ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಒಗ್ಗೂಡಿಸಿ ಪಾದಯಾತ್ರೆ (Bharat Jodo) ತುಮಕೂರು ಜಿಲ್ಲೆ ದಾಟಿ ಚಿತ್ರದುರ್ಗದ ಕಡೆ ಸಾಗುತ್ತಿದೆ.
ಈ ಹೊತ್ತಲ್ಲಿ ಬಿಜೆಪಿ-ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಪ್ರತಿಷ್ಠೆಯ ಕಣವಾಗಿರುವ ಸಿರಾ (Sira Assembly) ವಿಧಾನಸಭಾ ಕ್ಷೇತ್ರದ ಚುನಾವಣಾ ಲೆಕ್ಕಾಚಾರ ಏನಿದೆ..? ಎಂಬುದನ್ನು ನೋಡೋಣ.
ಭಾರತ ಒಗ್ಗೂಡಿಸಿ ಪಾದಯಾತ್ರೆಯಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ, ಉಮೇದು ಮೂಡಿದೆ. ಸಿರಾದಲ್ಲೂ ಪಾದಯಾತ್ರೆ ಸಾಗಿರುವುದು ವಿಶೇಷ.
ಮೂವರಿಗೂ ಯಾಕೆ ಪ್ರತಿಷ್ಠೆ..?
ಬಿಜೆಪಿ ಪ್ರತಿಷ್ಠೆ:
ಸಿರಾದಲ್ಲಿ ಎಂದೂ ಗೆಲ್ಲದ ಬಿಜೆಪಿ ಜೆಡಿಎಸ್ ಶಾಸಕರಾಗಿದ್ದ ಸತ್ಯನಾರಾಯಣ (JDS MLA Satyanarayana) ಅವರ ನಿಧನದಿಂದ ಕ್ಷೇತ್ರ ತೆರವಾದ ಕಾರಣ ನಡೆದ ಚುನಾವಣೆಯಲ್ಲಿ ಬಿಜೆಪಿ ವಿಜಯಮಾಲೆ ಧರಿಸಿತ್ತು. ಡಾ.ರಾಜೇಶ್ ಗೌಡ (Dr Rajesh Gowda) ಅವರು ಗೆಲ್ಲುವ ಮೂಲಕ ಸಿರಾದಲ್ಲಿ ಬಿಜೆಪಿ ಹೊಸ ಇತಿಹಾಸ ನಿರ್ಮಿಸಿತು.
ಜೆಡಿಎಸ್ ಗೆ ಪ್ರತಿಷ್ಠೆ: 2018ರಲ್ಲಿ ಗೆದ್ದಿದ್ದ ಕ್ಷೇತ್ರವನ್ನು 2023ರಲ್ಲಿಯೂ ಉಳಿಸಿಕೊಳ್ಳುವುದು.
ಕಾಂಗ್ರೆಸ್ ಗೆ ಪ್ರತಿಷ್ಠೆ: 2013ರಲ್ಲಿ ಗೆದ್ದಿದ್ದ ಕ್ಷೇತ್ರವನ್ನು ಈ ಬಾರಿ ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು.
ಸಿರಾದಲ್ಲಿ ರಾಜಕೀಯ ಪಕ್ಷಗಳ ಪರಿಸ್ಥಿತಿ:
ಬಿಜೆಪಿ:
ಮೊದಲ ಬಾರಿಗೆ ಸಿರಾದಲ್ಲಿ ಗೆದ್ದಿರುವ ಬಿಜೆಪಿಗೆ ಈಗ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇದ್ದಂತಿಲ್ಲ. ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಗೆದ್ದು ಶಾಸಕರಾದ ಡಾ ರಾಜೇಶ್ ಗೌಡ ಅವರ ಪರ ಬಿಜೆಪಿ (BJP) ಕೊಟ್ಟಿದ್ದ ಭರವಸೆಗಳು ನಿರೀಕ್ಷಿತ ಪ್ರಮಾಣದಲ್ಲಿ ಈಡೇರಿಲ್ಲ. ಅದೂ ಬಿಜೆಪಿ ಸರ್ಕಾರ ಇದ್ದಾಗಿಯೂ. ಇದು ಸಿರಾದಲ್ಲಿ ಬಿಜೆಪಿಗೆ ದೊಡ್ಡ ನಷ್ಟವನ್ನು ಉಂಟು ಮಾಡಬಹುದು. ಈ ಬಾರಿಯೂ ಡಾ ರಾಜೇಶ್ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯೇ ಹೆಚ್ಚಿದೆ.
ಕಾಂಗ್ರೆಸ್:
ಈ ಬಾರಿಯೂ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಚಿವ ಟಿ ಬಿ ಜಯಚಂದ್ರ ( T B Jayachandra) ಕಣಕ್ಕಿಳಿಯುವ ಸಾಧ್ಯತೆ ಹೆಚ್ಚು. 2019ರಲ್ಲಿ ನಡೆದಿದ್ದ ಉಪ ಚುನಾವಣೆಯಲ್ಲೂ ಟಿಬಿ ಜಯಚಂದ್ರ ಸ್ಪರ್ಧಿಸಿದ್ದ ರಾಜೇಶ್ ಗೌಡ ವಿರುದ್ಧ 14 ಸಾವಿರ ಮತಗಳ ಅಂತರದಿಂದ ಸೋತಿದ್ದರು.2023ರ ಚುನಾವಣೆ ಟಿಬಿಜೆ ಅವರ ಕಡೆಯ ವಿಧಾನಸಭಾ ಚುನಾವಣೆ ಆಗಬಹುದು ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.
ಆದರೆ ಈ ಬಾರಿ ಸಿರಾದಲ್ಲಿ ಟಿಬಿಜೆಗೆ ಅವರದ್ದೇ ಪಕ್ಷದೊಳಗೆ ಪ್ರಬಲ ಸ್ಪರ್ಧಿ ಇದ್ದಾರೆ. ಅವರೇ ಡಾ ಸಾಸಲು ಸತೀಶ್ (Dr Sasalu Satish). ಈಗ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಹೌದು. 2013ರಲ್ಲಿ ಪಕ್ಕದ ಚಿಕ್ಕನಾಯಕನಹಳ್ಳಿ (Chikkanayakanahalli) ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ 10 ಸಾವಿರ ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದರು. 2018ರಲ್ಲೂ ಇವರು ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ 2018ರಲ್ಲಿ ಕಾಂಗ್ರೆಸ್ ಟಿಬಿ.ಜಯಚಂದ್ರ ಅವರ ಪುತ್ರ ಸಂತೋಷ್ ಜಯಚಂದ್ರಗೆ (Santosh Jayachandra) ಟಿಕೆಟ್ ನೀಡಿತ್ತು. ಮತ ಪ್ರಮಾಣ ಹೆಚ್ಚಳವಾಯಿತಾದರೂ ಚಿಕ್ಕನಾಯಕನಹಳ್ಳಿಯಲ್ಲಿ ಕಾಂಗ್ರೆಸ್ ಸೋತಿತ್ತು.
2018ರಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ತಮಗೆ ಟಿಕೆಟ್ ತಪ್ಪಿಸಿ ಪುತ್ರನಿಗೆ ಟಿಕೆಟ್ ಕೊಡಿಸಿದರು ಎಂಬ ಸಿಟ್ಟು ಜಯಚಂದ್ರ ಅವರ ಮೇಲೆ ಸಾಸಲು ಸತೀಶ್ ಅವರಿಗೆ ಇದೆ. ಹೀಗಾಗಿ ಈ ಬಾರಿ ಸಿರಾದಿಂದಲೇ ಟಿಕೆಟ್ ಕೊಡಬೇಕು ಅಂತ ಸಾಸಲು ಸತೀಶ್ ಅವರು ಲಾಬಿ ತೀವ್ರಗೊಳಿಸಿದ್ದಾರೆ. ಸಿರಾ ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ವಿವಿಧ ಬಗೆಯ ಕಾರ್ಯಕ್ರಮಗಳನ್ನು ಸಾಸಲು ಸತೀಶ್ ಮಾಡ್ತಿದ್ದಾರೆ.
ಜೆಡಿಎಸ್:
2018ರಲ್ಲಿ ಶಾಸಕರಾಗಿ ಗೆದ್ದಿದ್ದ ಸತ್ಯನಾರಾಯಣ ಅವರ ನಿಧನದ ಕಾರಣದಿಂದ ನಡೆದ ಉಪ ಚುನಾವಣೆಯಲ್ಲಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ನೀಡಿತ್ತು. ಆದರೆ ಜೆಡಿಎಸ್ ಮೂರನೇ ಸ್ಥಾನಕ್ಕೆ ಕುಸಿದಿತ್ತು.
2023ರ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಪಡೆಯಲು ಮೂವರ ನಡುವೆ ಪೈಪೋಟಿ ಇದೆ. ದಿವಂಗತ ಸತ್ಯನಾರಾಯಣ ಅವರ ಪುತ್ರ ಸತ್ಯಪ್ರಕಾಶ್, ತುಮಕೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಉಮೇಶ್ ಮತ್ತು ಜೆಡಿಎಸ್ ತಾಲೂಕು ಅಧ್ಯಕ್ಷ ಆರ್ ಉಗ್ರೇಶ್ ನಡುವೆ ಪೈಪೋಟಿ ಇದೆ.
ಜಾತಿ ಮತ ಲೆಕ್ಕಾಚಾರ:
ಸಿರಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಕುಂಚಿಟಿಗ ಒಕ್ಕಲಿಗ ಸಮುದಾಯದ ಮತಗಳೇ ಅತ್ಯಧಿಕ. ಮಾಜಿ ಸಚಿವ ಟಿ ಬಿ ಜಯಚಂದ್ರ, ಡಾ ರಾಜೇಶ್ಗೌಡ ಇಬ್ಬರೂ ಕೂಡಾ ಕುಂಚಿಟಿಗ ಒಕ್ಕಲಿಗ ಸಮುದಾಯದವರೇ. ಕ್ಷೇತ್ರದಲ್ಲಿ ಯಾದವ ಸಮುದಾಯದ ಮತಗಳೂ ಅಧಿಕ ಇದ್ದು ಡಾ ಸಾಸಲು ಸತೀಶ್ ಯಾದವ ಸಮುದಾಯಕ್ಕೆ ಸೇರಿದವರು.
ADVERTISEMENT
ADVERTISEMENT