ವರದಿ: ಅಕ್ಷಯ್ ಕುಮಾರ್, ಮುಖ್ಯ ಸಂಪಾದಕರು
ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್ ನಾಯಕ ತಕ್ಷಣವೇ ಅನರ್ಹರಾಗ್ತಾರಾ..? ಕಾನೂನು ಏನು ಹೇಳುತ್ತದೆ..?
1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ ಉಪ ಕಲಂ 3ರಡಿಯಲ್ಲಿ:
2 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಒಳಗಾದ ಶಾಸಕ ಅಥವಾ ಸಂಸದರನ್ನು ಸದಸ್ಯತ್ವದಿಂದ ಅನರ್ಹಗೊಳಿಸಬಹುದು. ಜೈಲು ಶಿಕ್ಷೆ ಪೂರೈಸಿ ಬಿಡುಗಡೆ ಆದ ಬಳಿಕ ಮುಂದಿನ 6 ವರ್ಷಗಳವರೆಗೆ ಚುನಾವಣೆಗೆ ನಿಲ್ಲದಂತೆ ನಿರ್ಬಂಧ ಹೇರಬಹುದು.
2013ರಲ್ಲಿ ಸುಪ್ರಿಂಕೋರ್ಟ್ ಐತಿಹಾಸಿಕ ತೀರ್ಪು:
2013ರಲ್ಲಿ ಲಿಲ್ಲಿ ಥಾಮಸ್ v/s ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಎ ಜೆ ಪಟ್ನಾಯಕ್ ಮತ್ತು ಎಸ್ ಜೆ ಮುಖ್ಯೋಪಾಧ್ಯಾಯ ಅವರಿದ್ದ ದ್ವಿಸದದ್ಯ ಪೀಠ ಐತಿಹಾಸಿಕ ತೀರ್ಪು ನೀಡಿತ್ತು.
2 ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಒಳಗಾದ ಶಾಸಕರು ಅಥವಾ ಸಂಸದರು ಶಿಕ್ಷೆ ಪ್ರಮಾಣ ಪ್ರಕಟವಾದ ದಿನದಿಂದಲೇ ಅನರ್ಹರಾಗ್ತಾರೆ.
ಈ ತೀರ್ಪಿನ ಪ್ರಕಾರ ರಾಹುಲ್ ಗಾಂಧಿ ಅವರು ಇವತ್ತಿನಿಂದಲೇ ಸಂಸದ ಸ್ಥಾನ ಕಳೆದುಕೊಳ್ಳುತ್ತಾರೆ, ಅನರ್ಹರಾಗ್ತಾರೆ.
ADVERTISEMENT
ಅನರ್ಹತೆಯಿಂದ ತಾತ್ಕಾಲಿಕ ವಿನಾಯ್ತಿ:
1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8ರ ಉಪ ಕಲಂ 4ರ ಅಡಿಯಲ್ಲಿ 2 ವರ್ಷಕ್ಕಿಂತ ಹೆಚ್ಚು ಅವಧಿಗೆ ಶಿಕ್ಷೆಗೊಳಗಾದ ಶಾಸಕರು ಅಥವಾ ಸಂಸದರನ್ನು ಮೂರು ತಿಂಗಳವರೆಗೆ ಅನರ್ಹಗೊಳಿಸುವಂತಿಲ್ಲ.
2013ರ ಪರಿಣಾಮ:
ಆದರೆ 2013ರಲ್ಲಿ ಲಿಲ್ಲಿ ಥಾಮಸ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಉಪ ಕಲಂ 4ನ್ನು ರದ್ದುಪಡಿಸಿತು.
ಸುಗ್ರೀವಾಜ್ಞೆ ಹರಿದು ಹಾಕಿದ್ದ ರಾಹುಲ್:
ಸುಪ್ರೀಂಕೋರ್ಟ್ನ 2013ರ ತೀರ್ಪಿನ ವಿರುದ್ಧ ಮತ್ತು ಉಪ ಕಲಂ 4ನ್ನು ಮತ್ತೆ ಜನಪ್ರತಿನಿಧಿ ಕಾಯ್ದೆಯಲ್ಲಿ ಸೇರ್ಪಡೆಗೊಳಿಸುವ ಸಲುವಾಗಿ ಆಗ ಯುಪಿಎ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೆ ತರಲು ಯತ್ನಿಸಿತು. ಆದರೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಆ ಸುಗ್ರೀವಾಜ್ಞೆಯನ್ನು ನಾನ್ಸೆನ್ಸ್ ಎಂದು ಹೇಳಿ ಹರಿದು ಹಾಕಿದರು.
2018ರ ಸುಪ್ರೀಂಕೋರ್ಟ್ ತೀರ್ಪು:
2018ರಲ್ಲಿ ಲೋಕಪ್ರಹಾರಿ ಪ್ರಕರಣದಲ್ಲಿ ಈಗ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಆಗಿರುವ ಡಿ ವೈ ಚಂದ್ರಚೂಡ್ ಅವರಿದ್ದ ಮೂವರು ನ್ಯಾಯಮೂರ್ತಿಗಳ ಪೀಠ:
ಒಂದು ವೇಳೆ ಶಾಸಕರು ಮತ್ತು ಸಂಸದರಿಗೆ ಶಿಕ್ಷೆ ಪ್ರಮಾಣ ಪ್ರಕಟವಾಗಿ ಆ ಶಿಕ್ಷೆಯನ್ನು ಕೋರ್ಟ್ ಅಮಾನತಿನಲ್ಲಿಟ್ಟರೆ ಆಗ ಶಿಕ್ಷೆ ಅಮಾನತಿನಲ್ಲಿರುವ ಅವಧಿಗೆ ಶಿಕ್ಷೆಗೊಳಗಾದ ಅಂತಹ ಶಾಸಕರು ಅಥವಾ ಸಂಸದರನ್ನು ಅನರ್ಹಗೊಳಿಸುವಂತಿಲ್ಲ ಎಂದು ತೀರ್ಪು ನೀಡಿತ್ತು.
ಈ ವರ್ಷದ ಪ್ರಕರಣ:
2019ರ ಲೋಕಸಭಾ ಚುನಾವಣೆಯ ವೇಳೆ ಕೊಲೆ ಯತ್ನ ಪ್ರಕರಣದಲ್ಲಿ ಜನವರಿ 13ರಂದು ಕೆಳ ಹಂತದ ನ್ಯಾಯಾಲಯದ ಲಕ್ಷದ್ವೀಪದ ಎನ್ಸಿಪಿ ಸಂಸದ ಮೊಹ್ಮದ್ ಫೈಜಲ್ ಅವರನ್ನು ದೋಷಿ ಎಂದು ಪರಿಗಣಿಸಿ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ಈ ತೀರ್ಪು ಪ್ರಕಟವಾದ ಬಳಿಕ ಜನವರಿ 13ರಿಂದಲೇ ಅನ್ವಯವಾಗುವಂತೆ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಅನರ್ಹಗೊಳಿಸಿ ಲೋಕಸಭಾ ಕಾರ್ಯಾಲಯ ಅಧಿಸೂಚನೆ ಹೊರಡಿಸಿತ್ತು.
ಸಂಸದ ಫೈಜಲ್ ಅನರ್ಹತೆಯ ಹಿನ್ನೆಲೆಯಲ್ಲಿ ಜನವರಿಯಲ್ಲೇ ಚುನಾವಣಾ ಆಯೋಗ ಲಕ್ಷದ್ವೀಪಕ್ಕೆ ಉಪ ಚುನಾವಣೆ ಘೋಷಿಸಿತ್ತು.
ಆದರೆ ಕೆಳಹಂತದ ನ್ಯಾಯಾಲಯದ ತೀರ್ಪಿನ ವಿರುದ್ಧ ಫೈಜಲ್ ಅವರು ಕೇರಳ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಮೇಲ್ಮನವಿ ಪುರಸ್ಕರಿಸಿದ ಹೈಕೋರ್ಟ್ ಫೈಜಲ್ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು ಉಪ ಚುನಾವಣೆ ರದ್ದುಗೊಳಿಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿತು. ಪೆಬ್ರವರಿ 27ರಂದು ನಡೆಯಬೇಕಿದ್ದ ಉಪ ಚುನಾವಣೆಯನ್ನು ಆಯೋಗ ರದ್ದುಗೊಳಿಸಿತು.
ಫೈಜಲ್ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಅಮಾನತಿನಲ್ಲಿಟ್ಟಿರಲಿಲ್ಲ.
ಆದರೆ ರಾಹುಲ್ ಗಾಂಧಿ ಪ್ರಕರಣದಲ್ಲಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯವೇ ಶಿಕ್ಷೆಯನ್ನು 30 ದಿನ ಅಮಾನತಿನಲ್ಲಿಟ್ಟಿದೆ, ಮೇಲ್ಮನವಿಗೆ ಅನುಮತಿ ನೀಡಿದೆ.
2018ರ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ತೀರ್ಪಿನ ಅನ್ವಯ ರಾಹುಲ್ ಗಾಂಧಿ ತತ್ಕ್ಷಣಕ್ಕೆ ಸಂಸದ ಸ್ಥಾನದಿಂದ ಅನರ್ಹರಾಗಲ್ಲ.
ADVERTISEMENT