ಪ್ರಧಾನಿ ಮೋದಿ ಭದ್ರತಾ ಲೋಪ: ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ

ಕಳೆದ ವರ್ಷ ಪಂಜಾಬ್​ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಆಗಿದ್ದ ಲೋಪ ಸಂಬಂಧ ಪಂಜಾಬ್​ನ ಆಮ್​ ಆದ್ಮಿ ಸರ್ಕಾರ ಹಿರಿಯ ಪೊಲೀಸ್​ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಧರಿಸಿದೆ.

ಪಂಜಾಬ್​ ರಾಜ್ಯದ ಪೊಲೀಸ್​ ಇಲಾಖೆ ಮುಖ್ಯಸ್ಥರಾಗಿದ್ದ  ನಿವೃತ್ತ ಡಿಜಿಪಿ ಸಿದ್ಧಾರ್ಥ್​ ಚಟ್ಟೋಪಾಧ್ಯಾಯ, ಫಿರೋಜ್​ಪುರ್​ ವಲಯದ ಡಿಐಜಿ ಇಂದೆರ್​ಬಿರ್​ ಸಿಂಗ್​, ಫಿರೋಜ್​ಫುರ್​ ಎಸ್​ಎಸ್​ಪಿ ಆಗಿದ್ದ ಹರ್ಮನ್​ದೀಪ್​ ಸಿಂಗ್​ ಹನ್ಸ್​ ವಿರುದ್ಧ ಕ್ರಮಕೈಗೊಳ್ಳುವಂತೆ ರಾಜ್ಯದ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಸಿಬ್ಬಂದಿ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. 

ತನಿಖಾ ಸಮಿತಿ ಶಿಫಾರಸ್ಸಿನಂತೆ ನಿಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮಗಳನ್ನು ಕೈಗೊಳ್ಳಬಾರದು ಎಂದು ಕೇಳಿ  ಇತರೆ ಆರು ಮಂದಿ ಅಧಿಕಾರಿಗಳಿಗೂ ಗೃಹ ಇಲಾಖೆ ನೋಟಿಸ್​ ಜಾರಿ ಮಾಡಿದೆ.

ತನಿಖಾ ಸಮಿತಿಯ ವರದಿ ಬಳಿಕವೂ ಪಂಜಾಬ್​ ಸರ್ಕಾರ ಕ್ರಮಕ್ಕೆ ವಿಳಂಬ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಗೃಹ ಸಚಿವಾಲಯ ಕಳೆದ ವಾರ ಪಂಜಾಬ್​ನ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿತ್ತು. ಒಂದು ವೇಳೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳದೇ ಹೋದರೆ ವಿಶೇಷ ಭದ್ರತಾ ತಂಡ ಕಾಯ್ದೆ (SPG ACT) ಅಡಿಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕೇಂದ್ರ ಸರ್ಕಾರವೇ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿತ್ತು.

ಪಂಜಾಬ್​ ವಿಧಾನಸಭಾ ಚುನಾವಣೆ ಘೋಷಣೆಗೂ ಮೊದಲು ಜನವರಿ 5ರಂದು ಪ್ರಧಾನಿ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದ್ದರು.

ಜನವರಿ 5ರಂದು ಭಟಿಂಡಾ ವಿಮಾನನಿಲ್ದಾಣದಿಂದ ಫಿರೋಜ್​ಪುರ್​​ಗೆ ರಸ್ತೆ ಮಾರ್ಗದಲ್ಲಿ ಸಂಚರಿಸುವ ವೇಳೆ ಮೇಲ್ಸುತೆಯಲ್ಲಿ ಅರ್ಧಗಂಟೆ ಸಿಲುಕೊಂಡಿತ್ತು. ಮೇಲ್ಸುತೆಯ ಒಂದು ತುದಿಯಲ್ಲಿ 300 ಮಂದಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಹೀಗಾಗಿ ಪ್ರಧಾನಿ ಮೋದಿಯವರು ವಾಪಸ್​ ತೆರಳಬೇಕಾಯಿತು.

ಪ್ರಧಾನಿಯವರ ಭದ್ರತಾ ಲೋಪ ಸಂಬಂಧ ತನಿಖೆ ನಡೆಸುವ ಸಂಬಂಧ ಸುಪ್ರೀಂಕೋರ್ಟ್​ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಕಳೆದ ವರ್ಷದ ಆಗಸ್ಟ್​ನಲ್ಲಿ ಸುಪ್ರೀಂಕೋರ್ಟ್​ ಮತ್ತು ಕೇಂದ್ರ ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲಾಗಿತ್ತು.