ನಿಖಿಲ್​ ಸೋಲಿನ ಆಘಾತ – ಪ್ರಜ್ವಲ್​ ರೇವಣ್ಣಗೆ ಟಿಕೆಟ್​ ಕೊಡಲ್ವಾ H D ಕುಮಾರಸ್ವಾಮಿ..?

ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಸಂಸದ ಮತ್ತು ಹೆಚ್​ಡಿ ರೇವಣ್ಣ-ಭವಾನಿ ರೇವಣ್ಣ ಪುತ್ರ ಪ್ರಜ್ವಲ್​ ರೇವಣ್ಣಗೆ ಟಿಕೆಟ್​ ಸಿಗುವುದು ಅನುಮಾನ.

ಪ್ರಜ್ವಲ್​ ರೇವಣ್ಣಗೆ ಲೋಕಸಭಾ ಚುನಾವಣೆ ಟಿಕೆಟ್​ ನೀಡುವುದು ಬೇಡ ಎಂಬ ಆಲೋಚನೆಯಲ್ಲಿದ್ದಾರೆ ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ.

ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪುತ್ರ ನಿಖಿಲ್​ ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದಲ್ಲಿ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಪ್ರಜ್ವಲ್​ ರೇವಣ್ಣಗೆ ಟಿಕೆಟ್​ ನಿರಾಕರಿಸುವ ಬಗ್ಗೆ ಕುಮಾರಸ್ವಾಮಿ ಆಲೋಚನೆ ಮಾಡಿದ್ದಾರೆ.

ಸದ್ಯ ಕುಮಾರಸ್ವಾಮಿ ಕುಟುಂಬದಿಂದ ಕುಮಾರಸ್ವಾಮಿ ಅವರೊಬ್ಬರೇ ಶಾಸಕರಾಗಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋತ ಮಗನನ್ನು ಅನಿತಾ ಕುಮಾರಸ್ವಾಮಿ ಅವರು ಬಿಟ್ಟುಕೊಟ್ಟಿದ್ದ ರಾಮನಗರದಿಂದ ಗೆಲ್ಲಿಸಿಕೊಂಡು ಬರುವ ಪ್ರಯತ್ನ ಸಫಲವಾಗಿಲ್ಲ.

ಇತ್ತ ರೇವಣ್ಣ ಅವರ ಕುಟುಂಬದಿಂದ ಹೆಚ್​ ಡಿ ರೇವಣ್ಣ ಅವರು ಶಾಸಕರು, ಪ್ರಜ್ವಲ್​ ರೇವಣ್ಣ ಸಂಸದರು, ಸೂರಜ್​ ರೇವಣ್ಣ ವಿಧಾನಪರಿಷತ್​ ಸದಸ್ಯರು ಮತ್ತು ಭವಾನಿ ರೇವಣ್ಣ ಅವರು ಹಾಸನ ಜಿಲ್ಲಾ ಪಂಚಾಯತ್​ ಸದಸ್ಯರು.

ಈ ಹಿನ್ನೆಲೆಯಲ್ಲಿ ನಿಖಿಲ್​ ಸೋಲಿನ ಆಘಾತದಲ್ಲಿರುವ ಕುಮಾರಸ್ವಾಮಿ ಅವರು ಕುಟುಂಬ ರಾಜಕಾರಣ ಬೇಡ ಎಂಬ ಕಾರಣ ಮುಂದಿಟ್ಟುಕೊಂಡು ಪ್ರಜ್ವಲ್​ಗೆ ಟಿಕೆಟ್​ ನಿರಾಕರಿಸುವ ಬಗ್ಗೆ ಆಪ್ತರ ಜೊತೆಗೆ ಸಮಾಲೋಚನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅವರಿಗೆ ಟಿಕೆಟ್​​ ತಪ್ಪಿಸಿ ಹೆಚ್​ ಸಿ ಸ್ವರೂಪ್​ ಅವರಿಗೆ ಹೆಚ್​ಡಿಕೆ ಟಿಕೆಟ್​ ಕೊಡಿಸಿದ್ದರು, ಸ್ವರೂಪ್​ ಗೆದ್ದು ಶಾಸಕರಾದರು.