ದನದ ವ್ಯಾಪಾರಿಯಿಂದ ಹಣಕ್ಕೆ ಬೇಡಿಕೆ, ಬಳಿಕ ಬೆನ್ನಟ್ಟಿ ಕೊಲೆ – ಪುನೀತ್​ ಕೆರೆಹಳ್ಳಿ ವಿರುದ್ಧ ಕೇಸ್​

ದನಗಳ ವ್ಯಾಪಾರಿಯನ್ನು ಕೊಲೆ ಮಾಡಿದ ಆರೋಪದಡಿಯಲ್ಲಿ ಪುನೀತ್​ ಕೆರೆಹಳ್ಳಿ ವಿರುದ್ಧ ರಾಮನಗರ ಜಿಲ್ಲೆಯ ಸಾತನೂರು ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ದನದ ವ್ಯಾಪಾರಿ ಇದ್ರೀಸ್​ ಪಾಷಾ ಅವರನ್ನು ಪುನೀತ್​ ಕೆರೆಹಳ್ಳಿ ಮತ್ತು ಆತನ ತಂಡ ಕೊಲೆ ಮಾಡಿದೆ ಎಂದು ಆರೋಪಿಸಿ ಕುಟುಂಬಸ್ಥರು ಪೊಲೀಸ್​ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

ಇದ್ರೀಸ್​ ಪಾಷಾ ದನಗಳನ್ನು ಸಾಗಿಸುತ್ತಿದ್ದಾರೆ ಎಂದು ತಿಳಿದು ಪುನೀತ್​ ಕೆರೆಹಳ್ಳಿ ತಂಡ ಅವರನ್ನು ಬೆನ್ನಟ್ಟಿ ತಡೆಯಿತು. ಈ ವೇಳೆ ತಾವು ಮಾರುಕಟ್ಟೆಯಿಂದ ದನಗಳನ್ನು ಖರೀದಿಸಿದ್ದಾಗಿ ಆ ಬಗ್ಗೆ ತಮ್ಮ ಬಳಿ ದಾಖಲೆಗಳು ಇವೆ ಎಂಬುದಾಗಿ ಇದ್ರೀಸ್​ ಪಾಷಾ ಹೇಳಿದರು.

ಆದರೆ ಪುನೀತ್​ ಕೆರೆಹಳ್ಳಿ ಪಾಷಾ ಅವರನ್ನು ನೀನು ಪಾಕಿಸ್ತಾನಕ್ಕೆ ಹೋಗು ಎಂದು ನಿಂದಿಸಿದರು.

ಬಳಿಕ ಮತ್ತೆ ಪಾಷಾ ಅವರ ಗಾಡಿಯನ್ನು ಬೆನ್ನಟ್ಟಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದರು ಎಂದು ಎಫ್​ಐಆರ್​ನಲ್ಲಿ ದೂರಲಾಗಿದೆ.

ನನಗೆ 2 ಲಕ್ಷ ರೂಪಾಯಿ ಕೊಡಿ, ಇಲ್ಲವಾದ್ರೆ ಕೊಲೆ ಮಾಡುವುದಾಗಿ ಪುನೀತ್​ ಕೆರೆಹಳ್ಳಿ ಬೆದರಿಸಿದ್ದ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ಹಲ್ಲೆಯಲ್ಲಿ ಪಾಷಾ ಅವರ ಜೊತೆಗಿದ್ದ ಇಬ್ಬರು ಗಾಯಗೊಂಡಿದ್ದಾರೆ.