ಕರ್ನಾಟಕದ ರಾಜಕಾರಣದಲ್ಲಿ ಪೊಲೀಸ್ ಅಧಿಕಾರಿಗಳು ತಮ್ಮ ಸುದೀರ್ಘ ಸರ್ಕಾರಿ ಸೇವೆಯ ಬಳಿಕ ರಾಜಕೀಯದ ರುಚಿ ನೋಡುವುದು ಹೊಸತೇನಲ್ಲ. ಹೀಗೆ ಜನಸೇವೆಗಾಗಿ ಖಾದಿ ಧರಿಸಿದ ನಿವೃತ್ತ ಖಾಕಿಗಳ ರಾಜಕೀಯ ಸವಾರಿ ಏನಾಗಿದೆ..? ಎಲ್ಲಿಂದ ಆರಂಭಿಸಿ ಎಲ್ಲಿಗೆ ಬಂದು ನಿಂತಿದೆ ಪೊಲೀಸರ ರಾಜಕೀಯ ಸಂಚಾರ..?
ಶಂಕರ್ ಮಹಾದೇವ್ ಬಿದರಿ:
ಬೆಂಗಳೂರು ಪೊಲೀಸ್ ಆಯಕ್ತರಾಗಿದ್ದ ಆ ಬಳಿಕ ಕರ್ನಾಟಕ ಪೊಲೀಸ್ ಇಲಾಖೆ ಮುಖ್ಯಸ್ಥರಾಗಿ (ಡಿಜಿಪಿ) ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ವಾಲಿದ್ದು ರಾಜಕೀಯದ ಕಡೆಗೆ.
ನರಹಂತಕ ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ಮೂಲಕ ಕರ್ನಾಟಕದಲ್ಲಿ ಮನೆಮಾತಾಗಿದ್ದರು ಬಿದರಿ.
2010ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಅವರದ್ದೇ ಪಕ್ಷದವರು ಬಂಡೆದ್ದು ವಿಧಾನಸಭೆಯೊಳಗೆ ಪಕ್ಷೇತರ ಶಾಸಕರು ಬಟ್ಟೆ ಹರಿದುಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.
ಆ ದಿನ ವಿಧಾನಸಭೆಗೆ ಪ್ರವೇಶಿಸುವ ಬಾಗಿಲಲ್ಲಿ ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಬಿದರಿ ನಡುವೆ ಆಗಿದ್ದ ಜಟಾಪಟಿ ಜನಜನಿತ.
ಖಡಕ್ ಅಧಿಕಾರಿ ಎಂಬ ಹೆಗ್ಗಳಿಕೆ ಹೊಂದಿದ್ದ ಬಿದರಿ ತಮ್ಮ ಸೇವಾ ನಿವೃತ್ತಿಯ ಬಳಿಕ ಸೀದಾ ಹೋಗಿದ್ದು ಕಾಂಗ್ರೆಸ್ ಬಳಿಗೆ. ಕಾಂಗ್ರೆಸ್ಸೇ ಇವರ ಮೊದಲ ಪಕ್ಷ. ಮಾರ್ಚ್ 2013ರಲ್ಲಿ ಬಿದರಿ ಕೈ ಹಿಡಿದರು.
ಆದರೆ ಕಾಂಗ್ರೆಸ್ನಲ್ಲಿ ಬಿದರಿ ಜಾಸ್ತಿ ದಿನ ಉಳಿಯಲಿಲ್ಲ. ಆರೇ ತಿಂಗಳೊಳಗೆ ಬಿದರಿ ಅವರಿಗೆ ಸೈಕಲ್ ತುಳಿಯುವ ಮನಸ್ಸಾಯಿತು. 2013ರ ಆಗಸ್ಟ್ನಲ್ಲಿ ಬಿದರಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದರು. ಬಿದರಿ ಸೇರ್ಪಡೆ ಆಗ್ತಿದ್ದಂತೆ ಆ ಕ್ಷಣವೇ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕವಾದರು.
ವಿಚಿತ್ರ ಎಂದರೆ ಸಮಾಜವಾದಿ ಪಕ್ಷಕ್ಕೆ ಬಿದರಿ ಅವರನ್ನು ಕರೆದುಕೊಂಡು ಹೋಗಿ ಸೇರಿಸಿದ್ದು ಆಗ ಕರ್ನಾಟಕದಲ್ಲಿ ಸಮಾಜವಾದಿ ಪಕ್ಷದ ಏಕೈಕ ಶಾಸಕರಾಗಿದ್ದ ಸಿ ಪಿ ಯೋಗೇಶ್ವರ್. ಯೋಗೇಶ್ವರ್ ಆಗ ಸಮಾಜವಾದಿ ಪಕ್ಷದ ದಕ್ಷಿಣ ಭಾರತದ ಉಸ್ತುವಾರಿ ನೇಮಕವಾಗಿದ್ದರು. ವಿಧಾನಸಭೆಯಲ್ಲಿ ಅಂಗಿ ಹರಿದುಕೊಂಡಿದ್ದ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಕೂಡಾ ಆಗ ಎಸ್ಪಿಯಲ್ಲಿದ್ದರು. ಈಗ ಈ ಮೂವರೂ ಬಿಜೆಪಿಯಲ್ಲಿದ್ದಾರೆ.
ಕೈಯಿಂದ ದೂರವಾಗಿ ಸೈಕಲ್ ತುಳಿದ ಐದೇ ತಿಂಗಳಿಗೆ ಬಿದರಿ ಅವರಿಗೆ ಸಮಾಜವಾದಿ ಪಕ್ಷವೂ ಬೇಡವಾಯಿತು. ಜನವರಿ, 2014ರಲ್ಲಿ ಬಿದರಿ ಅವರು ತಮ್ಮದೇ ಹೊಸ ಪಕ್ಷನ್ನು ಕಟ್ಟಿದರು. ಅದಕ್ಕೆ ಜನಶಕ್ತಿ ಪಕ್ಷ ಎಂಬ ಹೆಸರನ್ನೂ ಇಟ್ಟರು.
ಆದರೆ ಬಿದರಿ ಅವರಿಗೆ ತಾವು ಕಟ್ಟಿದ ಪಕ್ಷವೂ ಬೇಡವಾಯಿತು. ಆಗಸ್ಟ್, 2014ರಲ್ಲಿ ಅಂದರೆ ಕೇವಲ ಎಂಟೇ ತಿಂಗಳಿಗೆ ಬಿಜೆಪಿಗೆ ಸೇರ್ಪಡೆಯಾದರು.
ಒಂದು ಬಾರಿಯಷ್ಟೇ ಸ್ಪರ್ಧೆ:
ಕಾಂಗ್ರೆಸ್ನಲ್ಲಿದ್ದಾಗ ಬಿದರಿ ಅವರು ತಮ್ಮ ತವರು ಜಿಲ್ಲೆ ಬಾಗಲಕೋಟೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಟಿಕೆಟ್ ಬಯಸಿದ್ದರು. ಆದರೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ಬಿದರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಬಾಗಲಕೋಟೆ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಬಿದರಿ ಅವರು ಮೂರನೇ ಸ್ಥಾನದಲ್ಲಿ 10,959 ಮತಗಳನ್ನು (ಶೇಕಡಾ 1.02ರಷ್ಟು) ಪಡೆದು ಠೇವಣಿ ಕಳೆದುಕೊಂಡಿದ್ದರು.
ಯಡಿಯೂರಪ್ಪ ಆಪ್ತನ ಸೆಡ್ಡು:
ಬಿದರಿ ಅವರು ಬಿಜೆಪಿಗೆ ಸೇರಿದ ಬಳಿಕ 2018ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು ಮತ್ತು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವಂತೆ ಬಿಜೆಪಿ ಅವರಿಗೆ ಸೂಚಿಸಿತ್ತು.
ಆದರೆ ಯಡಿಯೂರಪ್ಪ ಆಪ್ತ ಕಾಪು ಸಿದ್ದಲಿಂಗಸ್ವಾಮಿ ಪ್ರತಿರೋಧ ಮತ್ತು ಬಹಿರಂಗ ವಿರೋಧಿ ಹೇಳಿಕೆಯ ಕಾರಣದಿಂದ ವರುಣಾದಿಂದ ಬಿದರಿ ಅವರಿಗೆ ಟಿಕೆಟ್ ಸಿಗಲೇ ಇಲ್ಲ.
ಬಿಜೆಪಿಗೆ ಸೇರಿದ ತಮ್ಮನ್ನು ತಮ್ಮ ಸೇವಾನುಭವ ಪರಿಗಣಿಸಿ ರಾಜ್ಯಸಭೆಗೆ ಕಳುಹಿಸ್ತಾರೆ ಎಂಬ ಬಿದರಿ ಅವರ ನಿರೀಕ್ಷೆಯೂ ಹುಸಿಯಾಯಿತು.
ಮೋದಿ, ಯಡಿಯೂರಪ್ಪ ವಿರುದ್ಧ ಗುಡುಗು:
ಬಿದರಿ ಈಗ ಬಿಜೆಪಿಯಲ್ಲಿದ್ದರೂ ಇಲ್ಲದಂತಿದ್ದಾರೆ. ಬಿಜೆಪಿಯಲ್ಲಿದ್ದುಕೊಂಡೇ ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪ ವಿರುದ್ಧವೇ ಕಿಡಿಕಾರಿದ್ದಾರೆ.
ನಾನು ನರೇಂದ್ರ ಮೋದಿ ಅವರಷ್ಟು ಪ್ರಬುದ್ಧನಲ್ಲ, ಹೀಗಾಗಿ ನಾನು ರಾಜಕೀಯ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದೆ. ಸಂಘ ಪರಿವಾರದ ಗರಡಿಯಲ್ಲಿ ಬೆಳೆದ ನಾನು ಹಣ ಮತ್ತು ಅಧಿಕಾರದ ಆಸೆಯಿಂದ ಬಿಜೆಪಿ ಸೇರುತ್ತಿಲ್ಲ
ಎಂದು ಬಿಜೆಪಿ ಸೇರುವ ದಿನ ಹೇಳಿದ್ದರು ಬಿದರಿ. ಆದರೆ ದಿನಗಳು ಉರುಳಿದಂತೆ ಬಿದರಿ ಅವರಿಗೆ ಮೋದಿಯೂ ಸಹ್ಯವಾಗಲಿಲ್ಲ
ನೋಟು ನಿಷೇಧ, ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು ವಿಚಾರದಲ್ಲಿ ಮೋದಿ ಅವರನ್ನು ಬೆಂಬಲಿಸಿದ್ದೆ. ಆದರೆ ಮೋದಿ ಮೇಲಿಟ್ಟಿದ್ದ ನಿರೀಕ್ಷೆಗಳೆಲ್ಲವೂ ಸುಳ್ಳಾಯಿತು, ಮೋದಿ ಕೂಡಾ ವಿಫಲರಾಗಿದ್ದಾರೆ. ನಾನು ನಿರಾಶನಾಗಿದ್ದೇನೆ
ಎಂದು 2021ರ ಫೆಬ್ರವರಿಯಲ್ಲಿ ಬಿದರಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದರು.
ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥ ಕಡುಭ್ರಷ್ಟರು
ಎಂದು ತಮ್ಮ ಟ್ವೀಟ್ನಲ್ಲಿ ಬರೆದುಕೊಂಡಿದ್ದ ಬಿದರಿ ಅವರು,
ಯಡಿಯೂರಪ್ಪ ಮತ್ತು ಅವರ ಮಕ್ಕಳ ಭ್ರಷ್ಟಾಚಾರವನ್ನು ಯಾಕೆ ಸಹಿಸಿಕೊಂಡಿದ್ದೀರಿ..?
ಎಂದು ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ಟ್ಯಾಗ್ ಮಾಡಿ ಪ್ರಶ್ನಿಸಿದ್ದರು.
ಯಡಿಯೂರಪ್ಪರನ್ನು ಮುಖ್ಯಮಂತ್ರಿ ಗಾದಿಯಿಂದ ಇಳಿಸುವ ವೇಳೆ ಸ್ವಾಮೀಜಿಗಳು ಬಿಎಸ್ವೈ ಪರ ವಕಾಲತ್ತು ವಹಿಸಿದ್ದನ್ನು ನೋಡಿ ವ್ಯಂಗ್ಯವಾಡಿದ್ದ ಬಿದರಿ ಅವರು
ಯಡಿಯೂರಪ್ಪ ಅವರನ್ನು ನೆಲದ ಕಾನೂನಿನಡಿ ಶಿಕ್ಷಿಸಬೇಕು, ಯಡಿಯೂರಪ್ಪ ಅವರನ್ನು ಕಳುಹಿಸಬೇಕಾದ ಜಾಗಕ್ಕೆ ಕಳುಹಿಸಬೇಕು, ಸ್ವಾಮೀಜಿಗಳು ಈ ಮಟ್ಟಿಗೆ ಇಳಿಯಬಾರದಿತ್ತು