ADVERTISEMENT
ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಧರ್ಮವನ್ನು ಕೆದಕಿದ್ದಾರೆ. ಈ ಬಾರಿ ಮೋದಿಯವರ ಟಾರ್ಗೆಟ್ ಆಗಿರೋದು ಭಾನುವಾರ.
ನೋಡಿ ನಮ್ಮ ದೇಶದಲ್ಲಿ ಭಾನುವಾರ ರಜೆ ಇರುತ್ತೆ, ಹಾಲಿ ಡೇ. ಬ್ರಿಟಿಷರು ಇಲ್ಲಿ ಆಡಳಿತ ಮಾಡ್ತಾ ಇದ್ದಾಗ ಕ್ರಿಶ್ಚಿಯನ್ನರು ಭಾನುವಾರವನ್ನು ಪವಿತ್ರ ದಿನ ಎಂದು ಆಚರಿಸ್ತಾರೆ. ಅಲ್ಲಿಂದ ರವಿವಾರದ (ರಜೆ) ಪರಂಪರೆ ಆರಂಭವಾಗಿತ್ತು. ಇಲ್ಲಿ ಭಾನುವಾರ ಹಿಂದೂಗಳಿಗೆ ಸಂಬಂಧಿಸಿದ್ದಲ್ಲ, ಕ್ರಿಶ್ಚಿಯನ್ನರಿಗೆ ಸಂಬಂಧಿಸಿದ್ದು. 200 -300 ವರ್ಷಗಳಿಂದ ಇದು ನಡೀತಿದೆ. ಜಾರ್ಖಂಡ್ನ ಒಂದು ಜಿಲ್ಲೆಯಲ್ಲಿ ರವಿವಾರದ ರಜೆ ಕ್ಯಾನ್ಸಲ್ ಆಗಿ ಶುಕ್ರವಾರ ರಜೆ ಅಂದ್ರು. ಹಿಂದೂಗಳ ಜೊತೆಗೂ ಜಗಳ, ಕ್ರಿಶ್ಚಿಯನ್ನರೊಂದಿಗೂ ಜಗಳ
ಎಂದು ಜಾರ್ಖಂಡ್ನ ದುಮ್ಕಾ ಬಹಿರಂಗ ಪ್ರಚಾರ ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಲೋಕಸಭಾ ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಕ್ರಿಶ್ಚಿಯನ್ನರ ವಿರುದ್ಧ ಹಿಂದೂಗಳನ್ನೂ, ಮುಸಲ್ಮಾನರ ವಿರುದ್ಧ ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾರೆ ಪ್ರಧಾನಿ ಮೋದಿ.
ಧುಮ್ಕಾ ಲೋಕಸಭಾ ಕ್ಷೇತ್ರದಲ್ಲಿ ಮುಸಲ್ಮಾನ ಬಾಹುಳ್ಯದ ಪ್ರದೇಶಗಳಲ್ಲಿರುವ ಶಾಲೆಗಳಲ್ಲಿ ಭಾನುವಾರದ ಬದಲು ಶುಕ್ರವಾರ ರಜೆ ನೀಡಲಾಗಿತ್ತು. ಮುಸಲ್ಮಾನ ವಿದ್ಯಾರ್ಥಿಗಳಿಗಾಗಿ ಭಾನುವಾರದ ಬದಲು ಶುಕ್ರವಾರ ರಜೆ ನೀಡಿದ್ದು ಬಿಜೆಪಿ ಮತ್ತು ಜಾರ್ಖಂಡ್ನಲ್ಲಿರುವ ಜೆಎಂಎಂ-ಕಾಂಗ್ರೆಸ್ ಸರ್ಕಾರದ ನಡುವೆ ಸಂಘರ್ಷಕ್ಕೂ ಕಾರಣವಾಗಿತ್ತು.
ಆದರೆ ಪ್ರಧಾನಿ ನರೇಂದ್ರ ಮೋದಿ ಭಾನುವಾರದ ರಜೆ ಬಗ್ಗೆ ಹೇಳಿದ್ದು ಎಷ್ಟು ಸತ್ಯ..?
ರವಿವಾರ ವಾರದ ರಜಾ ದಿನ ಎಂದು ಮೊದಲ ಬಾರಿಗೆ ಘೋಷಣೆಯಾಗಿದ್ದು ಕ್ರಿಸ್ತಶಕ 321ನೇ ಇಸವಿಯಲ್ಲಿ. ಆ ವರ್ಷ ರೋಮನ್ ಸಾಮ್ರಾಜ್ಯದ ರಾಜ ಕಾನ್ಸಸೈಟೈನ್ ರವಿವಾರವನ್ನು ವಾರದ ರಜಾ ದಿನ ಎಂದು ಘೋಷಿಸಿದ ತನ್ನ. ಭಾನುವಾರದಂದು ರೈತರು ಹೊರತುಪಡಿಸಿ ಉಳಿದ ಯಾರೂ ಯಾರೂ ಯಾವುದೇ ಕೆಲಸ-ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಆದೇಶಿಸಿದ್ದ. ಏಸು ಕ್ರಿಸ್ತ ಮರುಜನ್ಮ ಪಡೆದ ಪುಣ್ಯಕ್ಷಣವನ್ನು ವಾರಕ್ಕೊಂದು ಬಾರಿ ಸ್ಮರಿಸುವುದಕ್ಕಾಗಿ ರೋಮನ್ನಲ್ಲಿ ಎಲ್ಲರಿಗೂ ರಜೆ ನೀಡಲಾಯಿತು. ಎಲ್ಲರೂ ಚರ್ಚ್ಗಳಿಗೆ ಹೋಗಿ ಪ್ರಾರ್ಥನೆ ಮಾಡ್ಬೇಕು ಎನ್ನುವುದು ಆ ರಜೆ ಹಿಂದಿನ ಉದ್ದೇಶವಾಗಿತ್ತು. ಅಲ್ಲಿಂದ ಶುರುವಾದ ಭಾನುವಾರದ ರಜಾ ಪದ್ಧತಿ ಇಡೀ ಪ್ರಪಂಚಕ್ಕೆ ವ್ಯಾಪಿಸಿತು.
ಆದರೆ ಭಾರತದಲ್ಲಿ ಭಾನುವಾರ ರಜಾ ದಿನ ಆರಂಭವಾಗಿದ್ದು ಹೇಗೆ..? ದೀರ್ಘಕಾಲ ಗುಜರಾತ್ ಮುಖ್ಯಮಂತ್ರಿಯಾಗಿ, ಸತತ ಹತ್ತು ವರ್ಷ ದೇಶದ ಪ್ರಧಾನಮಂತ್ರಿಯಾಗಿ ಲೆಕ್ಕವಿಲ್ಲದಷ್ಟು ಬಾರಿ ಕ್ರಿಶ್ಚಿಯನ್ ಬಾಹುಳ್ಯದ ರಾಷ್ಟçಗಳಿಗೆ ಭೇಟಿಕೊಟ್ಟ ನರೇಂದ್ರ ಮೋದಿಯವರಿಗೆ ಭಾರತದಲ್ಲಿ ಭಾನುವಾರದ ರಜಾ ದಿನ ಹೇಗೆ ಆರಂಭವಾಯಿತು ಎನ್ನುವ ಕನಿಷ್ಠ ಮಾಹಿತಿ ಇಲ್ಲವಾಗಿದ್ದು ವಿಚಿತ್ರ ಮತ್ತು ದುರಾದೃಷ್ಟವೇ ಸರಿ.
ಬ್ರಿಟನ್ನಲ್ಲಿ ಭಾನುವಾರ ರಜಾ ದಿನ ಅಧಿಕೃತವಾಗಿದ್ದು 1843ರಲ್ಲಿ. ಆದರೆ ಭಾರತದಲ್ಲಿ 300 ವರ್ಷಕ್ಕೂ ಅಧಿಕ ಕಾಲ ಆಡಳಿತ ನಡೆಸಿದ್ದ ಬ್ರಿಟಿಷರು ಭಾರತೀಯರಿಗೆ ತಾವಾಗಿಯೇ ಭಾನುವಾರ ರಜಾ ದಿನವನ್ನು ಕೊಟ್ಟಿರಲಿಲ್ಲ. ಭಾರತೀಯರು ವಾರದ ಏಳು ದಿನವೂ ಕೆಲಸ ಮಾಡ್ಬೇಕಿತ್ತು. ಭಾರತೀಯರಿಗೆ ವಾರದ ಒಂದು ದಿನವೂ ವಿರಾಮ ಇರುತ್ತಿರಲಿಲ್ಲ.
ಬ್ರಿಟಿಷ್ ಸರ್ಕಾರದಲ್ಲಿ ಭಾರತೀಯ ಕಾರ್ಮಿಕರಿಗೆ ಆಗ್ತಿದ್ದ ಈ ಘೋರ ಅನ್ಯಾಯ ಖಂಡಿಸಿ ಹೋರಾಟ ನಡೆಸಿದವರು ಭಾರತದಲ್ಲಿ ಕಾರ್ಮಿಕ ಚಳುವಳಿಯ ಪಿತಾಮಹ ಎಂದೇ ಕರೆಸಿಕೊಳ್ಳುವ ಮಹಾರಾಷ್ಟç ಮೂಲದ ರಾವ್ ಬಹದ್ದೂರ್ ನಾರಾಯಣ್ ಮೇಘಾಜಿ ಲೋಖಂಡೆ.
ದಲಿತ ಸಮುದಾಯಕ್ಕೆ ಸೇರಿದ ಲೋಖಂಡೆ ಅವರು ಬ್ರಿಟಿಷರ ಆಡಳಿತದಲ್ಲೇ ಭಾರತದಲ್ಲಿ ಕಾರ್ಮಿಕರ ಸ್ಥಿತಿಗತಿ ಸುಧಾರಣೆಗೆ ಸುದೀಘ ಹೋರಾಟ ನಡೆಸಿದ್ದರು. ಅಂತಹ ಹೋರಾಟದಲ್ಲಿ ಕಾರ್ಮಿಕರಿಗೆ ವಾರದ ಒಂದು ದಿನವಾದ್ರೂ ರಜೆ ನೀಡ್ಬೇಕು ಎನ್ನುವುದು ಪ್ರಮುಖ ಬೇಡಿಕೆಯಾಗಿತ್ತು. ಇವರ ಸತತ 7 ವರ್ಷಗಳ ಹೋರಾಟದ ಫಲವಾಗಿ ಅಂದರೆ 1984ರಲ್ಲಿ ಭಾರತದಲ್ಲಿ ಬ್ರಿಟಿಷರು ಭಾನುವಾರ ರಜೆ ಘೋಷಣೆ ಮಾಡಿದರು.
ಸಮಾಜ ಸುಧಾರಕ, ಭಾರತದಲ್ಲಿ ಕಾರ್ಮಿಕ ಚಳುವಳಿಯ ಪಿತಾಮಹ ರಾವ್ ಬಹದ್ದೂರ್ ನಾರಾಯಣ್ ಮೇಘಾಜಿ ಲೋಖಂಡೆ ಅವರ ಗೌರವಾರ್ಥ 2005ರಲ್ಲಿ ಭಾರತ ಸರ್ಕಾರ ಅವರ ಹೆಸರಲ್ಲಿ ಐದು ರೂಪಾಯಿ ಮುಖ ಬೆಲೆಯ ಅಂಚೆ ಚೀಟಿಯನ್ನೂ ಬಿಡುಗಡೆ ಮಾಡಿತು.
ಅಂದರೆ ಭಾರತದಲ್ಲಿ ಭಾನುವಾರ ರಜಾ ದಿನದ ಹಿಂದೆ ಹೋರಾಟದ ಇತಿಹಾಸವಿದೆ, ಅದು ಬ್ರಿಟಿಷರು ಕೊಟ್ಟಿದಲ್ಲ, ಬದಲಿಗೆ ನಮ್ಮ ಕಾರ್ಮಿಕರು ಅವರ ಹಕ್ಕಿಗಾಗಿ ನಡೆಸಿದ್ದ ಹೋರಾಟದ ಫಲವಾಗಿ ದಕ್ಕಿದ್ದು.
ಆದರೆ ಪ್ರಧಾನಮಂತ್ರಿಯಾಗಿ 10 ವರ್ಷ ದೇಶದ ಆಡಳಿತ ನಡೆಸಿದ ನರೇಂದ್ರ ಮೋದಿಯವರಿಗೆ ಭಾನುವಾರದ ರಜಾ ದಿನದ ಬಗ್ಗೆ ಇಂಥದ್ದೊಂದು ಅಜ್ಞಾನ ಇದೆ ಎಂದರೆ ಅದು ವಿಷಾದನೀಯ.
ಭಾನುವಾರದ ರಜಾ ದಿನವನ್ನು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಮಟ್ಟಿಗೆ ಮೋದಿ ಅವರ ಚುನಾವಣಾ ಪ್ರಚಾರ ಕುಸಿದಿದ್ದು ಕೂಡಾ ಬಿಜೆಪಿ ಬಳಿ ಈ ಬಾರಿ ಮತ ಕೇಳಲು ಯಾವುದೇ ಪಾಸಿಟಿಟ್ ಅಂಶಗಳಿಲ್ಲ ಎನ್ನುವುದನ್ನು ಮೋದಿ ಭಾಷಣ ಮತ್ತೊಮ್ಮೆ ದೃಢಪಡಿಸಿದೆ.
ಧರ್ಮದ ಆಧಾರದಲ್ಲಿ ಮತ ಕೇಳುವಂತಿಲ್ಲ ಎಂದು ಚುನಾವಣೆ ಘೋಷಣೆಗೂ ಮೊದಲೇ ನಿರ್ದೇಶನ ನೀಡಿದ್ದ ಭಾರತೀಯ ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿ ಮೋದಿಯವರ ಈ ಭಾಷಣಗಳನ್ನು ಕೇಳಿಯೂ ಕ್ರಮಕೈಗೊಳ್ಳದೇ ಸುಮ್ಮನಿರುವುದು ಚುನಾವಣಾ ಆಯೋಗ ಆಯುಕ್ತರು ಎಷ್ಟು ಮಂಡಿಯೂರಿದ್ದಾರೆ ಎನ್ನುವುದನ್ನು ಸಾಬೀತುಪಡಿಸ್ತಿದೆ.
ADVERTISEMENT