ಬೆಲೆ ಏರಿಕೆಯಾದರೆ ಪಾಕಿಸ್ತಾನಕ್ಕೆ ಹೋಗಿ ಎನ್ನುವ BJPಯವರಿಗೆ ಈ ಪ್ರಶ್ನೆಗಳನ್ನು ಕೇಳಿ..!

ಅಕ್ಷಯ್​ ಕುಮಾರ್​, ಮುಖ್ಯ ಸಂಪಾದಕರು

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೆಲೆ ಏರಿಕೆ ಪ್ರಮುಖ ಚುನಾವಣಾ ವಿಷಯ. ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ.

ಈ ನಡುವೆ ಇವತ್ತು ಮತ್ತೆ ಕೇಂದ್ರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮನೆ ಬಳಕೆಯ ಅಡುಗೆ ಅನಿಲದ ಬೆಲೆಯನ್ನು 50 ರೂಪಾಯಿ ಹೆಚ್ಚಳ ಮಾಡಿವೆ, ವಾಣಿಜ್ಯ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಬರೋಬ್ಬರೀ 350 ರೂಪಾಯಿ ಹೆಚ್ಚಳ ಮಾಡಿದೆ.

14 ಕೆಜಿ ತೂಕದ ಮನೆ ಬಳಕೆಯ ಅಡುಗೆ ಅನಿಲದ ದರ ಕರ್ನಾಟಕದಲ್ಲಿ 1,150 ರೂಪಾಯಿ ದಾಟಿದೆ.

ಬೆಲೆ ಏರಿಕೆಯಿಂದ ಸಮಸ್ಯೆಯಾದರೆ ಪಾಕಿಸ್ತಾನಕ್ಕೆ ಹೋಗಿ ಎಂಬ ಅವಿವೇಕಿತನದ, ಉದ್ಧಟತನದ, ದುರಂಹಕಾರದ ಮಾತುಗಳನ್ನಾಡಿಕೊಂಡು ತಿರುಗಾಡುತ್ತಿದ್ದಾರೆ.

ವಿಜಯಪುರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​, ವಿಧಾನಪರಿಷತ್​ ಸದಸ್ಯೆಯಾಗಿದ್ದ ನಟಿ ತಾರಾ ಇಂತಹ ಹೇಳಿಕೆಗಳಿಂದ ಇತ್ತೀಚೆಗೆ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ.

ಭಾರತ ಮತ್ತು ಪಾಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ ಲೆಕ್ಕಾಚಾರ:

ಪಾಕಿಸ್ತಾನದಲ್ಲಿ:

ವರ್ಷ: 2011
ಪೆಟ್ರೋಲ್​: 83 ರೂ.
ಡೀಸೆಲ್​ : 79 ರೂ.

ವರ್ಷ 2012:
ಪೆಟ್ರೋಲ್​: 108 ರೂ.
ಡೀಸೆಲ್​ : 97 ರೂ.

ವರ್ಷ: 2013:
ಪೆಟ್ರೋಲ್​: 113 ರೂ.
ಡೀಸೆಲ್​ : 101 ರೂ.

2014:
ಪೆಟ್ರೋಲ್​: 117 ರೂ.
ಡೀಸೆಲ್​ : 101 ರೂ.

2013 ಜನವರಿಯಿಂದ 2023 ಜನವರಿವರೆಗೆ 10 ವರ್ಷದಲ್ಲಿ ಪಾಕಿಸ್ತಾನದಲ್ಲಿ ಪೆಟ್ರೋಲ್​ ಬೆಲೆ ಲೀಟರ್​​ಗೆ 136 ರೂಪಾಯಿ, ಡೀಸೆಲ್​ ಲೀಟರ್​​ಗೆ 146 ರೂಪಾಯಿಯಷ್ಟು ಹೆಚ್ಚಳವಾಗಿದೆ.

ಭಾರತದಲ್ಲಿ:

ವರ್ಷ: 2011
ಪೆಟ್ರೋಲ್​: 68 ರೂ.
ಡೀಸೆಲ್​ : 40 ರೂ.

ವರ್ಷ 2012:
ಪೆಟ್ರೋಲ್​: 79 ರೂ.
ಡೀಸೆಲ್​ : 43 ರೂ.

ವರ್ಷ: 2013:
ಪೆಟ್ರೋಲ್​: 71 ರೂ.
ಡೀಸೆಲ್​ : 52 ರೂ.

ವರ್ಷ 2014:
ಪೆಟ್ರೋಲ್​: 80 ರೂ.
ಡೀಸೆಲ್​ : 66 ರೂ.

ಈಗ:

ಪೆಟ್ರೋಲ್​:
ಪೆಟ್ರೋಲ್​: 106 ರೂ.
ಡೀಸೆಲ್​ : 94 ರೂ.

ಅಧಿಕಾರಕ್ಕೆ ಬಂದಿದ್ದೇ ಅಚ್ಛೇ ದಿನ್​ ಘೋಷಣೆಯಿಂದ:

2014ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಚಂಡ ಬಹುಮತದಿಂದ ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದಿದ್ದೇ ಅಚ್ಛೇ ದಿನ್​ ಘೋಷಣೆಯಿಂದ.

ಆದರೆ ಈಗ ಅದೇ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಬೆಲೆ ಏರಿಕೆಯಿಂದ ತೊಂದರೆ ಆದವರು ಪಾಕಿಸ್ತಾನಕ್ಕೆ ಹೋಗಿ ಎಂಬ ದುರಂಹಕಾರ ಮತ್ತು ಅಹಂನ ಮಾತುಗಳನ್ನಾಡುತ್ತಿದ್ದಾರೆ.

ಅಂಕಿಅಂಶಗಳನ್ನು ಗಮನಿಸಿದರೆ ಪೆಟ್ರೋಲ್​-ಡೀಸೆಲ್​ ಬೆಲೆ ಯಾವತ್ತಿಗೂ ಭಾರತಕ್ಕಿಂತ ಪಾಕಿಸ್ತಾನದಲ್ಲೇ ಹೆಚ್ಚಿದೆ.

2011ರಲ್ಲಿ ಯುಪಿಎ ಸರ್ಕಾರ ಮತ್ತು 2015ರಲ್ಲಿ ಮೋದಿ ಸರ್ಕಾರ ನೆರೆ ಹೊರೆಯ ರಾಷ್ಟ್ರಗಳೊಂದಿಗೆ ಭಾರತದ ಪೆಟ್ರೋಲ್​-ಡೀಸೆಲ್​ ಬೆಲೆಯನ್ನು ಹೋಲಿಕೆ ಮಾಡಿದ್ದವು.

ಆದರೆ ಬೆಲೆ ಏರಿಕೆಯಿಂದ ತೊಂದರೆಯಾದರೆ ಪಾಕಿಸ್ತಾನಕ್ಕೆ ಹೋಗಿ ಎಂಬ ಅಹಂಕಾರದ ಮಾತುಗಳು ಕರ್ನಾಟಕದ ಚುನಾವಣೆಯಲ್ಲಷ್ಟೇ ಮುನ್ನೆಲೆಗೆ ಬಂದಿವೆ.

2012ರಲ್ಲಿ ಬೆಲೆ ಏರಿಕೆಯನ್ನು ಯುಪಿಎ ಸರ್ಕಾರದ ವೈಫಲ್ಯ ಎಂದು ಬಣ್ಣಿಸಿದ್ದ ಆಗ ಗುಜರಾತ್​ ಸಿಎಂ ಆಗಿದ್ದ ಮೋದಿ, ಇದು ಕೋಟ್ಯಂತರ ಗುಜರಾತಿಗರ ಮೇಲೆ ಹೊರಿಸಲಾದ ಹೊರೆ ಎಂದಿದ್ದರು.

Massive hike in #petrol prices is a prime example of the failure of Congress-led UPA. This will put a burden of hundreds of crores on Guj. – ನರೇಂದ್ರ ಮೋದಿಯವರು ಮೇ 23, 2012ರಂದು ಮಾಡಿದ್ದ ಟ್ವೀಟ್​

ಪೆಟ್ರೋಲ್​, ಡೀಸೆಲ್​, ಅಡುಗೆ ಅನಿಲ ಬೆಲೆ ಏರಿಕೆಯನ್ನೇ ಮುಂದಿಟ್ಟುಕೊಂಡು 2009, 2014ರ ಚುನಾವಣೆಯನ್ನು ಎದರಿಸಿತ್ತು ಬಿಜೆಪಿ. 2014ರ ಲೋಕಸಭಾ ಚುನಾವಣೆ ವೇಳೆಗೆ ಬೆಲೆ ಏರಿಕೆ ವಿರುದ್ಧ ಬಿಜೆಪಿ ಕೈಗೊಂಡಿದ್ದ ಪ್ರತಿಭಟನೆ, ಹೋರಾಟದ ತೀವ್ರತೆ ಎಲ್ಲರಿಗೂ ಗೊತ್ತಿರುವ ಸತ್ಯ. ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬರಲು ಅದರ ಬಳಿ ಇದ್ದ ಅಸ್ತ್ರವೇ ಯುಪಿಎ ಕಾಲದಲ್ಲಿ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ, ಜನರಿಗೆ ಬೆಲೆ ಏರಿಕೆಗೆ ಸಾಕಾಗಿದೆ ಎಂಬ ಘೋಷಣೆ.

ಆದರೆ ಆಗ ಯಾರೂ ಕೂಡಾ ಪಾಕಿಸ್ತಾನದಲ್ಲಿ ಭಾರತಕ್ಕಿಂತ ಬೆಲೆ ಜಾಸ್ತಿ ಇದೆ, ನೀವು ಪಾಕಿಸ್ತಾನಕ್ಕೆ ಹೋಗಿ ಎಂಬ ವಿತಂಡ, ಅವಿವೇಕಿತನದ, ಮೂರ್ಖತನದ, ಉದ್ಧಟತನದ ಮಾತುಗಳನ್ನು ಆಡಿರಲಿಲ್ಲ.

1973ರಲ್ಲಿ ಆಗಿನ ಇಂದಿರಾ ಗಾಂಧಿ ಸರ್ಕಾರ ಪೆಟ್ರೋಲ್​, ಸೀಮೆಎಣ್ಣೆ ಬೆಲೆ ಏರಿಕೆ ಮಾಡಿದ್ದಾಗ ಜನಸಂಘದ ಅಧ್ಯಕ್ಷರಾಗಿದ್ದ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರು ಎತ್ತಿನಗಾಡಿಯಲ್ಲಿ ಸಂಸತ್​ ಅಧಿವೇಶನಕ್ಕೆ ಬರುವ ಮೂಲಕ ಪ್ರತಿಭಟಿಸಿದ್ದರು.

ಭಾರತ-ಪಾಕಿಸ್ತಾನ ಕರೆನ್ಸಿ ವಿನಿಮಯ ಮೌಲ್ಯ:

ಭಾರತದ ಕರೆನ್ಸಿಯ ಮೌಲ್ಯ ಪಾಕಿಸ್ತಾನದ ಕರೆನ್ಸಿಯ ಮೌಲ್ಯಕ್ಕಿಂತ ಮೂರು ಪಟ್ಟಿಗಿಂತಲೂ ಹೆಚ್ಚು. ಅಂದರೆ ಪಾಕಿಸ್ತಾನ 100 ರೂಪಾಯಿ ಮೌಲ್ಯದ ಕರೆನ್ಸಿ ಭಾರತದ ರೂಪಾಯಿ ಕರೆನ್ಸಿಯ 31 ರೂಪಾಯಿಗೆ ಸಮ.

ಪಾಕಿಸ್ತಾನದಲ್ಲಿ ಪೆಟ್ರೋಲ್​ ಬೆಲೆ ಲೀಟರ್​ಗೆ 272 ರೂಪಾಯಿ – ಭಾರತದ ಕರೆನ್ಸಿಯ ಮೌಲ್ಯಕ್ಕೆ ಪರಿವರ್ತಿಸಿದರೆ ಲೀಟರ್​ಗೆ 85 ರೂ.

ಪಾಕಿಸ್ತಾನದಲ್ಲಿ ಈಗ ಡೀಸೆಲ್​ ಬೆಲೆ ಲೀಟರ್​ಗೆ 196 ರೂ. – ಭಾರತದ ಕರೆನ್ಸಿಯ ಮೌಲ್ಯಕ್ಕೆ ಪರಿವರ್ತಿಸಿದರೆ 60 ರೂಪಾಯಿ.

LEAVE A REPLY

Please enter your comment!
Please enter your name here