ಒಂದೆಡೆ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ಎಂದು ಬೃಹತ್ ಪ್ರತಿಭಟನೆ ನಡೆಸುತ್ತಿದ್ದರೆ ಇತ್ತ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಪ್ರಸ್ತಾಪ ಮುಂದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಉತ್ತರ ನೀಡಿದೆ.
ಆದರೆ ಇದೇ ಹೊತ್ತಲ್ಲಿ ಮಾಜಿ ಶಾಸಕರಿಗೆ ಪ್ರತಿ ತಿಂಗಳು ಭರಪೂರ ಪಿಂಚಣಿಯನ್ನು ನೀಡುತ್ತಿದೆ.
440 ಮಂದಿ ಮಾಜಿ ಶಾಸಕರು ಮತ್ತು ಮಾಜಿ ಎಂಎಲ್ಸಿಗಳಿಗೆ 2013ರಿಂದ 2021ರವರೆಗೆ ಸರ್ಕಾರ ಪ್ರತಿ ತಿಂಗಳು ನೀಡಿದ ಪಿಂಚಣಿಯ ಮಾಹಿತಿಯನ್ನು ಕರ್ನಾಟಕ ವಿಧಾನಸಭಾ ಸಚಿವಾಲಯದ ಸಾರ್ವಜನಿಕ ಮಾಹಿತಿ ಸಂಪರ್ಕ ಅಧಿಕಾರಿಗಳು ನೀಡಿದ್ದಾರೆ.
ಎಷ್ಟು ಪಿಂಚಣಿ..?
ಈ ಅಂಕಿಅಂಶದ ಪ್ರಕಾರ ವಿಧಾನಸಭಾ ಸಚಿವಾಲಯ ಪ್ರತಿ ತಿಂಗಳು ಮಾಜಿ ಶಾಸಕರು ಮತ್ತು ಮಾಜಿ ಎಂಎಲ್ಸಿಗಳಿಗೆ 2 ಕೋಟಿ 14 ಲಕ್ಷ ರೂಪಾಯಿಯನ್ನು ಪಿಂಚಣಿಯಾಗಿ ವ್ಯಯಿಸಿದೆ.
ಅಂದರೆ ಪ್ರತಿ ವರ್ಷ 25.68 ಕೋಟಿ ರೂಪಾಯಿಯಷ್ಟು ಮೊತ್ತ ಪಿಂಚಣಿಗಾಗಿಯೇ ವ್ಯಯ್ಯವಾಗುತ್ತಿದೆ.
ಒಂದು ಬಾರಿಯಷ್ಟೇ ಶಾಸಕರು, ಎಂಎಲ್ಸಿಗಳಾಗಿರುವವರು 45 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಹಿರಿಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ಮಾಸಿಕ 77 ಸಾವಿರ ರೂಪಾಯಿ ಪಿಂಚಣಿ ಪಡೆದಿದ್ದಾರೆ.
ನಟ ಅನಂತ್ನಾಗ್ ಅವರು 51 ಸಾವಿರ ರೂಪಾಯಿ ಪಿಂಚಣಿ ಪಡೆದಿದ್ದಾರೆ. ಅನಂತ್ನಾಗ್ ಅವರು ಎಂಎಲ್ಸಿ, ಶಾಸಕ ಮತ್ತು ಜೆ ಹೆಚ್ ಪಟೇಲ್ ಸರ್ಕಾರದಲ್ಲಿ ಮಂತ್ರಿಯೂ ಆಗಿದ್ದರು.
ಮಾಜಿ ಸಚಿವ ರಮಾನಾಥ್ ರೈ 66 ಸಾವಿರ ರೂಪಾಯಿ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ 66 ಸಾವಿರ ರೂಪಾಯಿ, ಪಿ ಜಿ ಆರ್ ಸಿಂಧ್ಯಾ 70 ಸಾವಿರ ರೂಪಾಯಿ, ಮಾಲೀಕಯ್ಯ ಗುತ್ತೇದಾರ್ 69 ಸಾವಿರ ರೂಪಾಯಿ, ಟಿ ಬಿ ಜಯಚಂದ್ರ 69 ಸಾವಿರ ರೂ, ವಸಂತ ಬಂಗೇರ 64 ಸಾವಿರ ರೂಪಾಯಿ, ಮಾಲಕರೆಡ್ಡಿ 70 ಸಾವಿರ ರೂಪಾಯಿ
ಶಾಸಕರಿಗೆ ಎಷ್ಟಿದೆ ಪಿಂಚಣಿ..?
ಇದೇ ವರ್ಷದ ಫೆಬ್ರವರಿಯಲ್ಲಿ ಶಾಸಕರ ಪಿಂಚಣಿ ಹೆಚ್ಚಳಕ್ಕೆ ಒಪ್ಪಿಗೆ ಕರ್ನಾಟಕದ ವಿಧಾನಮಂಡಲದ ಅಧಿವೇಶನದಲ್ಲಿ ಒಪ್ಪಿಗೆ ನೀಡಲಾಯಿತು.
ಆ ಪ್ರಕಾರ ಶಾಸಕರ ಪಿಂಚಣಿಯನ್ನು ಮಾಸಿಕ 40 ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ. ಎರಡನೇ ಅವಧಿಗೆ ಆಯ್ಕೆ ಆಗಿರುವ ಶಾಸಕರಿಗೆ 40 ಸಾವಿರ ರೂಪಾಯಿ ಜೊತೆಗೆ ಹೆಚ್ಚುವರಿಯಾಗಿ 1 ಸಾವಿರ ರೂಪಾಯಿ ಪಿಂಚಣಿ ನೀಡಲಾಗುತ್ತಿದೆ.
ಜೊತೆಗೆ ಮಾಸಿಕ ನಾಲ್ಕು ಸಾವಿರ ರೂಪಾಯಿ ವೈದ್ಯಕೀಯ ಭತ್ಯೆ ನೀಡಲಾಗುತ್ತದೆ.
ಮಾಜಿ ಶಾಸಕರು ಮತ್ತು ಅವರ ಕುಟುಂಬ ಸದಸ್ಯರು ವೈದ್ಯಕೀಯ ಶುಲ್ಕವನ್ನು ಸರ್ಕಾರದಿಂದ ಪಡೆಯಬಹುದಾಗಿದೆ.
ಜೊತೆಗೆ ವಾರ್ಷಿಕವಾಗಿ 1 ಲಕ್ಷ ರೂಪಾಯಿ ಪ್ರಯಾಣಭತ್ಯೆಯೂ ಮಾಜಿ ಶಾಸಕರಿಗೆ ಸಿಗಲಿದೆ.
ಮಾಜಿ ಶಾಸಕರು ನಿಧನರಾದ ಬಳಿಕ ಅವರ ಕುಟುಂಬದವರಿಗೆ ಪಿಂಚಣಿಯ ಶೇಕಡಾ 50ರಷ್ಟು ಮೊತ್ತ ಸಿಗಲಿದೆ.
ADVERTISEMENT
ADVERTISEMENT