ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮೇಲೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿದ್ದಾನೆ.
ತಪ್ಪೇನೂ ಇಲ್ಲ ಚಿನ್ನ, ಪರ್ವಾಗಿಲ್ಲ ಎನ್ನುವ ಮೂಲಕ ದರ್ಶನ್ ಮೇಲೆ ಚಪ್ಪಲಿ ಎಸೆದವನಿಗೂ ಒಳ್ಳೆದು ಬಯಸಿ ದೊಡ್ಡತನ ಮೆರೆದಿದ್ದಾರೆ.
ಆದರೆ ಹೊಸಪೇಟೆಯಲ್ಲಿ ನಡೆದ ಈ ಚಪ್ಪಲಿ ಎಸೆತ ಹಿಂದಿನ ಕೃತ್ಯದ ರೂವಾರಿಗಳು ಯಾರು..? ದರ್ಶನ್ ಅವರ ಮೇಲೆ ಚಪ್ಪಲಿ ಎಸೆಯುವಷ್ಟು ನಂಜು ದರ್ಶನ್ ಅವರ ಮೇಲೆ ಅವರಿಗೇನಿತ್ತು..?
ಅಪ್ಪು ಪುತ್ಥಳಿಯ ಬಳಿಯೇ ಚಪ್ಪಲಿ ಎಸೆತ:
ಇದೇ ವರ್ಷದ ಜೂನ್ ಮೊದಲ ವಾರದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರ ಹೊಸಪೇಟೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ 7.4 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಗಿತ್ತು.
ಈ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಸಚಿವ ಆನಂದ್ ಸಿಂಗ್, ರಾಘವೇಂದ್ರ ರಾಜ್ಕುಮಾರ್, ಸಿನಿಮಾ ರಂಗದ ಗಣ್ಯರು ಮತ್ತು ಇತರೆ ರಾಜಕೀಯ ನಾಯಕರು ಭಾಗವಹಿಸಿದ್ದರು.
ಈ ಪುತ್ಥಳಿ ಅನಾವರಣದ ಬಳಿಕ ಹೊಸಪೇಟೆ ನಗರದ ಬಹುತೇಕ ಎಲ್ಲ ಕಡೆ ಅಪ್ಪು ಅವರ ಬೃಹತ್ ಪೋಸ್ಟರ್ ಮತ್ತು ಕಟೌಟ್ಗಳನ್ನೇ ಹಾಕಲಾಗಿತ್ತು.
ಆದರೆ ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ಅವರ ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಹಾಡಿನ ಬಿಡುಗಡೆಯ ಹಿನ್ನೆಲೆಯಲ್ಲಿ ಡಿಬಾಸ್ ಅಭಿಮಾನಿಗಳು ಅಪ್ಪು ಅವರ ಪೋಸ್ಟರ್ ತೆಗೆದು ಡಿಬಾಸ್ ಪೋಸ್ಟರ್ನ್ನು ಹಾಕಿದ್ದರು ಎಂಬ ಕಾರಣಕ್ಕೂ ಇಬ್ಬರೂ ನಟರ ಅಭಿಮಾನಿಗಳ ನಡುವೆ ಸಂಘರ್ಷವೂ ಆಗಿತ್ತು.
ಹಾಡಿನ ಬಿಡುಗಡೆ ಆರಂಭಕ್ಕೂ ಮುನ್ನ ದರ್ಶನ್ ಅವರು ಅಪ್ಪು ಅವರ ಕಂಚಿನ ಪುತ್ಥಳಿಗೆ ಮಾಲಾರ್ಪಣೆಯನ್ನು ಮಾಡಿ ಗೌರವ ಸಲ್ಲಿಸಿದ್ದರು.
ಆದರೆ ಬಳಿಕ ಪುತ್ಥಳಿ ಸಮೀಪದಲ್ಲೇ ಇರುವ ಕಾರ್ಯಕ್ರಮದ ವೇದಿಕೆ ಏರುತ್ತಿದ್ದಂತೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿದ್ದಾನೆ.
ಸಚಿವ ಆನಂದ್ ಸಿಂಗ್ ಬೆಂಬಲಿಗರ ಕೃತ್ಯವೇ..?
ನಟ ದರ್ಶನ್ ಅವರ ಅಭಿಮಾನಿಗಳು ಇದು ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರ ಕಡೆಯವರ ಕೃತ್ಯ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಹೊಸಪೇಟೆ ಶಾಸಕರು ತಮ್ಮ ಕಡೆಯವರನ್ನು ಕಳುಹಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಡಿಬಾಸ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಪೇಜ್ಗಳಲ್ಲಿ ಬರೆದುಕೊಂಡಿದ್ದಾರೆ.
ಹೊಸಪೇಟೆಗೆ ಬಂದಾಗ ಕೆಲವು ರಾಜಕಾರಣಿಗಳ ಕುಮ್ಮಕ್ಕಿನಿಂದ ಕೆಲವು ನಟರ ಅಭಿಮಾನಿಗಳೆಂಬ ಹೆಸರಲ್ಲಿ ಹೇಡಿಗಳು ಕೊಲೆಯತ್ನ ಮತ್ತು ಗುಂಪಿನ ಮಧ್ಯೆ ಚಪ್ಪಲಿ ಎಸೆಯುವ ಕೆಳಮಟ್ಟಕ್ಕೆ ಇಳಿದ ಪ್ರವೃತ್ತಿ ಇಂದು ಬೆಳಕಿಗೆ ಬಂದಿದೆ
ಎಂದು ಡಿಬಾಸ್ ಅವರ ಅಭಿಮಾನಿಗಳ ಅಧಿಕೃತ ಫೇಸ್ಬುಕ್ ಖಾತೆಯಲ್ಲಿ ಬರೆಯಲಾಗಿದೆ.
ADVERTISEMENT
ADVERTISEMENT