ಲೋಕಸಭೆ ಚುನಾವಣೆಗೂ ಮುನ್ನ ವಿರೋಧ ಪಕ್ಷಗಳ ಐಎನ್ಡಿಐಎ ಮೈತ್ರಿಕೂಟದಲ್ಲಿ ಮತ್ತಷ್ಟು ಬಿರುಕು ಕಾಣಿಸಿಕೊಂಡಿದೆ ಎನ್ನುವ ವದಂತಿಯ ಬೆನ್ನಲ್ಲೇ, ಬಿಹಾರ ಸಿಎಂ ನಿತೀಶ್ ಕುಮಾರ್ ರವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ಮಾಡಿ ಮಾತನಾಡಿದ್ದಾರೆ ಎಲ್ಲವಾಗಿದೆ.
ಬಿಜೆಪಿ ಬಗ್ಗುಬಡಿಯಲು ಐಎನ್ಡಿಐಎ ಮೈತ್ರಿಕೂಟಕ್ಕಾಗಿ ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಮೊದಲ ಹೆಜ್ಜೆ ಇರಿಸಿದ ನಿತೀಶ್ ಕುಮಾರ್ ಅವರನ್ನು ಕಡೆಗಣಿಸಿ, ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಧ್ಯಕ್ಷ ಖರ್ಗೆಯವರ ಹೆಸರು ಪ್ರಸ್ತಾಪಿಸಿದ್ದು, ನಿತೀಶ್ ಕುಮಾರ್ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಬುಧವಾರ ನಡೆದ ಐಎನ್ಡಿಐಎ ಸಭೆಯುದ್ದಕ್ಕೂ ಸಿಡಿಮಿಡಿಗೊಂಡಿದ್ದ ನಿತೀಶ್, ನಂತರದ ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿರಲಿಲ್ಲ ಅಂತ ಹೇಳಲಾಗಿದೆ.
ಪಶ್ಚಿಮ ಬಂಗಾಳ ಸಿಎಂ ಹಾಗೂ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಅದಕ್ಕೆ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಅನುಮೋದನೆ ನೀಡಿದ್ದರು.
ಜೊತೆಗೆ ಐಎನ್ಡಿಐಎ ಮೈತ್ರಿಕೂಟಕ್ಕೆ ‘ಭಾರತ್’ ಎಂದು ಮರುನಾಮಕರಣ ಮಾಡುವ ಕುರಿತಾಗಿಯೂ ಹಲವು ವಿಷಯಗಳಲ್ಲಿ ಮೈತ್ರಿಕೂಟದ ನಾಯಕರ ಜತೆ ನಿತೀಶ್ ಕುಮಾರ್ ಭಿನ್ನಾಭಿಪ್ರಾಯ ಹೊಂದಿದ್ದಾರೆ ಅಂತ ಹೇಳಲಾಗ್ತಿದೆ.
ಇನ್ನು ಹೆಸರು ಬದಲಾವಣೆಯ ಪ್ರಸ್ತಾವ ಮುಂದಿಟ್ಟ ಕೂಡಲೇ ಸೋನಿಯಾ ಗಾಂಧಿ ಅದನ್ನು ತಳ್ಳಿಹಾಕಿದ್ದರು. ಅಲ್ಲದೆ ತಮ್ಮ ಭಾಷಣವನ್ನು ಡಿಎಂಕೆ ನಾಯಕರಿಗಾಗಿ ಅನುವಾದ ಮಾಡಲು ಮುಂದಾದ ಆರ್ಜೆಡಿ ಸಂಸದ ಮನೋಜ್ ಝಾ ವಿರುದ್ಧ ನಿತೀಶ್ ಕೋಪಗೊಂಡಿದ್ದರು.
ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ನ ಶೋಚನೀಯ ಪ್ರದರ್ಶನದ ವಿಚಾರವಾಗಿ ನಿತೀಶ್ ಕುಮಾರ್ ಹರಿಹಾಯ್ದಿದ್ದರು. ಮತದಾರರನ್ನು ಸೆಳೆಯುವ ಐಎನ್ಡಿಐಎ ಪ್ರಯತ್ನಕ್ಕೆ ಇದು ದೊಡ್ಡ ಹಿನ್ನಡೆ ಅಂತ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದರು ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸ್ಪಷ್ಟನೆ ನೀಡುವ ಸಲುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿತೀಶ್ ಕುಮಾರ್ ರವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗಿದೆ.