್ಟ್​ 9ರಂದು ಬೆಂಗಳೂರು ನಗರದ ಕಾಟನ್​ಪೇಟೆ ಪೊಲೀಸ್​ ಠಾಣೆಯಲ್ಲಿ ಸಿಐಡಿ (CID) ಡಿವೈಎಸ್​ಪಿ ಕೆ ರವಿಶಂಕರ್​ ಅವರು ನೀಡಿದ ದೂರಿನ ಮೇರೆ ಎಫ್​ಐಆರ್​ ದಾಖಲಿಸಲಾಗಿದೆ.

ಐಪಿಸಿ ಕಲಂ 204, 120ಬಿ, 409 ಮತ್ತು 426 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಾಧ ನಡೆದ ದಿನವನ್ನು ನವೆಂಬರ್​ 9,2020ರಿಂದ ಡಿಸೆಂಬರ್​ 16,2020ರವರೆಗೆ ಎಂದು ಎಫ್​ಐಆರ್​ನಲ್ಲಿ ದಾಖಲಿಸಲಾಗಿದೆ. ಕಾಟನ್​ಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಕೃತ್ಯ ನಡೆದಿದೆ ಎಂದು ಎಫ್​ಐಆರ್​ನಲ್ಲಿ ಹೇಳಲಾಗಿದೆ.

ವಿಧಿವಿಜ್ಞಾನ ಪ್ರಯೋಗಾಲದ ವರದಿ ಜುಲೈ 19ರಂದು ಲಭ್ಯವಾದ ಹಿನ್ನೆಲೆಯಲ್ಲಿ ಮತ್ತು ಆ ವರದಿಯಲ್ಲಿನ ಅಂಶಗಳನ್ನು ಅಪರಾಧಿಕ ಕೃತ್ಯ ಜರುಗಿರುವುದನ್ನು ಖಾತ್ರಿಪಡಿಸಿಕೊಂಡು ದೂರು ನೀಡಲು ವಿಳಂಬವಾಗಿರುತ್ತದೆ ಎಂದು ಎಫ್​ಐಆರ್​ನಲ್ಲಿ ಹೇಳಲಾಗಿದೆ.

ಜುಲೈ 18ರಂದು ಸಿಐಡಿಯಲ್ಲೇ ಇರುವ ವಿಶೇಷ ತನಿಖಾ ತಂಡ ಬಿಟ್​ಕಾಯಿನ್​ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಎರಡು ಮ್ಯಾಕ್​ಬುಕ್ಸ್​, ಪೆನ್​ಡ್ರೈವ್​ಗಳು, ಒಂದು ಹಾರ್ಡ್​ ಡಿಸ್ಕ್​ ಮತ್ತು ಹಲವು ದಾಖಲಾತಿಗಳನ್ನು ಎಸ್​ಐಟಿ ವಶಕ್ಕೆ ಪಡೆದಿತ್ತು.

ಕಳೆದ ತಿಂಗಳ ಜುಲೈ 23 ಲಭ್ಯವಾದ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಆಧರಿಸಿ ಎಫ್​ಐಆರ್​ ದಾಖಲಿಸಲಾಗಿದೆ. 2020ರ ನವೆಂಬರ್​ 9ರಿಂದ ಡಿಸೆಂಬರ್​ 16ರವರೆಗೆ ಸಿಸಿಬಿಯಲ್ಲಿನ ಪೊಲೀಸ್​ ಅಧಿಕಾರಿಗಳೇ ಹಗರಣದ ಆರೋಪಿಯನ್ನು ರಕ್ಷಿಸುವ ಸಲುವಾಗಿ ಸಿಸಿಬಿ ಕಚೇರಿ ಮತ್ತು ಹಲವು ಕಡೆಗಳಲ್ಲಿ ತಾವೇ ಸಾಕ್ಷ್ಯಗಳನ್ನು ಇರಿಸಿ ಕ್ರಿಮಿನಲ್​ ಒಳಸಂಚು ಮಾಡಿದ್ದಾರೆ ಎಂದು ಎಫ್​ಐಆರ್​ನಲ್ಲಿ ಆರೋಪಿಸಲಾಗಿದೆ. 

LEAVE A REPLY

Please enter your comment!
Please enter your name here