ಕಾಂಗ್ರೆಸ್ ಚೇತರಿಸಿಕೊಳ್ಳುತ್ತಿದೆಯೇ? 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮತಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡು ಮುಂದಕ್ಕೆ ಸಾಗಲಿದೆಯಾ? ಎಐಸಿಸಿ ಅಗ್ರನಾಯಕ ರಾಹುಲ್ ಗಾಂಧಿಯ ಪ್ರಭಾವ ಹೆಚ್ಚುತ್ತಿದೆಯಾ? ಭಾರತ್ ಜೊಡೋ ಯಾತ್ರೆ ಕಾಂಗ್ರೆಸ್ ಕೈ ಹಿಡಿಯಲಿದೆಯಾ? ಪ್ರಧಾನಿ ನರೇಂದ್ರ ಮೋದಿಯನ್ನು ಎದುರಿಸುವ ಸಮರ್ಥ ನಾಯಕನಾಗಿ ರಾಹುಲ್ ಗಾಂಧಿಯನ್ನು ಜನ ಗುರುತಿಸುತ್ತಿದ್ದಾರಾ? ಹೀಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಎನ್ಡಿಟಿವಿ-ಲೋಕನೀತಿ-ಸಿಎಸ್ಡಿಎಸ್ ಸಂಯುಕ್ತವಾಗಿ ಜನಾಭಿಪ್ರಾಯದ ಹೆಸರಲ್ಲಿ ಸಮೀಕ್ಷೆ ನಡೆಸಿವೆ.. ಈ ಎಲ್ಲಾ ಪ್ರಶ್ನೆಗಳಿಗೆ ಹೌದು ಎಂಬ ಉತ್ತರವೇ ಸಿಕ್ಕಿದೆ ಎಂಬುದು ಗಮನಾರ್ಹ ಸಂಗತಿ. ಸಮೀಕ್ಷೆ ಪ್ರಕಾರ ಈಗಲೂ ಪ್ರಧಾನಿ ನರೇಂದ್ರ ಮೋದಿಯನ್ನೇ ತುಂಬಾ ಜನ ಇಷ್ಟಪಡುತ್ತಿದ್ದಾರೆ. 19 ರಾಜ್ಯಗಳ 71 ಲೋಕಸಭೆ ಕ್ಷೇತ್ರಗಳಲ್ಲಿ 7202 ಮಂದಿಯ ಅಭಿಪ್ರಾಯವನ್ನು ಈ ಸಮೀಕ್ಷೆಯಲ್ಲಿ ಬಳಸಿಕೊಳ್ಳಲಾಗಿದೆ.
ಕಾಂಗ್ರೆಸ್, ಬಿಜೆಪಿ ಮತ ಪ್ರಮಾಣ ಎಷ್ಟು?
ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 43ರಷ್ಟು ಮಂದಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಜೈ ಎಂದಿದ್ದಾರೆ. ಈಗಿಂದಿಗ್ಗೇ ಚುನಾವಣೆ ನಡೆದಲ್ಲಿ ತಮ್ಮ ಮತ ಬಿಜೆಪಿಗೆ ಎಂದು ಹೇಳಿದ್ದಾರೆ.ಶೇಕಡಾ 38ರಷ್ಟು ಮಂದಿ ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. 2019ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿ ಪರ ಶೇಕಡಾ 44ರಷ್ಟು ಒಲವು ತೋರಿಸಿದ್ದರು. ಆದರೆ, ಈಗ ಒಂದು ಪರ್ಸೆಂಟ್ ಇಳಿಕೆ ಕಂಡುಬಂದಿದೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಚೇತರಿಸಿಕೊಂಡಿರುವುದು ಈ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತದೆ. 2019ರಲ್ಲಿ ಶೇಕಡಾ 19ರಷ್ಟು ಮಂದಿ ಮಾತ್ರ ಕಾಂಗ್ರೆಸ್ ಪರ ಒಲವು ತೋರಿಸಿದ್ದರು. ಆದರೆ, ಕಾಂಗ್ರೆಸ್ಗೆ ಜೈ ಎನ್ನುವವರ ಪ್ರಮಾಣದಲ್ಲಿ ಈಗ ಶೇಕಡಾ 10ರಷ್ಟು ಏರಿಕೆ ಕಂಡುಬಂದಿದೆ. ಇಗ ಶೇಕಡಾ 29ರಷ್ಟು ಮಂದಿ ಕಾಂಗ್ರೆಸ್ ಪರ ನಿಂತಿದ್ದಾರೆ.
ಎನ್ಡಿಎ ಸರ್ಕಾರದ ಅಭಿವೃದ್ಧಿ ಕೆಲಸಗಳು ತೃಪ್ತಿ ನೀಡಿವೆ ಶೇಕಡಾ 55ರಷ್ಟು ಮಂದಿ, ಅಲ್ಪ ತೃಪ್ತಿ ನೀಡಿವೆ ಎಂದು ಶೇಕಡಾ 38ರಷ್ಟು ಮಂದಿ, ನಮಗೆ ತೃಪ್ತಿಯಿಲ್ಲ ಎಂದು ಶೇಕಡಾ 17ರಷ್ಟು ಮಂದಿ ಹೇಳಿದ್ದಾರೆ.
ಮೋದಿ.. ರಾಹುಲ್.. ಯಾರು ಜನಪ್ರಿಯ
ಈ ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ಶೇಕಡಾ 43ರಷ್ಟು ಮಂದಿ ಮೋದಿಗೆ ಜೈ ಎಂದಿದ್ದಾರೆ. 2019ಕ್ಕೆ ಹೋಲಿಸಿದಲ್ಲಿ ಮೋದಿ ಜನಪ್ರಿಯತೆ ಪ್ರಮಾಣ ಶೇಕಡಾ 1ರಷ್ಟು ಕುಸಿದಿದೆ. ರಾಹುಲ್ ಗಾಂಧಿ ಜನಪ್ರಿಯತೆ ಶೇಕಡಾ 24ರಿಂದ ಶೇಕಡಾ 27ಕ್ಕೆ ಹೆಚ್ಚಾಗಿದೆ.
ಮೂರನೇ ಸ್ಥಾನದಲ್ಲಿ ಶೇಕಡಾ 4ರಷ್ಟು ಮತಗಳೊಂದಿಗೆ ಮಮತಾ ಬ್ಯಾನರ್ಜಿ ಮತ್ತು ಅರವಿಮದ ಕೇಜ್ರಿವಾಲ್ ಇದ್ದಾರೆ. ಅಖಿಲೇಶ್ ಯಾದವ್ ಪರ ಶೇಕಡಾ 3ರಷ್ಟು ಮಂದಿ ಒಲವು ತೋರಿಸಿದ್ದಾರೆ. ಪ್ರಧಾನಿ ರೇಸ್ನಲ್ಲಿ ತಾನಿದ್ದೇನೆ ಎಂದು ಬಿಂಬಿಸಿಕೊಳ್ಳುವ ಬಿಹಾರ ಸಿಎಂ ನಿತೀಶ್ ಕುಮಾರ್ ಗೆ ಕೇವಲ ಶೇಕಡಾ 1ರಷ್ಟು ಮಂದಿ ಜೈ ಎಂದಿದ್ದಾರೆ.
ಮೋದಿಯನ್ನು ಏಕೆ ಇಷ್ಟಪಡುತ್ತಿರಾ ಎಂಬ ಪ್ರಶ್ನೆಗೆ ಶೇಕಡಾ 25ರಷ್ಟು ಮಂದಿ ಅವರ ಭಾಷಣಗಳನ್ನು ಕೇಳಿ ಇಷ್ಟಪಡುತ್ತೇವೆ ಎಂದಿದ್ದಾರೆ. ಶೇಕಡಾ 20ರಷ್ಟು ಮಂದಿ ಅಭಿವೃದ್ಧಿ ದೃಷ್ಟಿಯಿಂದ ಮೋದಿಯನ್ನು ಇಷ್ಟ ಪಡುತ್ತೇವೆ ಎಂದಿದ್ದಾರೆ. ಕಷ್ಟಪಟ್ಟು ಕೆಲಸ ಮಾಡುವ ಅವರ ಗುಣ ನಮಗಿಷ್ಟವಾಯ್ತು ಎಂದು ಶೇಕಡಾ 13ರಷ್ಟು ಮಂದಿ, ಅವರ ಕಾರ್ಯಶೈಲಿಗೆ ಫಿದಾ ಆದೆವು ಎಂದು ಶೇಕಡಾ 11ರಷ್ಟು ಮಂದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತರೂ, ಮೋದಿ ಈಗಲೂ ಜನಪ್ರಿಯ ವ್ಯಕ್ತಿಯೇ ಆಗಿದ್ದಾರೆ. ಆದರೆ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಜನಪ್ರಿಯತೆ ಏರುಗತಿಯಲ್ಲಿ ಇರುವುದು ಸುಸ್ಪಷ್ಟವಾಗಿ ಇಲ್ಲಿ ಗೋಚರಾಗುತ್ತಿದೆ.