ಮೂರು ಬಾರಿ ಮುಖ್ಯಮಂತ್ರಿ, ಇಬ್ಬರು ಪತ್ನಿಯರು, ಮಗನ ವಿರುದ್ಧವೇ ರಾಜಕೀಯ ಸೇಡು – ವರ್ಣರಂಜಿತ ನೇತಾಜಿ ಮುಲಾಯಂ

Mulayam Singh Yadav
Mulayam Singh Yadav
ಉತ್ತರಪ್ರದೇಶದ (UttarPradesh) ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ, ವರ್ಣರಂಜಿತ ರಾಜಕಾರಣಿ ಮುಲಾಯಂ ಸಿಂಗ್​ ಯಾದವ್​ (Mulayam Singh Yadav) ಇನ್ನಿಲ್ಲ.
82 ವರ್ಷದ ಮುಲಾಯಂ ಅವರು ಕಳೆದ ಕೆಲ ದಿನಗಳಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆ (Medanta Hospital)ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಮುಲಾಯಂ ಸಿಂಗ್​ ಅವರ ಆರೋಗ್ಯ ಇನ್ನಷ್ಟು ಬಿಗಡಾಯಿಸಿತ್ತು ಮತ್ತು ಜೀವ ರಕ್ಷಕ ಔಷಧಗಳನ್ನು (Life Saving Drugs) ಅವರಿಗೆ ನೀಡಲಾಗ್ತಿತ್ತು.
1939ರ ನವೆಂಬರ್​ 22ರಂದು ಜನಿಸಿದ್ದ ಮುಲಾಯಂ ಸಿಂಗ್​ ಯಾದವ್​ ಮೈನ್​ಪುರಿ (Mainpuri) ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು.
ಸಮಾಜವಾದಿ ಚಳುವಳಿಯಿಂದ ರಾಜಕೀಯಕ್ಕೆ:
ಮೂಲತಃ ಕುಸ್ತಿ ಪಟು ಆಗಿದ್ದ ಮುಲಾಯಂ ಸಿಂಗ್​ ಯಾದವ್​ 1970ರ ದಶಕದ ರಾಜಕಾರಣದಲ್ಲಿ ಮುಂಚೂಣಿಗೆ ಬಂದ ಪ್ರಭಾವಿ ರಾಜಕಾರಣಿಗಳ ಪೈಕಿ ಒಬ್ಬರು.
ಉತ್ತರ ಭಾರತದಲ್ಲಾದ ಸಾಮಾಜಿಕ-ಆರ್ಥಿಕ ಹೋರಾಟದ ಮುಂಚೂಣಿಯಲ್ಲಿದ್ದ ನೇತಾಜಿ (Netaji) ಉತ್ತರಪ್ರದೇಶದಲ್ಲಿ ಕಳೆದು ಹೋಗುತ್ತಿದ್ದ ಕಾಂಗ್ರೆಸ್​ ವರ್ಚಸ್ಸಿನ ನಡುವೆ ಸಿಕ್ಕ ರಾಜಕೀಯ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು.
ಉತ್ತರಪ್ರದೇಶದ 15ನೇ ಮುಖ್ಯಮಂತ್ರಿಯಾಗಿ ಮುಲಾಯಂ ಸಿಂಗ್​ ಯಾದವ್​ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕ ಮೊದಲ ಬಾರಿಗೆ ಸಮಾಜವಾದಿ ಪಕ್ಷ ಉತ್ತರಪ್ರದೇಶದಲ್ಲಿ ಶಕ್ತಿ ಪ್ರದರ್ಶನ ಮಾಡಿದರು.
ವಿಚಿತ್ರ ಎಂದರೆ 1989ರಲ್ಲಿ ಸೋತ ಬಳಿಕ ಉತ್ತರಪ್ರದೇಶದಲ್ಲಿ ಮತ್ತೆಂದೂ ಸ್ವತಂತ್ರವಾಗಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲೇ ಇಲ್ಲ.
ಎರಡು ಸಂಸಾರದ ಕಥೆ:
ಮುಲಾಯಂ ಸಿಂಗ್​ ಯಾದವ್​ ಅವರು 1974ರಲ್ಲಿ ಮಾಲ್ತಿ ದೇವಿ ಅವರನ್ನು ಮದುವೆ ಆದರು. 2003ರಲ್ಲಿ ಮಾಲ್ತಿ ದೇವಿ (Malti Devi) ನಿಧನರಾದರು. ಮಾಲ್ತಿದೇವಿ-ಮುಲಾಯಂ ಸಿಂಗ್​ ಯಾದವ್​ ಅವರ ಏಕೈಕ ಪುತ್ರ ಅವರೇ ಅಖಿಲೇಶ್​ ಯಾದವ್ (Akhilesh Singh Yadav)​. ಅಖಿಲೇಶ್​ ಯಾದವ್​ 2012ರಿಂದ 2017ರವರೆಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದರು.
ಮಾಲ್ತಿ ದೇವಿ ಅವರ ಜೊತೆಗಿನ ದಾಂಪತ್ಯ ಜೀವನದ ಹೊರತಾಗಿಯೂ ಮುಲಾಯಂ ಅವರು ಸಾಧನಾ ಗುಪ್ತ (Sadhana Gupta) ಎಂಬಾಕೆಯ ಜೊತೆಗೆ ಸಂಬಂಧ ಹೊಂದಿದ್ದರು. ಮೊದಲ ಪತ್ನಿ ಮಾಲ್ತಿ ದೇವಿ ನಿಧನದ ಬಳಿಕ ತಾವು 15 ವರ್ಷಗಳವರೆಗೆ ಸಂಬಂಧ ಹೊಂದಿದ್ದ ಸಾಧನಾ ಗುಪ್ತಾರನ್ನು ಮುಲಾಯಂ ತಮ್ಮ ಎರಡನೇ ಪತ್ನಿ ಎಂದು ಘೋಷಿಸಿದರು.
ಸಾಧನಾ ಗುಪ್ತಾ ಅವರ ಮಗ ಪ್ರತೀಕ್​ ಗುಪ್ತಾರ ಶಾಲಾ ದಾಖಲಾತಿಗಳಲ್ಲಿ ಮುಲಾಯಂ ಸಿಂಗ್​ ಅವರನ್ನು ತಂದೆ ಎಂದು ದಾಖಲಿಸಲಾಗಿತ್ತು.
ಮೂರು ಬಾರಿ ಮುಖ್ಯಮಂತ್ರಿ, ಬಿಎಸ್​ಪಿ ಜೊತೆಗೂ ಮೈತ್ರಿ..!
ಮುಲಾಯಂ ಸಿಂಗ್​ ಮೂರು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿ ಆಗಿದ್ದರು.
ರಾಮಮನೋಹರ್​ ಲೋಹಿಯಾ (Ram Manohar Lohiya) ಮತ್ತು ರಾಜ್​ ನಾರಾಯಣ್​ (Raj Narain) ಕ್ರಾಂತಿಕಾರಿ ಚಳುವಳಿಯ ಪ್ರಭಾವಕ್ಕೆ ಒಳಗಾಗಿದ್ದ ಮುಲಾಯಂ ಅವರು 1967ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆದರು.
1975ರಲ್ಲಿ ಇಂದಿರಾ ಗಾಂಧಿ (Prime Minister Indira Gandhi) ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭದಲ್ಲಿ 19 ತಿಂಗಳು ಕಸ್ಟಡಿಯಲ್ಲಿದ್ದ ನೇತಾಜಿ ಆ ಬಳಿಕ 1977ರಲ್ಲಿ ಮೊದಲ ಬಾರಿಗೆ ಸಚಿವರೂ ಆದರು. 1980ರಲ್ಲಿ ಲೋಕದಳದ (Lok Dal) ಅಧ್ಯಕ್ಷರಾದ ನೇತಾಜಿ ಲೋಕದಳ ಇಬ್ಭಾಗ ಆದ ಬಳಿಕ ತಮ್ಮದೇ ಕ್ರಾಂತಿಕಾರಿ ಮೋರ್ಚಾ ಪಕ್ಷದ ಸ್ಥಾಪನೆ ಮಾಡಿದರು.
1989ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಆದ ಮುಲಾಯಂ ಅವರು 1990ರಲ್ಲಿ ಕೇಂದ್ರದಲ್ಲಿ ಪ್ರಧಾನಿ ಆಗಿದ್ದ ಚಂದ್ರಶೇಖರ್​ ಅವರ ಸರ್ಕಾರದ ಪತನದ ಬಳಿಕ ಕಾಂಗ್ರೆಸ್​ ಬೆಂಬಲದೊಂದಿಗೆ ಸಿಎಂ ಆಗಿ ಮುಂದುವರಿದರು.
ಆದರೆ 1991ರ ಏಪ್ರಿಲ್​ನಲ್ಲಿ ಕಾಂಗ್ರೆಸ್ (Congress)​ ಬೆಂಬಲ ವಾಪಸ್​ ಪಡೆದ ಕಾರಣ ಮುಲಾಯಂ ಸರ್ಕಾರ ಪತನ ಆಯಿತು. 1991ರಲ್ಲಿ ನಡೆದ ಮಧ್ಯಂತರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು.
1992ರಲ್ಲಿ ಮುಲಾಯಂ ಅವರು ತಮ್ಮದೇ ಸಮಾಜವಾದಿ ಪಕ್ಷವನ್ನು (Samajavadi Party) ಸ್ಥಾಪಿಸಿದರು. 1993ರಲ್ಲಿ ನಡೆದ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷದೊಂದಿಗೆ (Bahujana Samaja Party) ಮುಲಾಯಂ ಸಿಂಗ್​ ಯಾದವ್ ಮೈತ್ರಿ ಮಾಡಿಕೊಂಡರು. ಈ ಚುನಾವಣೆಯಲ್ಲಿ ಕಾಂಗ್ರೆಸ್​ ಮತ್ತು ಜನತಾ ದಳದ ಬೆಂಬಲದೊಂದಿಗೆ ಮುಲಾಯಂ ಎರಡನೇ ಬಾರಿ ಸಿಎಂ ಆದರು.
2002ರಲ್ಲಿ ಮಾಯಾವತಿ (Mayavati0 ಅವರ ನೇತೃತ್ವದಲ್ಲಿ ರಚನೆ ಆದ ಬಿಜೆಪಿ-ಬಿಎಸ್​ಪಿ ಸಮ್ಮಿಶ್ರ ಸರ್ಕಾರ ದೀರ್ಘ ಕಾಲ ಉಳಿಯಲಿಲ್ಲ. ಬಿಎಸ್​ಪಿ ಬಂಡಾಯ ಶಾಸಕರು ಮುಲಾಯಂ ಸಿಂಗ್​ ಯಾದವ್​ಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ 2003ರಲ್ಲಿ ಮತ್ತೆ ಮುಲಾಯಂ 3ನೇ ಬಾರಿಗೆ ಸಿಎಂ ಆದರು.
ಮುಲಾಯಂ ಕುಟುಂಬ ಕಲಹ:
ಉತ್ತರಪ್ರದೇಶ ರಾಜಕಾರಣದಲ್ಲಿ ಮುಲಾಯಂ ಸಿಂಗ್​ ಕುಟುಂಬ ಕಲಹ ಎಲ್ಲರಿಗೂ ಗೊತ್ತಿರುವ ಸತ್ಯ. 2012ರಲ್ಲಿ ಏಕೈಕ ಪುತ್ರ ಅಖಿಲೇಶ್​ ಸಿಎಂ ಆದ ಬಳಿಕ ಕುಟುಂಬ ಸಂಘರ್ಷ ಬೀದಿಗೆ ಬಂತು. ಸಮಾಜವಾದಿ ಪಕ್ಷದಲ್ಲಿ ಅಖಿಲೇಶ್​ ಸಿಂಗ್​​ ಮತ್ತು ರಾಮ್​ಗೋಪಾಲ್​ ಯಾದವ್​ ಬಣ ಹಾಗೂ ತಂದೆ ಮುಲಾಯಂ ಸಿಂಗ್​ ಯಾದವ್​ ಬೆಂಬಲಿಸುತ್ತಿದ್ದ ಶಿವಪಾಲ್​ ಸಿಂಗ್​ ಯಾದವ್​ ಬಣದ ಸಂಘರ್ಷ ತೀವ್ರವಾಗಿತ್ತು. ತಮ್ಮ ಮಗನ ವಿರುದ್ಧವೇ ಸಹೋದರನನ್ನು ಸಂಘರ್ಷಕ್ಕಿಳಿಸಿದ್ದರು ಮುಲಾಯಂ.
ತಂದೆ ಟಕ್ಕರ್​ ಕೊಡುವ ಸಲುವಾಗಿ ಶಿವಪಾಲ್​ ಯಾದವ್​ರನ್ನ (Shivapal Yadav) ಅಖಿಲೇಶ್​ ತಮ್ಮ ಸರ್ಕಾರದ ಮಂತ್ರಿ ಗಾದಿಯಿಂದ ತೆಗೆದುಹಾಕಿದರು. ಪುತ್ರನಿಗೆ ಪ್ರತಿ ಟಕ್ಕರ್​ ಕೊಡುವ ಸಲುವಾಗಿ 2016ರಲ್ಲಿ ತಮ್ಮ ಮಗನನ್ನೇ ಪಕ್ಷದಿಂದ ಉಚ್ಛಾಟಿಸಿದರು ಮುಲಾಯಂ ಸಿಂಗ್​ ಯಾದವ್. ತಂದೆ ಪ್ರತ್ಯುತ್ತರವಾಗಿ 2017ರಲ್ಲಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಮುಲಾಯಂರನ್ನ ತೆಗೆದುಹಾಕಿದ ಅಖಿಲೇಶ್​ ತಮ್ಮನ್ನೇ ಪಕ್ಷದ ಅಧ್ಯಕ್ಷರನ್ನಾಗಿ ಘೋಷಿಸಿಕೊಂಡರು.
ತಮ್ಮ ಸಂಬಂಧಿ ಅಖಿಲೇಶ್​ ಬಣದ ರಾಮ್​ ಗೋಪಾಲ್​ ಯಾದವ್​ರನ್ನ (Ram Gopal Yadav) ಪಕ್ಷದಿಂದ ತೆಗೆದುಹಾಕಿದರು ಮುಲಾಯಂ. ಆದರೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಕರೆಯುವ ಅಧಿಕಾರ ರಾಮ್​ಗೋಪಾಲ್​ ಯಾದವ್​ಗೆ ಇದೆ ಎಂದು ಚುನಾವಣಾ ಆಯೋಗ ತೀರ್ಮಾನಿಸಿದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಖಿಲೇಶ್​ ಮುಂದುವರೆದರು, ಮುಲಾಯಂ ಕೈ ಕೆಳಗಾಯಿತು.
ಕುಟುಂಬ ರಾಜಕಾರಣ:
ಮುಲಾಯಂ ಸಿಂಗ್​ ಯಾದವ್​ 3 ಬಾರಿ ಮುಖ್ಯಮಂತ್ರಿ, ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿದ್ದರು. 2019ರಲ್ಲಿ ಮೈನ್​ಪುರಿ ಲೋಕಸಭಾ ಕ್ಷೇತ್ರದಿಂದ ಮತ್ತೆ ಆಯ್ಕೆ.
ಅಖಿಲೇಶ್​ ಸಿಂಗ್ ಯಾದವ್​: 2012ರಿಂದ 2017ರವರೆಗೆ ಮುಖ್ಯಮಂತ್ರಿ. 2000ರಿಂದ ಲೋಕಸಭಾ ಸಂಸದ, ಎಂಎಲ್​ಸಿ ಆಗಿಯೂ ಆಯ್ಕೆ. ಸದ್ಯ ಉತ್ತರಪ್ರದೇಶ ವಿಧಾನಸಭೆಯಲ್ಲಿ ವಿಪಕ್ಷ ನಾಯಕ.
ದಿಂಪಲ್​ ಯಾದವ್ – ಅಖಿಲೇಶ್​ ಸಿಂಗ್​ ಯಾದವ್​ ಪತ್ನಿ, ಮುಲಾಯಂ ಸಿಂಗ್​ ಯಾದವ್​ ಸೊಸೆ. 2012ರಿಂದ 2019ರವರೆಗೆ ಲೋಕಸಭಾ ಸಂಸದೆ
ರಾಮಗೋಪಾಲ್​ ಯಾದವ್​: ಲೋಕಸಭೆ ಮತ್ತು ರಾಜ್ಯಸಭಾ ಸಂಸದರಾಗಿದ್ದರು.
ಶಿವಪಾಲ್​ ಯಾದವ್: ಮುಲಾಯಂ ಸಿಂಗ್​ ಸಹೋದರ. ಶಾಸಕ ಮತ್ತು ಸಚಿವರಾಗಿದ್ದರು.
ಧರ್ಮೆಂದ್ರ ಯಾದವ್: ಮುಲಾಯಂ ಸಂಬಂಧಿ. 2004ರಿಂದ 2019ರವರೆಗೆ ಲೋಕಸಭಾ ಸಂಸದ.
ತೇಜ್​ ಪ್ರತಾಪ್​ ಸಿಂಗ್​ ಯಾದವ್: ಮರಿ ಮೊಮ್ಮಗ . 2014ರಿಂದ 2019ರವರೆಗೆ ಸಂಸದ