ಯಾವ ಸಮುದಾಯ ಯಾವ ಪಕ್ಷದ ಪರ ವೋಟ್ ಮಾಡಿದೆ ಗೊತ್ತಾ? ಇಲ್ಲಿದೆ ಅಸಲಿ ಲೆಕ್ಕ..

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವ್ಯಾವ ಜಾತಿಗಳು, ಸಮುದಾಯಗಳು ಯಾವ ಪಕ್ಷದ ಪರ ನಿಂತರು.. ಕಾಂಗ್ರೆಸ್ ೧೩೫ ಸ್ಥಾನಗಳನ್ನು ಗೆಲ್ಲಲು, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸೋಲಲು ಯಾವ ಯಾವ ಜಾತಿ, ಸಮುದಾಯಗಳು ಕಾಣಿಕೆ ನೀಡಿವೆ ಎಂಬುದರ ಲೆಕ್ಕ ಈಗ ಅನಾವರಣವಾಗಿದೆ

ಬಿಜೆಪಿ ಪರವೇ ನಿಂತಿದೆ ಮೇಲ್ವರ್ಗ
ಬಿಜೆಪಿ ಪರವೇ ಮೇಲ್ವರ್ಗ ನಿಂತಿದೆ. ಮೇಲ್ವರ್ಗದ ಸಮುದಾಯದ ಮತಗಳಲ್ಲಿ ಕಾಂಗ್ರೆಸ್‌ಗೆ ಶೇಕಡಾ 22ರಷ್ಟು ಮತಗಳು ಮಾತ್ರ ಬಂದಿದೆ. ಶೇಕಡಾ 60ರಷ್ಟು ಮತಗಳು ಬಿಜೆಪಿ ಪಾಲಾಗಿವೆ. ಮೇಲ್ವರ್ಗದ ಶೇಕಡಾ 14ರಷ್ಟು ಮಂದಿ ಜೆಡಿಎಸ್‌ಗೆ ವೋಟ್ ಮಾಡಿದ್ದಾರೆ.

ಕಾಂಗ್ರೆಸ್ ಪರ ಒಕ್ಕಲಿಗರ ಮತ ಒಕ್ಕಲು
ರಾಜ್ಯದ ಪ್ರಭಾವಿ ಸಮುದಾಯದ ಪೈಕಿ ಒಂದಾಗಿರುವ ಒಕ್ಕಲಿಗರು ಈ ಬಾರಿ ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿರುವುದು ಮತದಾನದ ಸರಳಿಯನ್ನು ಗಮನಿಸಿದರೇ ಅರ್ಥ ಆಗುತ್ತದೆ. ಒಕ್ಕಲಿಗರ ಪೈಕಿ ಶೇಕಡಾ 49ರಷ್ಟು ಮಂದಿ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ.  ಜೆಡಿಎಸ್‌ಗಿಂತ ಬಿಜೆಪಿ ಪರ ಹೆಚ್ಚು ಒಕ್ಕಲಿಗರು ನಿಂತಿದ್ದಾರೆ. ಶೇಕಡಾ 20ರಷ್ಟು ಮಂದಿ ಬಿಜೆಪಿ ಪರವೂ, ಕೇವಲ ಶೇಕಡಾ 17ರಷ್ಟು ಮಂದಿ ಜೆಡಿಎಸ್ ಪರವೂ, ಶೇಕಡಾ 10ರಷ್ಟು ಮಂದಿ ಇತರೆ ಪಕ್ಷ/ಪಕ್ಷೇತರರಿಗೆ ಮತ ನೀಡಿದ್ದಾರೆ.

ಬಿಜೆಪಿ ಪರವೇ ನಿಂತ ಲಿಂಗಾಯತ ವರ್ಗ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಬಿಜೆಪಿ ಕಡೆಗಣಿಸಿದೆ.. ಅಪಮಾನ ಮಾಡಿದೆ ಎಂಬ ಆರೋಪಗಳ ಹೊರತಾಗಿಯೂ ಲಿಂಗಾಯತರು ಬಿಜೆಪಿ ಪರವೇ ನಿಂತಿದ್ದಾರೆ. ಶೇಕಡಾ 56ರಷ್ಟು ಮಂದಿ ಲಿಂಗಾಯತರು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಕಾಂಗ್ರೆಸ್‌ಗೆ ಶೇಕಡಾ 29ರಷ್ಟು ಮಂದಿ, ಶೇಕಡಾ 09ರಷ್ಟು ಮಂದಿ ಲಿಂಗಾಯತರು ಜೆಡಿಎಸ್‌ಗೆ ವೋಟ್ ಹಾಕಿದ್ದಾರೆ.

ಕಾಂಗ್ರೆಸ್‌ಗೆ ಜೈ ಎಂದ ಕುರುಬರು
ಸಿದ್ದರಾಮಯ್ಯ ನಾಯಕತ್ವದ ಪರಿಣಾಮ ಕುರುಬರು ಕಾಂಗ್ರೆಸ್ ಪರ ಬಲವಾಗಿ ನಿಂತಿದ್ದಾರೆ. ಶೇಕಡಾ 56ರಷ್ಟು ಮಂದಿ ಕಾಂಗ್ರೆಸ್ ಪರ, ಶೇಕಡಾ 33ರಷ್ಟು ಮಂದಿ ಬಿಜೆಪಿ ಪರ, ಶೇಕಡಾ 08ರಷ್ಟು ಮಂದಿ ಜೆಡಿಎಸ್ ಪರ ಮತ ಚಲಾಯಿಸಿದ್ದಾರೆ.

ಇತರೆ ಓಬಿಸಿ ವರ್ಗದ ಮತ ವಿಭಜನೆ
ಇತರೆ ಓಬಿಸಿ ವರ್ಗದ ಮತಗಳು ವಿಭಜನೆ ಆಗಿವೆ. ಯಾವುದೇ ಒಂದು ಪಕ್ಷದ ಪರ ಪೂರ್ಣ ಪ್ರಮಾಣದಲ್ಲಿ ನಿಂತಿಲ್ಲ. ಶೇಕಡಾ 34ರಷ್ಟು ಮಂದಿ ಕಾಂಗ್ರೆಸ್ ಪರವೂ, ಶೇಕಡಾ 37ರಷ್ಟು ಮಂದಿ ಬಿಜೆಪಿ ಪರವೂ, ಶೇಕಡಾ 17ರಷ್ಟು ಜೆಡಿಎಸ್ ಪರವೂ, ಇತರರ ಪರ ಶೇಕಡಾ 12 ರಷ್ಟು ವೋಟ್ ಹಾಕಿದ್ದಾರೆ.

ಕಾಂಗ್ರೆಸ್ ಪರ ನಿಂತ ದಲಿತ ವರ್ಗ
ಕಳೆದ ಬಾರಿ ಬಿಜೆಪಿಯತ್ತ ವಾಲಿದ್ದ ದಲಿತ ಸಮುದಾಯ ಮತ್ತೆ ಕಾಂಗ್ರೆಸ್‌ನತ್ತ ವಾಪಸ್ ಆಗಿದೆ.. ಮೀಸಲಾತಿ, ಒಳಮೀಸಲಾತಿ ಗೊಂದಲದ ಕಾರಣ ಬಿಜೆಪಿಯನ್ನು ನಂಬದ ಈ ವರ್ಗ ಕಾಂಗ್ರೆಸ್ ಪರ ನಿಂತಿದೆ. ಕಾಂಗ್ರೆಸ್ ಬೆಂಬಲಿಸಿದ ವರ್ಗದಲ್ಲಿ ದಲಿತರು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ. ಶೇಕಡಾ 63ರಷ್ಟು ಮಂದಿ ಕಾಂಗ್ರೆಸ್‌ಗೆ ವೋಟ್ ಹಾಕಿದ್ದಾರೆ. ಶೇಕಡಾ 23ರಷ್ಟು ಬಿಜೆಪಿ ಪರ, ಶೇಕಡಾ 10ರಷ್ಟು ಮಂದಿ ಜೆಡಿಎಸ್ ಪರ ವೋಟ್ ಹಾಕಿದ್ದಾರೆ.

ಎಸ್‌ಟಿ ಸಮುದಾಯದ ‘ಹಸ್ತ’ಲಾಘವ
ಎಸ್‌ಟಿ ಸಮುದಾಯದ ಹೆಚ್ಚಿನ ಮತಗಳು ಕಾಂಗ್ರೆಸ್ ಪಾಲಾಗಿವೆ. ಶೇಕಡಾ 45ರಷ್ಟು ಮಂದಿ ಕಾಂಗ್ರೆಸ್‌ಗೆ, ಶೇಕಡಾ 39ರಷ್ಟು ಮಂದಿ ಬಿಜೆಪಿಗೆ, ಶೇಕಡಾ 13ರಷ್ಟು ಮಂದಿ ಜೆಡಿಎಸ್‌ಗೆ ವೋಟ್ ಹಾಕಿದ್ದಾರೆ. ಎಸ್‌ಟಿ ಮೀಸಲು ಕ್ಷೇತ್ರಗಳ ಪೈಕಿ ಒಂದರಲ್ಲಿಯೂ ಬಿಜೆಪಿ ಗೆದ್ದಿಲ್ಲ ಎನ್ನುವುದು ಗಮನಾರ್ಹ.

ಕಾಂಗ್ರೆಸ್ ಪರ ಮುಸ್ಲಿಮ್ ಮತಗಳ ಸುನಾಮಿ
ಮುಸ್ಲಿಮರ ಮೀಸಲಾತಿಯನ್ನು ಬಿಜೆಪಿ ಕಿತ್ತುಕೊಂಡ ಪರಿಣಾಮ ಶೇಕಡಾ 70ರಷ್ಟು ಮುಸ್ಲಿಮರು ಕಾಂಗ್ರೆಸ್‌ಗೆ ವೋಟ್ ಹಾಕಿದ್ದಾರೆ.. ತಲಾ 14% ವೋಟ್‌ಗಳು ಬಿಜೆಪಿ ಮತ್ತು ಜೆಡಿಎಸ್ ಪಾಲಾಗಿವೆ.. ಶೇಕಡಾ 06ರಷ್ಟು ಮಂದಿ ಎಸ್‌ಡಿಪಿಐ, ಎಐಎಂಐಎಂ ಮತ್ತು ಇತರೆ ಪಕ್ಷಕ್ಕೆ ಮತ ಹಾಕಿದ್ದಾರೆ.