ಹಳೆ ಪಿಂಚಣಿಗಾಗಿ ಹೋರಾಟದಲ್ಲಿ ಭಾಗಿಯಾದ್ರೆ ಕ್ರಮ – ನೌಕರರಿಗೆ ಸರ್ಕಾರದ ಕಟು ಎಚ್ಚರಿಕೆ

ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಹೋರಾಟದಲ್ಲಿ ಭಾಗಿಯಾದರೆ ಅಂತಹ ನೌಕರರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ  ರಾಷ್ಟ್ರೀಯ ಕ್ರಿಯಾ ಸಮಿತಿ ಹಳೆ ಪಿಂಚಣಿ ಯೋಜನೆ ಮರು ಜಾರಿಗಾಗಿರುವ ಒಕ್ಕೂಟದಡಿ ಮಾರ್ಚ್​ 21 ಅಂದರೆ ಇವತ್ತು ದೇಶಾದ್ಯಂತ ಹೋರಾಟಕ್ಕೆ ತೀರ್ಮಾನಿಸಿದೆ. ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ತೀರ್ಮಾನಿಸಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಎಲ್ಲ ಸಚಿವಾಲಯಗಳಿಗೂ ಸುತ್ತೋಲೆಯನ್ನು ಹೊರಡಿಸಿದೆ.

ಮುಷ್ಕರದಲ್ಲಿ ಭಾಗಿ ಆಗುವುದು, ಕಚೇರಿಗೆ ಗೈರಾಗುವುದು, ಧರಣಿ ಕೂರುವುದು ಇತ್ಯಾದಿ 1964ರ ಕೇಂದ್ರ ನಾಗರಿಕ ಸೇವಾ ನಡತೆ ನಿಯಮಗಳ ಉಲ್ಲಂಘನೆಯಾಗುತ್ತದೆ. ಒಂದು ವೇಳೆ ನೌಕರರ ಅನುಮತಿ ಇಲ್ಲದೇ ಕರ್ತವ್ಯಕ್ಕೆ ಗೈರಾದರೆ ಆ ದಿನದ ವೇತನ ಮತ್ತು ಭತ್ಯೆಯನ್ನು ನೀಡಲಾಗುವುದಿಲ್ಲ. 

ಸೇವಾ ನಿಯಮಗಳು ಮತ್ತು ಈ ಹಿಂದೆ ಸುಪ್ರೀಂಕೋರ್ಟ್​ ನೀಡಿದ್ದ ತೀರ್ಪಿನ ಬಗ್ಗೆ ನೌಕರರಿಗೆ ತಿಳಿಸುವುದು. ಯಾವುದೇ ರೀತಿಯ ಪ್ರತಿಭಟನೆಯಲ್ಲಿ ಭಾಗವಹಿಸದಂತೆ ಸೂಚಿಸುವುದು. ಮುಷ್ಕರ ಅಥವಾ ಧರಣಿಯ ಅವಧಿಯಲ್ಲಿ ರಜೆಗೆ ಅರ್ಜಿ ಸಲ್ಲಿಸಿದ್ದರೆ ಆ ರಜೆಯನ್ನು ಮಂಜೂರು ಮಾಡುವಂತಿಲ್ಲ

ಎಂದು ಇಲಾಖೆ ಎಲ್ಲ ಸಚಿವಾಲಯಗಳಿಗೂ ಸೂಚಿಸಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಸುತ್ತೋಲೆಯ ಬೆನ್ನಲ್ಲೇ ಒಂದು ವೇಳೆ ಕರ್ತವ್ಯಕ್ಕೆ ಗೈರಾಗಿ ಮುಷ್ಕರದಲ್ಲಿ ಭಾಗಿಯಾದ್ರೆ ದಂಡ ಒಳಗೊಂಡಂತೆ ನೌಕರರಿಗೆ ಶಿಸ್ತುಕ್ರಮದ ಎಚ್ಚರಿಕೆ ನೀಡಿವೆ.