ವರದಿ: ಅಕ್ಷಯ್ ಕುಮಾರ್ ಯು
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಇವತ್ತಿಗೆ 10 ದಿನ. ಮೇ 13ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿ ಹೀನಾಯವಾಗಿ ಸೋತು ಕೇವಲ 65 ಸೀಟುಗಳನ್ನಷ್ಟೇ ಪಡೆಯಿತು.
ಫಲಿತಾಂಶ ಪ್ರಕಟವಾಗಿ 10 ದಿನವಾದರೂ ಇದುವರೆಗೆ ವಿಧಾನಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ಫಲಿತಾಂಶ ಪ್ರಕಟವಾದ ಬಳಿಕ ಇದುವರೆಗೆ ಬಿಜೆಪಿ ಶಾಸಕರ ಸಭೆಯೇ ನಡೆದಿಲ್ಲ ಎನ್ನುವುದು ವಿಚಿತ್ರ. ಬೆಂಗಳೂರಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಚುನಾವಣಾ ನಿರ್ವಹಣಾ ಸಮಿತಿಯ ಸಭೆಯಷ್ಟೇ ನಡೆದಿದೆ.
ಬಿಜೆಪಿ ಈಗ ಎರಡು ಪ್ರಮುಖ ಹುದ್ದೆಗಳಿಗೆ ನಾಯಕರನ್ನು ಹುಡುಕಬೇಕಿದೆ. 1. ವಿಧಾನಸಭೆಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಅಂದರೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದು. 2. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವುದು.
ಈಗಾಗಲೇ ವಿಧಾನಸಭಾ ಅಧಿವೇಶನ ಆರಂಭವಾಗಿ ಎರಡು ದಿನಗಳಾಗಿದೆ. ಹೊಸ ಶಾಸಕರ ಪ್ರಮಾಣವಚನ ನಾಳೆ ಮುಗಿದು ನಾಳೆ ವಿಧಾನಸಭೆಗೆ ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಹೊಸ ಸಭಾಧ್ಯಕ್ಷರಾಗಿ ಬರಲಿದ್ದಾರೆ.
ಎರಡು ಪ್ರಮುಖ ಹುದ್ದೆಗಳಿಗೆ ಚಾಲ್ತಿಯಲ್ಲಿರುವ ಹೆಸರು:
1) ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ ಶಾಸಕ – ಲಿಂಗಾಯತ
2) ಶೋಭಾ ಕರಂದ್ಲಾಜೆ – ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ, ಸದ್ಯ ಪ್ರಧಾನಿ ಮೋದಿ ಸರ್ಕಾರದಲ್ಲಿ ಕೃಷಿ ಖಾತೆ ರಾಜ್ಯ ಸಚಿವೆ – ಒಕ್ಕಲಿಗ
3) ಸಿ ಟಿ ರವಿ – ಚಿಕ್ಕಮಗಳೂರು ಮಾಜಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ – ಒಕ್ಕಲಿಗ
4) ವಿ ಸುನಿಲ್ ಕುಮಾರ್ – ಕಾರ್ಕಳ ಶಾಸಕ, ಮಾಜಿ ಇಂಧನ ಸಚಿವ – ಬಿಲ್ಲವ
5) ವಿ ಸೋಮಣ್ಣ – ಮಾಜಿ ಶಾಸಕರು – ಲಿಂಗಾಯತ
ಯಾರಾಗಬಹುದು..?
ಯತ್ನಾಳ್ ಬಿಜೆಪಿ ಬೆಂಕಿ ಚೆಂಡು. ಸಿಎಂ ಆಗಿದ್ದ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧವೇ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಮಾಡಿದ್ದವರು. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಮುರುಗೇಶ್ ನಿರಾಣಿ ವಿರುದ್ಧ ಸಿಡಿ ತೋರಿಸಿ ಬ್ಲ್ಯಾಕ್ಮೇಲ್ ಮಾಡಿದ್ದಾರೆ, ಸಿಎಂ ಆಗಲು ದುಡ್ಡು ಕೊಡಲು ಸಿದ್ಧರಿದ್ದಾರೆ ಎಂಬಂತ ಗಂಭೀರ ಆರೋಪಗಳನ್ನು ಮಾಡಿದವರು. ವಿವಾದಿತ ಮಾತುಗಳಿಂದಲೇ ಬಿಜೆಪಿ ಕಾರ್ಯಕರ್ತರಿಗೆ ಇಷ್ಟವಾಗಿದ್ದಾರೆ ಯತ್ನಾಳ್.
ಶೋಭಾ ಕರಂದ್ಲಾಜೆ ಅವರಿಗೆ ಈಗ ಕೇಂದ್ರದಲ್ಲಿರುವ ಮಂತ್ರಿ ಹುದ್ದೆಯನ್ನು ತ್ಯಜಿಸಿ ರಾಜ್ಯ ರಾಜಕಾರಣಕ್ಕೆ ಬರಲು ಮನಸ್ಸಿಲ್ಲ.
ಲಿಂಗಾಯತರು ಮತ್ತು ಯಡಿಯೂರಪ್ಪನವರ ಬಗ್ಗೆ ಸಿ ಟಿ ರವಿ ಆಡಿದರೆನ್ನಲಾದ ಮಾತುಗಳು ಚಿಕ್ಕಮಗಳೂರಲ್ಲಿ ಅವರಿಗೆ ಮುಳುವಾದ್ವು. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾಖಾನ್ ಎಂದು ಸಂಭೋದಿಸಿದ್ದು ಕುರುಬ ಸಮುದಾಯದ ಸ್ವಾಭಿಮಾನವನ್ನೂ ಕೆರಳಿಸಿತ್ತು.
ಮತ್ತೆ ಕಾರ್ಕಳ ಶಾಸಕರಾಗಿ ಆಯ್ಕೆ ಆಗಿರುವ ಸುನಿಲ್ ಕುಮಾರ್ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದರು. ಇವರ ವಿರುದ್ಧ ಬೇನಾಮಿ ಆಸ್ತಿ ಗಳಿಕೆ, ಎಣ್ಣೆಹೊಳೆ ಡ್ಯಾಂ ಕಾಮಗಾರಿ ಸೇರಿದಂತೆ ಹಲವು ಕಾಮಗಾರಿಗಳಲ್ಲಿ ಅಕ್ರಮ ಮತ್ತು ಸರ್ಕಾರಿ ಭೂಮಿಯನ್ನು ಪ್ರಭಾವ ಬಳಸಿ ಅನ್ಯರಿಗೆ ಹಂಚಿದ ಗಂಭೀರ ಆರೋಪಗಳಿವೆ. ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಅಂತರದಲ್ಲಿ ಗೆದ್ದ ಬಿಜೆಪಿ ಶಾಸಕ ಸುನಿಲ್ ಕುಮಾರ್.
ಚಾಮರಾಜನಗರ ಮತ್ತು ವರುಣಾ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಎರಡನ್ನೂ ಗೆಲ್ಲದೇ ಸೋತವರು. ಈಗಾಗಲೇ ವಯಸ್ಸು 72 ಆಗಿರುವ ಕಾರಣ ಪಕ್ಷಾಧ್ಯಕ್ಷ ಸ್ಥಾನ ಸಿಗುವುದು ಅನುಮಾನ.
ಸವಾಲುಗಳು:
ಮೇಲೆ ಹೆಸರಿಸಿರುವ ಐವರಲ್ಲಿ ಮೂವರಿಗೆ ವಿರೋಧ ಪಕ್ಷದ ನಾಯಕರಾಗುವ ಅವಕಾಶ ಇಲ್ಲ. ವಿರೋಧ ಪಕ್ಷದ ನಾಯಕನನ್ನು ಮುಖ್ಯಮಂತ್ರಿಯನ್ನು ಹಿಂಬಾಲಿಸುವ ನೆರಳು ಎಂದೇ ಕರೆಯಲಾಗುತ್ತದೆ.
1) ಐದು ವರ್ಷ ಬಲಿಷ್ಠ ಕಾಂಗ್ರೆಸ್ನ್ನು ವಿಧಾನಸೌಧ ಮತ್ತು ವಿಧಾನಸೌಧದ ಹೊರಗೆ ಸಮರ್ಥವಾಗಿ ಎದುರಿಸಬೇಕು. ಆಡಳಿತ ಪಕ್ಷದ ಹುಳುಕನ್ನು ಜನರಿಗೆ ತಿಳಿಸುವ ಹೋರಾಟ ಮತ್ತು ತಂತ್ರಗಾರಿಕೆಯ ಅನಿವಾರ್ಯತೆ.
2) 2028ರಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ದೊಡ್ಡ ಜವಾಬ್ದಾರಿ.
3) ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅಲೆ ಕುಗ್ಗಿರುವುದು ರಾಜ್ಯದಲ್ಲಿ ಬಿಜೆಪಿಗೆ ಹೊಸದೊಂದು ಆತಂಕ, ಸವಾಲನ್ನು ಸೃಷ್ಟಿಸಿದೆ.
4) ಲೋಕಸಭಾ ಚುನಾವಣೆಯಲ್ಲಿ ಈಗ ಇರುವ 25 ಕ್ಷೇತ್ರಗಳನ್ನು ಉಳಿಸಿಕೊಂಡು ಹೋಗುವ ಮತ್ತು ಕಾಂಗ್ರೆಸ್ನ ನಾಗಲೋಟಕ್ಕೆ ಕಡಿವಾಣ ಹಾಕಬೇಕಾದ ಸವಾಲು.
5) ಅತಿಯಾದ ಹಿಂದುತ್ವ ಮತ್ತು ವಿವಾದಗಳೇ ಚುನಾವಣಾ ಸರಕಾಗಿ ಲಾಭ ಆಗುತ್ತದೆ ಎಂಬ ಭ್ರಮೆ ಸುಳ್ಳಾಗಿರುವುದು.
ಅಚ್ಚರಿ ಆಯ್ಕೆಯೇ..?
ಯಡಿಯೂರಪ್ಪ ಬಳಿಕ ನಳೀನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷರಾಗ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ ಬಿಜೆಪಿಯಲ್ಲಿ ಎರಡನೇ ಪ್ರಮುಖ ಹುದ್ದೆಯಲ್ಲಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅವರ ಕೃಪೆಯಿಂದ ಯಡಿಯೂರಪ್ಪ ಸರ್ಕಾರದ ಮೇಲಿನ ಹಿಡಿತಕ್ಕಾಗಿ ಕಟೀಲ್ ಅಧ್ಯಕ್ಷರಾದರು. ಚುನಾವಣೆಗೂ ಒಂದು ವರ್ಷ ಮೊದಲೇ ಅಧ್ಯಕ್ಷರ ಬದಲಾವಣೆ ಆಗುತ್ತದೆ ಎಂದು ಊಹಿಸಲಾಗಿತ್ತಾದರೂ ಅದು ಆಗಲಿಲ್ಲ.
ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿ ಬಳಿಕ ಈಗ ಕರ್ನಾಟಕ ಬಿಜೆಪಿ ನೇರವಾಗಿ ಸಂತೋಷ್ ಹಿಡಿತದಲ್ಲಿರುವ ಹಿನ್ನೆಲೆಯಲ್ಲಿ ಅವರ ಬಣದಲ್ಲೇ ಯಾರಾದರೂ ಅಚ್ಚರಿಯ ರೀತಿಯಲ್ಲಿ ವಿಧಾನಸಭೆ ವಿಪಕ್ಷ ನಾಯಕನ ಸ್ಥಾನ ಮತ್ತು ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡರೂ ಅಚ್ಚರಿಯೇನಿಲ್ಲ.
ADVERTISEMENT
ADVERTISEMENT