ಕರ್ನಾಟಕ ಚುನಾವಣೆ – ಕಾಂಗ್ರೆಸ್​​ ರಥಯಾತ್ರೆಗೆ ಮುಹೂರ್ತ ಅಂತಿಮ – ಎಲ್ಲೆಲ್ಲಿ, ಎಷ್ಟು ದಿನ..?

ವಿಧಾನಸಭಾ ಚುನಾವಣೆಗೆ ನಾಲ್ಕೇ ತಿಂಗಳು ಬಾಕಿ ಇರುವಂತೆ ಕರ್ನಾಟಕದಲ್ಲಿ ಕಾಂಗ್ರೆಸ್​​ ತನ್ನ ಮಗದೊಂದು ಯಾತ್ರೆಯನ್ನು ಆರಂಭಿಸಲು ಅಣಿಯಾಗಿದೆ.

ರಾಜ್ಯದಲ್ಲಿ ಬೆಂಗಳೂರು ಬಳಿಕ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗಡಿ ಜಿಲ್ಲೆ ಬೆಳಗಾವಿಯಿಂದಲೇ ಕಾಂಗ್ರೆಸ್​ನ ರಥಯಾತ್ರೆ ಆರಂಭವಾಗಲಿದೆ.

ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಗಕ್ಷ ಡಿಕೆ ಶಿವಕುಮಾರ್​ ನೇತೃತ್ವದಲ್ಲಿ ಜನವರಿ 11ರಂದು ಬೆಳಗಾವಿಯಲ್ಲಿ ರಥಯಾತ್ರೆಗೆ ಚಾಲನೆ ನೀಡಲಾಗುತ್ತದೆ.

ಜನವರಿ 27ರಂದು ಕಾಂಗ್ರೆಸ್​ ರಥಯಾತ್ರೆ ಮುಗಿಯಲಿದೆ.

17 ದಿನಗಳ ರಥಯಾತ್ರೆಯಲ್ಲಿ 27 ಜಿಲ್ಲೆಗಳಲ್ಲಿ ಕಾಂಗ್ರೆಸ್​ ಚುನಾವಣಾ ಪ್ರಚಾರ ಕೈಗೊಳ್ಳಲಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್​ ಎರಡು ತಂಡಗಳಾಗಿ ಕಾಂಗ್ರೆಸ್​ ಯಾತ್ರೆಯ ನೇತೃತ್ವವಹಿಸಲಿದ್ದಾರೆ. ಈಗಾಗಲೇ ರಥಯಾತ್ರೆಗಾಗಿ ವಿಶೇಷ ಬಸ್​ ಕೂಡಾ ಸಿದ್ಧವಾಗಿದೆ.

ಬೆಳಗಾವಿ ಜಿಲ್ಲೆಯಲ್ಲೇ 4 ದಿನ ರಥಯಾತ್ರೆ ಸಾಗಲಿದೆ. ಜನವರಿ 11ರಿಂದ 14ರವರೆಗೆ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್​ ನಾಯಕರು ಯಾತ್ರೆ ಕೈಗೊಳ್ಳಲಿದ್ದಾರೆ.

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜನವರಿ 14 ಮತ್ತು 15ರಂದು ರಥಯಾತ್ರೆಗೆ ವಿರಾಮ ಸಿಗಲಿದೆ.

ಜನವರಿ 16 ಹೊಸಪೇಟೆ, ಜನವರಿ 17 ಕೊಪ್ಪಳ, ಜನವರಿ 18 ಬಾಗಲಕೋಟೆ ಮತ್ತು ಗದಗ, ಜನವರಿ 19 ಹಾವೇರಿ ಮತ್ತು ದಾವಣಗೆರೆಯಲ್ಲಿ ರಥಯಾತ್ರೆ ಸಾಗಲಿದೆ.

ಜನವರಿ 20ರಂದು ರಥಯಾತ್ರೆಗೆ ಎರಡನೇ ವಿರಾಮ ಸಿಗಲಿದೆ.

ಆ ಬಳಿಕ ಜನವರಿ 21ರಂದು ಹಾಸನ, ಚಿಕ್ಕಮಗಳೂರು, ಜನವರಿ 22ರಂದು ಉಡುಪಿ, ದಕ್ಷಿಣ ಕನ್ನಡ, ಜನವರಿ 23 ರಂದು ಕೋಲಾರ, ಚಿಕ್ಕಬಳ್ಳಾಪುರ, ಜನವರಿ 24ರಂದು ತುಮಕೂರು, ಬೆಂಗಳೂರು ಗ್ರಾಮಾಂತರ, ಜನವರಿ 25ರಂದು ಚಾಮರಾಜನಗರ, ಮೈಸೂರು, ಜನವರಿ 26ರಂದು ಮಂಡ್ಯ ಮತ್ತು ರಾಮನಗರದಲ್ಲಿ ಕಾಂಗ್ರೆಸ್​ ಯಾತ್ರೆ ಸಾಗಲಿದೆ.

ಜನವರಿ 27ರಂದು ಕಲಬುರಗಿ ಜಿಲ್ಲೆಯಲ್ಲಿ ಬೃಹತ್​ ಕಾಂಗ್ರೆಸ್​ ಸಮಾವೇಶವನ್ನು ಆಯೋಜಿಸಲಾಗುತ್ತದೆ.

LEAVE A REPLY

Please enter your comment!
Please enter your name here