ರಷ್ಯಾದಿಂದ ಅಗ್ಗದ ತೈಲ – ಲಾಭ ಆಗ್ತಿರುವುದು ಯಾರಿಗೆ..? – ಮತ್ತೆ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಆಗುತ್ತಾ..?

ಮಹತ್ವದ ಬೆಳವಣಿಗೆಯಲ್ಲಿ ತೈಲ ರಫ್ತು ಮಾಡುವ ರಾಷ್ಟ್ರಗಳ ಸಂಘ (OPEC) ಇವತ್ತಿನಿಂದ ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸಿವೆ.

ಸೌದಿ ಅರೇಬಿಯಾ ಪ್ರತಿ ದಿನ 5 ಲಕ್ಷ ಬ್ಯಾರೆಲ್​ನ್ನಷ್ಟು ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸಿದೆ. ಇರಾಕ್​ 2 ಲಕ್ಷದ 11 ಸಾವಿರ ಬ್ಯಾರೆಲ್​ನ್ನಷ್ಟು, ಯುಎಇ, ಕುವೈತ್​, ಓಮನ್​ ಮತ್ತು ಅಲ್ಗೇರಿಯಾ ಕೂಡಾ ಕಚ್ಚಾತೈಲ ಉತ್ಪಾದನೆಯನ್ನು ಕಡಿತಗೊಳಿಸಿವೆ.

ಕಚ್ಚಾತೈಲ ಉತ್ಪಾದನೆ ಕಡಿತದಿಂದ ಬೆಲೆ ಏರಿಕೆ:

ಕಚ್ಚಾತೈಲ ಉತ್ಪಾದನೆ ಕಡಿತ ಘೋಷಣೆಯಿಂದ ಕಚ್ಚಾತೈಲದ ಬೆಲೆ ಬ್ಯಾರಲ್​​ಗೆ 5 ಡಾಲರ್​ನಷ್ಟು ಹೆಚ್ಚಳವಾಗಿದೆ. ತಜ್ಞರ ಅಂದಾಜಿನ ಪ್ರಕಾರ ಬ್ಯಾರೆಲ್​ಗೆ 10 ಡಾಲರ್​ ಹೆಚ್ಚಳವಾದರೂ ಆಗಬಹುದು.

ಭಾರತ ಮತ್ತು ರಷ್ಯಾ ತೈಲ:

ಉಕ್ರೇನ್​ ಮೇಲೆ ರಷ್ಯಾ ಯುದ್ಧ ಪ್ರಾರಂಭಿಸಿದ ಬಳಿಕ ರಷ್ಯಾ ಕಚ್ಚಾತೈಲದ ಮೇಲೆ ಯುರೋಪಿಯನ್​ ಒಕ್ಕೂಟ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ಭಾರತ, ಚೀನಾಕ್ಕೆ ರಷ್ಯಾ ಕಡಿಮೆ ಬೆಲೆಯಲ್ಲಿ ಕಚ್ಚಾತೈಲ ರಫ್ತು ಮಾಡುತ್ತಿದೆ.

ಮಾರ್ಚ್​​ನಲ್ಲಿ ರಷ್ಯಾದಿಂದ ಭಾರತ ದಾಖಲೆ ಪ್ರಮಾಣದಲ್ಲಿ ಕಚ್ಚಾತೈಲ ಆಮದು ಮಾಡಿದೆ. ಪ್ರತಿ ದಿನಕ್ಕೆ 1 ಲಕ್ಷದ 62 ಸಾವಿರ ಬ್ಯಾರೆಲ್​ನ್ನಷ್ಟು ತೈಲ ಭಾರತಕ್ಕೆ ರಫ್ತಾಗುತ್ತಿದೆ. ನಮ್ಮ ಅಗತ್ಯದ ಒಟ್ಟು ಕಚ್ಚಾತೈಲದಲ್ಲಿ ರಷ್ಯಾ ಶೇಕಡಾ 40ರಷ್ಟನ್ನು ಪೂರೈಕೆ ಮಾಡುತ್ತಿದೆ.

ಅಪಾರ ಪ್ರಮಾಣದ ಹಣ ಉಳಿತಾಯ:

ರಷ್ಯಾದಿಂದ ಭಾರತ ಪ್ರತಿ ಬ್ಯಾರೆಲ್​ಗೆ 60 ಡಾಲರ್​ ಮಿತಿಯೊಂದಿಗೆ ತೈಲ ರಫ್ರು ಮಾಡಿದೆ. ಈ ದರ ಕಡಿತದಿಂದ ಕಳೆದ ವರ್ಷದ ಡಿಸೆಂಬರ್​ ವೇಳೆಗೆ ಭಾರತಕ್ಕೆ 35 ಸಾವಿರ ಕೋಟಿ ರೂಪಾಯಿ ಉಳಿತಾಯ ಆಗಿದೆ ಎನ್ನುವುದು ಲೆಕ್ಕಾಚಾರ.

ಜನಸಾಮಾನ್ಯರಿಗೆ ದಕ್ಕಿದ್ದೇನು..?

ಉಕ್ರೇನ್​ ಮೇಲೆ ರಷ್ಯಾ ಯುದ್ಧಕ್ಕೂ ಮೊದಲು ಭಾರತಕ್ಕೆ ರಷ್ಯಾದಿಂದ ಪೂರೈಕೆ ಆಗುತ್ತಿದ್ದ ಕಚ್ಚಾತೈಲದ ಪ್ರಮಾಣ ಶೇಕಡಾ 2ರಷ್ಟು ಮಾತ್ರ. ಆದರೆ ಯುದ್ಧದ ಬಳಿಕ ಆ ಪ್ರಮಾಣ ಶೇಕಡಾ 16ರ ಗಡಿ ದಾಟಿದೆ.

ಸದ್ಯ ಇರಾಕ್​ನ್ನು ಹಿಂದಿಕ್ಕಿರುವ ರಷ್ಯಾ ಭಾರತಕ್ಕೆ ಕಚ್ಚಾತೈಲ ಪೂರೈಸುತ್ತಿರುವ ರಾಷ್ಟ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿದ್ದ ಇರಾಕ್​ 2ನೇ ಸ್ಥಾನದಲ್ಲಿದೆ. ಸೌದಿ ಅರೇಬಿಯಾ ಮತ್ತು ಯುಎಇ ನಂತರದ ಸ್ಥಾನದಲ್ಲಿದೆ.

ಖಾಸಗಿ ತೈಲ ಕಂಪನಿಗಳಿಗೆ ಲಾಭ:

ದೇಶದ ಜನರ ಹಿತಕ್ಕಾಗಿ ರಷ್ಯಾದಿಂದ ಅಗ್ಗದ ಮೊತ್ತದಲ್ಲಿ ಕಚ್ಚಾತೈಲ ಖರೀದಿ ಮಾಡುತ್ತಿದ್ದೇವೆ ಎಂದು ಹಲವು ಬಾರಿ ವಿದೇಶಾಂಗ ಸಚಿವ ಜೈಶಂಕರ್​ ಸಮರ್ಥಿಸಿಕೊಂಡಿದರು.

ಆದರೆ ರಷ್ಯಾದಿಂದ ಬ್ಯಾರೆಲ್​ಗೆ ಶೇಕಡಾ 30ರಷ್ಟು ಬೆಲೆ ಕಡಿತದೊಂದಿಗೆ ಕಚ್ಚಾತೈಲ ಖರೀದಿಸುತ್ತಿದ್ದರೂ ದೇಶದ ಮಾರುಕಟ್ಟೆಯಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಇಳಿಕೆ ಆಗಿಲ್ಲ.

ಅಂಕಿಅಂಶಗಳ ಪ್ರಕಾರ ಭಾರತಕ್ಕೆ ರಷ್ಯಾ ಮಾರಾಟ ಮಾಡುತ್ತಿರುವ ಅಗ್ಗದ ಕಚ್ಚಾತೈಲದಲ್ಲಿ ಅತ್ಯಧಿಕ ಪ್ರಮಾಣ ಖಾಸಗಿ ಕಂಪನಿಗಳ ಪಾಲಾಗುತ್ತಿದೆ. ಅಂದರೆ ಖಾಸಗಿ ಕಂಪನಿಗಳೇ ರಷ್ಯಾದಿಂದ ಆಗುತ್ತಿರುವ ಒಟ್ಟು ಆಮದಿನಲ್ಲಿ ಶೇಕಡಾ 60ರಷ್ಟು ಖರೀದಿ ಮಾಡುತ್ತಿವೆ.

ಯುರೋಪ್​ ರಾಷ್ಟ್ರಗಳಿಗೆ ಮಾರಾಟ:

ಹೀಗೆ ರಷ್ಯಾದಿಂದ ಅಗ್ಗದ ದರಕ್ಕೆ ಕಚ್ಚಾತೈಲ ಆಮದು ಮಾಡಿಕೊಳ್ಳುವ ಖಾಸಗಿ ಕಂಪನಿಗಳು ಸಂಸ್ಕರಿಸಿ ಯುರೋಪಿಯನ್​ ಒಕ್ಕೂಟಗಳಿಗೆ ಮಾರಾಟ ಮಾಡುತ್ತಿವೆ.

ರಷ್ಯಾದಿಂದ ಕಚ್ಚಾತೈಲ ಖರೀದಿಗೆ ನಿರ್ಬಂಧ ಹೇರಿರುವ ಯುರೋಪಿಯನ್​ ಒಕ್ಕೂಟ ಭಾರತದ ಖಾಸಗಿ ಕಂಪನಿಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಸಂಸ್ಕರಿಸಿದ ತೈಲೋತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ಭಾರತದಲ್ಲಿ 23 ತೈಲ ಸಂಸ್ಕರಣಗಳಿವೆ. ಇವುಗಳಲ್ಲಿ ಪ್ರತಿ ವರ್ಷ 249 ದಶಲಕ್ಷ ಟನ್​ನ್ನು ತೈಲ ಸಂಸ್ಕರಣೆಯಾಗುತ್ತದೆ. ಭಾರತ ವಿಶ್ವದಲ್ಲೇ ನಾಲ್ಕನೇ ಅತೀ ದೊಡ್ಡ ತೈಲ ಸಂಸ್ಕರಣಾ ದೇಶ.

ಭಾರತದಲ್ಲಾಗುವ ತೈಲ ಸಂಸ್ಕರಣೆಯಲ್ಲಿ ಶೇಕಡಾ 49ರಷ್ಟು ಪ್ರಮಾಣ ದೈತ್ಯ ಉದ್ಯಮಿ ಮುಖೇಶ ಅಂಬಾನಿ ಒಡೆತನದ ರಿಲಯನ್ಸ್​ ಮತ್ತು ರಷ್ಯಾ ಮೂಲದ ನಯರಾ ಕಂಪನಿಯ ಪಾಲಿದೆ.

ಉಕ್ರೇನ್​ ಮೇಲೆ ರಷ್ಯಾದ ಯುದ್ಧದದ ಬಳಿಕ ಯರೋಪಿಯನ್​ ಒಕ್ಕೂಟಕ್ಕೆ ಭಾರತದ ಸಂಸ್ಕರಿತ ತೈಲದ ರಫ್ತು ಶೇಕಡಾ 20.4ರಷ್ಟು ಹೆಚ್ಚಿದೆ. ಜೊತೆಗೆ ಈ ರಫ್ತಿನಲ್ಲಿ ಖಾಸಗಿ ಕಂಪನಿಗಳ ಪಾಲು ಶೇಕಡಾ 95ಕ್ಕೆ ಹೆಚ್ಚಳವಾಗಿದೆ. ಅಂದರೆ ಖಾಸಗಿ ಕಂಪನಿಗಳು ಪೆಟ್ರೋಲ್​, ಡೀಸೆಲ್​ನ್ನು ಭಾರತದ ಮಾರುಕಟ್ಟೆಯಲ್ಲೇ ಮಾರಾಟ ಮಾಡುವುದರ ಬದಲು ಹೊರದೇಶಗಳಿಗೆ ಮಾಡುತ್ತಿವೆ.

ಕಳೆದ ವರ್ಷದ ಪ್ರತಿ ಬ್ಯಾರೆಲ್​ಗೆ 112 ಡಾಲರ್​ ಇದ್ದ ಬೆಲೆ ಮಾರ್ಚ್​​ 31ರ ವೇಳೆಗೆ ಪ್ರತಿ ಬ್ಯಾರೆಲ್​ಗೆ 80 ಡಾಲರ್​ಗೆ ಕುಸಿದಿದೆ. ಅಂದರೆ ಪ್ರತಿ ಬ್ಯಾರೆಲ್​ಗೆ 32 ಡಾಲರ್​ನ್ನಷ್ಟು ಇಳಿಕೆಯಾಗಿದೆ. ಆದರೆ ಕಳೆದ ಮೇ ತಿಂಗಳಿಂದ ದೇಶದಲ್ಲಿ ಪೆಟ್ರೋಲ್​, ಡೀಸೆಲ್​ ಬೆಲೆ ಇಳಿಕೆ ಆಗಿಲ್ಲ.