ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಎಂಬ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿರುವ ಮಾಜಿ ಸಚಿವ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆಯಲ್ಲೇ ಬಿಜೆಪಿ ಮುಖಂಡರಿಗೆ ಗಾಳ ಹಾಕಿದ್ದಾರೆ.
ರೆಡ್ಡಿ ಅವರ ಹೊಸ ಪಕ್ಷಕ್ಕಾಗಿ ಬಳ್ಳಾರಿ ಜಿಲ್ಲೆಯಲ್ಲಿ ಹಲವು ಬಿಜೆಪಿ ಮುಖಂಡರು ಪಕ್ಷಕ್ಕೆ ರಾಜೀನಾಮೆ ಕೊಡುತ್ತಿದ್ದಾರೆ.
ಬಳ್ಳಾರಿ ಮಂಡಲ ಬಿಜೆಪಿ ಅಧ್ಯಕ್ಷ ಮೊಹಮ್ಮದ್ ಖದೀರ್ ಅವರು ಪಕ್ಷಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
ಜನಾರ್ದನ ರೆಡ್ಡಿ ನಮ್ಮ ರಾಜಕೀಯ ಮಾರ್ಗದರ್ಶಕ. ಅವರನ್ನು ಬಿಜೆಪಿ ನಡೆಸಿಕೊಂಡ ರೀತಿಯಿಂದ ನಮಗೆ ಬೇಸರ ಆಗಿದೆ. ರೆಡ್ಡಿ ಅವರ ಕಾರಣದಿಂದ ಬಿಜೆಪಿಯಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಸಿಕ್ಕಿತ್ತು. ಹೀಗಾಗಿ ಜನಾರ್ದನ ರೆಡ್ಡಿ ಅವರಿಗೆ ನಮ್ಮ ಬೆಂಬಲ ಸದಾ ಇರಲಿದೆ
ಎಂದು ಖದೀರ್ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಿಗೆ ಖದೀರ್ ಅವರು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ರಾಜೀನಾಮೆ ಪತ್ರ ರವಾನಿಸಿದ್ದಾರೆ.
ಕಳೆದ ವಾರವಷ್ಟೇ ಬಳ್ಳಾರಿ ಬಿಜೆಪಿ ಉಪಾಧ್ಯಕ್ಷ ದಮ್ಮೂರ ಶೇಖರ ಅವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ರೆಡ್ಡಿ ಹೊಸ ಪಕ್ಷ ಸೇರುವ ಸಲುವಾಗಿ ಕುರುಬ ಸಮುದಾಯದ ದಮ್ಮೂರ ಶೇಖರ ಅವರು ಬಿಜೆಪಿ ಬಿಟ್ಟಿದ್ದರು. ಮೊಟ್ಟ ಮೊದಲ ಬಾರಿಗೆ ಕುರುಬ ಸಮುದಾಯಕ್ಕಾಗಿ ಹೋರಾಡಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನನಗೆ ಕಲ್ಪಿಸಿಕೊಟ್ಟಿದ್ದೇ ರೆಡ್ಡಿ ಎಂದು ದಮ್ಮೂರ ಶೇಖರ ಅವರು ರಾಜೀನಾಮೆ ಪತ್ರದಲ್ಲಿ ಹೇಳಿದ್ದರು.
ರೆಡ್ಡಿ ಅವರನ್ನು ಪಕ್ಷ ನಡೆಸಿಕೊಂಡ ರೀತಿಯಿಂದ ಆಘಾತವಾಗಿದೆ ಮತ್ತು ಬಿಜೆಪಿ ಮೇಲೆ ನಂಬಿಕೆ ಕಳೆದುಕೊಂಡಿದ್ದೇನೆ ಎಂದೂ ರಾಜೀನಾಮೆ ಪತ್ರದಲ್ಲಿ ದಮ್ಮೂರ ಶೇಖರ ಅವರು ಹೇಳಿದ್ದರು.