ಗುಡಿಗೆ ಬಂದ ಯುವತಿ ಜೊತೆ ವಿವಾಹಿತ ಅರ್ಚಕನೊಬ್ಬ ಅಕ್ರಮ ಸಂಬಂಧ ಬೆಳೆಸಿದ. ಕೆಲವು ದಿನ ಈ ಪ್ರೇಮಾಯಣ ಚನ್ನಾಗಿಯೇ ಸಾಗಿತ್ತು. ಆದರೆ, ಮದುವೆ ಮಾಡಿಕೋ ಎಂದು ಯುವತಿ ಒತ್ತಡ ತರಲು ಶುರು ಮಾಡಿದಾಗ ಶುರುವಾಗಿತ್ತು ಅಸಲಿ ಸಮಸ್ಯೆ. ಆಕೆಯನ್ನು ಕೊಲ್ಲು ಪೂಜಾರಿ ಪ್ಲಾನ್ ಮಾಡಿದ. ಯೋಜನೆ ಪ್ರಕಾರ ನಗರದ ಹೊರವಲಯಕ್ಕೆ ಕರೆದೊಯ್ದು ದಾರುಣವಾಗಿ ಪ್ರಿಯತಮೆಯನ್ನು ಕೊಂದು ಹಾಕಿದ. ಮೃತದೇಹವನ್ನು ಸೆಪ್ಟಿಕ್ ಟ್ಯಾಂಕ್ನಲ್ಲಿ ಎಸೆದು, ಅದರ ಮೇಲೆ ಉಪ್ಪು ಮತ್ತು, ಕೆಂಪು ಮಣ್ಣನ್ನು ಸುರಿದ. ಮೃತದೇಹದ ವಾಸೆ ಬರಬಾರದು ಎಂದು ಸೆಪ್ಟಿಕ್ ಟ್ಯಾಂಕ್ಗೆ ಇದ್ದ ಎರಡು ಮ್ಯಾನ್ಹೋಲ್ಗಳನ್ನು ಕಾಂಕ್ರೀಟ್ನಿಂದ ಬಂದ ಮಾಡಿದ ಪೂಜಾರಿ. ನಂತರ ತನೆ ಏನು ಗೊತ್ತಿಲ್ಲ ಎನ್ನುವಂತೆ ತಾನೇ ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೆಂಟ್ ಕೊಟ್ಟ. ಆದರೆ, ಪೊಲೀಸರು ಬಿಡಬೇಕಲ್ಲ. ಕೊಲೆಯ ಗುಟ್ಟನ್ನು ರಟ್ಟು ಮಾಡಿ, ಪೂಜಾರಿಯ ಅಸಲಿ ಮುಖವನ್ನು ಅನಾವರಣ ಮಾಡಿದರು. ಈ ಘಟನೆ ನಡೆದಿರುವುದು ಹೈದರಾಬಾದ್ನ ಸರೂರ್ ನಗರದಲ್ಲಿ.
ಚೆನ್ನೈ ಮೂಲದ ಅಪ್ಸರ ಓರ್ವ ಸಿನಿ ನಟಿ. 30 ವರ್ಷದ ಆಕೆ ತನ್ನ ತಾಯಿ ಜೊತೆ ಹೈದರಾಬಾದ್ಗೆ ವಲಸೆ ಬಂದಿದ್ದರು. ಮನೆ ಬಳಿಯ ಬಂಗಾರು ಮೈಸಮ್ಮ ದೇವಾಲಯಕ್ಕೆ ಆಗಾಗ ತೆರಳುತ್ತಿದ್ದರು. ಅಲ್ಲಿನ ಅರ್ಚಕ ವೆಂಕಟ ಸೂರ್ಯ ಸಾಯಿಕೃಷ್ಣ ಪರಿಚಯವಾದ. ಇಬ್ಬರದ್ದು ಒಂದೇ ಸಮುದಾಯವಾದ ಕಾರಣ ಆಪ್ತತೆ ಹೆಚ್ಚಿ ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಆಗಾಗ ಅಪ್ಸರ ಮನೆಗೂ ವೆಂಕಟ ಸೂರ್ಯ ಸಾಯಿಕೃಷ್ಣ ಹೋಗಿಬರುತ್ತಿದ್ದ. ಬೈಕ್, ಕಾರಲ್ಲಿ ಹತ್ತಿಸಿಕೊಂಡು ಗೋಶಾಲೆ, ದೇವಾಲಯ ಎಂದು ಸುತ್ತಿಸುತ್ತಿದ್ದ.. ಪಾಪ ಅಪ್ಸರ ತಾಯಿಗೆ ಒಂದು ದಿನವೂ ಅನುಮಾನ ಬಂದಿರಲಿಲ್ಲ.
ಪೂಜಾರಿಯ ಎರಡನೇ ಪತ್ನಿಯಾಗಲು ಅಪ್ಸರ ಬಯಸಿದರು. ಹಲವು ಬಾರಿ ಪ್ರಸ್ತಾಪ ಮಾಡಿದರೂ ವೆಂಕಟ ಸೂರ್ಯ ಸಾಯಿಕೃಷ್ಣ ಮಾತು ಬದಲಿಸುತ್ತಿದ್ದ. ಆದರೆ, ಮಾರ್ಚ್ ನಂತರ ನನ್ನನ್ನು ಮದುವೆಯಾಗು ಎಂದು ಅಪ್ಸರ ಒತ್ತಡ ಹೆಚ್ಚಿಸಿದರು. ಆದರೆ, ಪೂಜಾರಿಗೆ ಮಾತ್ರ ಮದುವೆ ಆಗಲು ಇಷ್ಟ ಇರಲಿಲ್ಲ. ಬದಲಿಗೆ ಈಕೆಯನ್ನು ಮುಗಿಸಿ ಮದುವೆ ಒತ್ತಡದಿಂದ ಪಾರಾಗಲು ಪ್ಲಾನ್ ಮಾಡಿದ. ಅದರಂತೆ, ಜೂನ್ 3ರಂದು ರಾತ್ರಿ ಕೋಯಮತ್ತೂರು ಹೋಗೋಣ ಎಂದು ಅಪ್ಸರಾಳನ್ನು ಕಾರಲ್ಲಿ ಹತ್ತಿಸಿಕೊಂಡು ಹೊರಟ. ರಾತ್ರಿ 11 ಗಂಟೆಗೆ ಶಂಷಾಬಾದ್ ಬಳಿ ಊಟ ಮಾಡಿದರು. ಸ್ವಲ್ಪ ಹೊತ್ತಿನ ನಂತರ ಅಪ್ಸರಾ ಕಾರಲ್ಲಿಯೇ ನಿದ್ದೆಗೆ ಜಾರಿದರು. ಆಗ ಪೂಜಾರಿ ಕಾರನ್ನು ಸುಲ್ತಾನ್ಪುರ್ ಗೋಶಾಲೆಯತ್ತ ತಿರುಗಿಸಿದ..
ಬೆಳಗಿನ ಜಾವ 3.30ರ ಸುಮಾರಿಗೆ ನಿದ್ದೆಯಲ್ಲಿದ್ದ ಅಪ್ಸರಾಳನ್ನು ಕಾರಿನ ಬಾಡಿನ ಕವರ್ನಿಂದ ಕೊಲ್ಲಲು ಯತ್ನಿಸಿದ. ಅಪ್ಸರಾ ಪ್ರತಿಭಟಿಸಿದ ಕಾರಣ ಕಾರಿನಲ್ಲಿಯೇ ಇದ್ದ ಬೆಲ್ಲ ಹುಡಿ ಮಾಡುವ ಕಲ್ಲಿನಿಂದ ಎಂಟತ್ತು ಬಾರಿ ಅಪ್ಸರಾ ಮೇಲೆ ಹಲ್ಲೆ ಮಾಡಿದ ಕಾರಣ ಆಕೆ ಕಾರಲ್ಲಿಯೇ ಹೆಣವಾದಳು. ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿರಿಸಿದ ಪೂಜಾರಿ ಬೆಳಗಿನ ಜಾವ ಅದೇ ಕಾರಿನಲ್ಲಿ ಸರೂರ್ನಗರದ ತನ್ನ ಅಪಾರ್ಟ್ಮೆಂಟ್ ಮರಳಿದ.. ಬೆಳಗ್ಗೆ ಅಪ್ಸರಾ ಮನೆಗೆ ತೆರಳಿದ ಪೂಜಾರಿ ಸಾಯಿಕೃಷ್ಣ, ಅವರ ತಾಯಿಗೆ ಅಪ್ಸರಾ ಗೆಳತಿಯರ ಜೊತೆ ಭದ್ರಾಚಲಂಗೆ ಹೋದಳು ಎಂದು ನಂಬಿಸಿದ. ಮಾರನೇ ದಿನ ಅಪ್ಸರ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅವರ ತಾಯಿಯ ಜೊತೆ ಠಾಣೆಗೆ ಹೋಗಿ ದೂರು ನೀಡಿದ್ದ ಪೂಜಾರಿ.
ಜೂನ್ ಐದರ ಸಂಜೆಯವರೆಗೂ ಅಪ್ಸರ ಮೃತದೇಹ ಪೂಜಾರಿ ಕಾರಿನಲ್ಲಿಯೇ ಇತ್ತು. ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ರಾತ್ರಿ ಹೊರವಲಯಕ್ಕೆ ತೆರಳಿ, ಅಲ್ಲಿ ಬಳಕೆಯಲ್ಲಿಲ್ಲದ್ದ ಸೆಪ್ಟಿಕ್ ಟ್ಯಾಂಕ್ಗೆ ಶವ ಎಸೆದು ಎರಡು ಚೀಲ ಉಪ್ಪನ್ನು ಸುರಿದ. ಎರಡು ಟಿಪ್ಪರ್ ಕೆಂಪು ಮಣ್ಣನ್ನು ತರಿಸಿ ಮುಚ್ಚಿ ಹಾಕಿದ್ದ.. ಜೂನ್ ಏಳರಂದು ವಾಸನೆ ಬಂದ ಹಿನ್ನೆಲೆಯಲ್ಲಿ ಮ್ಯಾನ್ ಹೋಲ್ಗಳನ್ನು ಕಾಂಕ್ರೀಟ್ ನಿಂದ ಸೀಲ್ ಮಾಡಿದ್ದ..
ಮತ್ತೊಂದ್ಕಡೆ ಮಿಸ್ಸಿಂಗ್ ಕೇಸ್ ತನಿಖೆ ನಡೆಸಿದ್ದ ಪೊಲೀಸರು, ಶಂಷಾಬಾದ್ ಸುತ್ತಮುತ್ತಲ ಸಿಸಿಟಿವಿ, ಫೋನ್ ಟವರ್ ಲೊಕೇಷನ್ ಪರಿಶೀಲಿಸಿ ಪೂಜಾರಿಯನ್ನು ವಿಚಾರಣೆಗೆ ಒಳಪಡಿಸಿದಾಗ ಅಸಲಿಯತ್ತು ಬಯಲಾಗಿದೆ. ತಾನೆ ಕೊಲೆ ಮಾಡಿದ್ದಾಗಿ ಪೂಜಾರಿ ಒಪ್ಪಿಕೊಂಡಿದ್ದಾನೆ. ಈ ಹಿಂದೆ ಒಮ್ಮೆ ಅಬಾರ್ಷನ್ ಮಾಡಿಸಿದ್ದಾಗಿಯೂ ಒಪ್ಪಿಕೊಂಡಿದ್ದಾನೆ
ADVERTISEMENT
ADVERTISEMENT