ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಇವತ್ತು ಮಂಡನೆ ಆದ ತನ್ನ ಬಜೆಟ್ನಲ್ಲಿ ಪ್ರಮುಖ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿದೆ.
ಅದರಲ್ಲೂ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ, ರಸಗೊಬ್ಬರ ಸಹಾಯಧನ, ನರೇಗಾ ಯೋಜನೆಗೆ ಅನುದಾನ ಕಡಿತಗೊಳಿಸಲಾಗಿದೆ.
ಕಳೆದ ಬಾರಿ ಯೂರಿಯಾ ಸಬ್ಸಿಡಿ ಮೊತ್ತವನ್ನು 1 ಲಕ್ಷದ 54 ಸಾವಿರದ 97 ಕೋಟಿ ರೂಪಾಯಿಗೆ ಕಡಿತಗೊಳಿಸಲಾಗಿತ್ತು. ಈ ಬಾರಿ ಈ ಮೊತ್ತವನ್ನು 1ಲಕ್ಷದ 31 ಸಾವಿರದ 100 ಕೋಟಿ ರೂಪಾಯಿಗೆ ಇಳಿಸಲಾಗಿದೆ. ಅಂದರೆ ಸಬ್ಸಿಡಿ ಮೊತ್ತ ಸುಮಾರ 23 ಸಾವಿರ ಕೋಟಿ ರೂಪಾಯಿಯಷ್ಟು ಇಳಿಕೆ ಆಗಿದೆ.
ಪೌಷ್ಠಿಕಾಂಶ ಆಧಾರಿತ ಸಬ್ಸಿಡಿ ಮೊತ್ತವನ್ನೂ ಕಡಿತಗೊಳಿಸಲಾಗಿದೆ. ಕಳೆದ ಬಜೆಟ್ನಲ್ಲಿ 71,122 ಕೋಟಿ ರೂಪಾಯಿ ಮೊತ್ತವನ್ನು ಸಬ್ಸಿಡಿಗೆ ಮೀಸಲಿಡಲಾಗಿತ್ತು. ಆದರೆ ಈ ಬಾರಿ ಈ ಮೊತ್ತವನ್ನು ಸರಿಸುಮಾರು ಅರ್ಧದಷ್ಟು ಅಂದರೆ 44,000 ಕೋಟಿ ರೂಪಾಯಿಗೆ ಇಳಿಸಲಾಗಿದೆ.
ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಗೆ ಕಳೆದ ಬಾರಿ 44 ಕೋಟಿ ರೂಪಾಯಿ ನೀಡಲಾಗಿತ್ತು. ಈ ಬಾರಿ ಆ ಮೊತ್ತ 30 ಕೋಟಿಗೆ ಇಳಿಕೆ ಆಗಿದೆ.
ಆಹಾರ ಭದ್ರತೆ ಅಡಿಯಲ್ಲಿ ಆಹಾರ ನಿಗಮಗಳಿಗೆ ನೀಡಲಾಗುತ್ತಿದ್ದ ಮೊತ್ತವನ್ನು 1 ಲಕ್ಷದ 37 ಸಾವಿರದ 207 ಕೋಟಿ ರೂಪಾಯಿಗೆ ಇಳಿಸಲಾಗಿದೆ. ಕಳೆದ ಬಾರಿ ಈ ಮೊತ್ತ 2 ಲಕ್ಷದ 14 ಸಾವಿರದ 696 ಕೋಟಿ ರೂಪಾಯಿ ಆಗಿತ್ತು.
ಆಹಾರ ಭದ್ರತೆ ಕಾಯ್ದೆಯಡಿ ಧಾನ್ಯಗಳ ವಿಕೇಂದ್ರೀಕೃತ ಖರೀದಿಗೆ ನೀಡಲಾಗುವ ಅನುದಾನವನ್ನೂ ಕಡಿತಗೊಳಿಸಲಾಗಿದೆ. ಕಳೆದ ಬಾರಿ 72 ಸಾವಿರದ 282 ಕೋಟಿ ರೂಪಾಯಿ ಮೊತ್ತ ಮೀಸಲಿರಿಸಲಾಗಿತ್ತು. ಈ ಬಾರಿ 59,973 ಕೋಟಿ ರೂಪಾಯಿಗೆ ಇಳಿಸಲಾಗಿದೆ.
ಆಹಾರ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಕಳೆದ ಬಾರಿ 11,868 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಆದರೆ ಈ ಬಾರಿ ಆ ಮೊತ್ತ 8,820 ಕೋಟಿ ರೂಪಾಯಿಗೆ ಇಳಿಕೆ ಆಗಿದೆ.
ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಗೆ ಕಳೆದ ಬಾರಿ 8,269 ಕೋಟಿ ರೂಪಾಯಿ ನೀಡಲಾಗಿತ್ತು. ಆದರೆ ಈ ಬಜೆಟ್ನಲ್ಲಿ ಆ ಮೊತ್ತವನ್ನು 3,365 ಕೋಟಿ ರೂಪಾಯಿಗೆ ಇಳಿಸಲಾಗಿದೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗಳಿಗೆ ಜಮೆ ಮಾಡಲಾಗುವ ಮೊತ್ತವನ್ನು 60 ಸಾವಿರ ಕೋಟಿ ರೂಪಾಯಿಗೆ ಮಿತಿಗೊಳಿಸಲಾಗಿದೆ.
ಈ ಬಾರಿ ರಾಷ್ಟ್ರೀಯ ಜೇನುಕೃಷಿ ಯೋಜನೆಗೆ ಅನುದಾನ ಸಿಕ್ಕಿಲ್ಲ.