ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಹೆಚ್ಚಿದೆ. ಫೆಬ್ರವರಿ 27ರಂದು ಪ್ರಧಾನಿಯವರು ಶಿವಮೊಗ್ಗ ಮತ್ತು ಬೆಳಗಾವಿಗೆ ಭೇಟಿ ನಿಡಿದ್ದರು.
ಶಿವಮೊಗ್ಗದಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಬೆಳಗಾವಿಯಲ್ಲಿ ಮರು ಅಭಿವೃದ್ಧಿಪಡಿಸಲಾದ ರೈಲು ನಿಲ್ದಾಣ ಉದ್ಘಾಟನೆ, ಜಲ ಜೀವನ್ ಯೋಜನೆಗೆ ಶಂಕು ಸ್ಥಾಪನೆ ಮತ್ತು ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯ 13ನೇ ಕಂತಿನ ಬಿಡುಗಡೆಗೊಳಿಸಿದ್ದರು.
ಪ್ರಧಾನಿ ಮೋದಿಯವರು ಬೆಳಗಾವಿಯಲ್ಲಿ ನಡೆದಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು ಐದು ಗಂಟೆಯಷ್ಟೇ.
ಈ ಐದು ಗಂಟೆಗಳ ಕಾರ್ಯಕ್ರಮಕ್ಕೆ ಕರ್ನಾಟಕದ ಬಿಜೆಪಿ ಸರ್ಕಾರ ಅಂದಾಜು ಖರ್ಚು ಮಾಡಿದ್ದು ಬರೋಬ್ಬರೀ 13.5 ಕೋಟಿ ರೂಪಾಯಿ ಎಂದು ಇಂಗ್ಲೀಷ್ ವೆಬ್ಸೈಟ್ ಸೌತ್ಫಸ್ಟ್ ವರದಿ ಮಾಡಿದೆ.
ಮೋದಿಯವರ ಭೇಟಿ ಹಿನ್ನೆಲೆಯಲ್ಲಿ 15.3 ಕೋಟಿ ರೂಪಾಯಿಯಷ್ಟು ಮೊತ್ತವನ್ನು ಖರ್ಚು ಮಾಡುವುದಕ್ಕೆ ಬೆಳಗಾವಿ ಜಿಲ್ಲಾಡಳಿತ ಮತ್ತು ಇತರೆ ಇಲಾಖೆಗೆ ಸರ್ಕಾರ ಅನುಮತಿ ನೀಡಿತ್ತು.
ಮೋದಿ ರೋಡ್ಶೋಗೆ 2 ಕೋಟಿ ರೂ.:
ಬೆಳಗಾವಿ ನಗರದಲ್ಲಿ ಪ್ರಧಾನಿ ಮೋದಿ ನಡೆಸಿದ್ದ 10.7 ಕಿಲೋ ಮೀಟರ್ ರೋಡ್ಶೋಗೆ ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರೀ 2 ಕೋಟಿ ರೂಪಾಯಿ.
ಜನ ಕರೆತರಲು 3.5 ಕೋಟಿ ರೂ. ಖರ್ಚು:
ಬೆಳಗಾವಿಯಲ್ಲಿ ಮೋದಿ ಕಾರ್ಯಕ್ರಮಕ್ಕೆ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಕರೆತರಲು ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರೀ 3.5 ಕೋಟಿ ರೂಪಾಯಿ. ಜನರನ್ನು ಕರೆತರುವ ಸಲುವಾಗಿ ರಾಜ್ಯ ಸರ್ಕಾರ 4.5 ಕೋಟಿ ರೂಪಾಯಿ ಖರ್ಚಿಗೆ ಸಾರಿಗೆ ಇಲಾಖೆಗೆ ಅನುಮತಿ ನೀಡಿತ್ತು.
ವಾಯುವ್ಯ ಕರ್ನಾಟಕ ಸಾರಿಗೆ 1,100 ಬಸ್ಗಳಲ್ಲಿ ಮಾತ್ರವಲ್ಲದೇ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ಗಳೂ ಸೇರಿದಂತೆ 1,200 ಬಸ್ಗಳನ್ನು ಮೋದಿ ಕಾರ್ಯಕ್ರಮಕ್ಕೆ ಜನ ತರಲು ಸರ್ಕಾರ ಒಂದು ದಿನದ ಮಟ್ಟಿಗೆ ಬಾಡಿಗೆ ಪಡೆದಿತ್ತು.
ಪ್ರತಿ ಕಿಲೋ ಮೀಟರ್ಗೆ 44 ರೂಪಾಯಿ ಬಾಡಿಗೆಯಂತೆ ಒಂದು ಬಸ್ಗೆ ಜನ ತರಲು ಸರ್ಕಾರ ಮಾಡಿರುವ ವೆಚ್ಚ 15,400 ರೂಪಾಯಿ. 1,200 ಬಸ್ಗಳಿಗೆ 1.84 ಕೋಟಿ ರೂಪಾಯಿ ವೆಚ್ಚವಾಗಿದೆ. ಹೆಚ್ಚುವರಿ ಕಿಲೋ ಮೀಟರ್ಗೆ 44 ರೂಪಾಯಿ ದರ ನಿಗದಿಪಡಿಸಲಾಗಿತ್ತು.
30 ಕಿಲೋ ಮೀಟರ್ ಬ್ಯಾರಿಕೇಡ್:
ಮೋದಿಯವರ ಬೆಳಗಾವಿ ಭೇಟಿಯ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು 30 ಕಿಲೋ ಮೀಟರ್ ಬ್ಯಾರಿಕೇಡ್ ಹಾಕಿದ್ದರು.
ಒಂದು ದಿನದ ಪ್ರಚಾರಕ್ಕೆ 50 ಲಕ್ಷ ಖರ್ಚು:
ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಮೋದಿ ಮತ್ತು ಇತರೆ ನಾಯಕರು ಹಾಗೂ ಸರ್ಕಾರದ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಒಂದೇ ದಿನ ಸರ್ಕಾರ 50 ಲಕ್ಷ ರೂಪಾಯಿ ಖರ್ಚು ಮಾಡಿದೆ.
ಹೆಲಿಪ್ಯಾಡ್ಗೆ 5 ಲಕ್ಷ ರೂ. ಖರ್ಚು:
ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಲ್ಯಾಂಡಿಂಗ್ಗಾಗಿ ಹೆಲಿಪ್ಯಾಡ್ ನಿರ್ಮಾಣಕ್ಕಾಗಿ ಸರ್ಕಾರ 5 ಲಕ್ಷ ರೂಪಾಯಿ ಖರ್ಚು ಮಾಡಿದೆ.
ಹುಬ್ಬಳ್ಳಿ ರೋಡ್ಶೋಗೆ ಅರ್ಧಕೋಟಿ:
ಜನವರಿ 12ರಂದು ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಹುಬ್ಬಳ್ಳಿಯಲ್ಲಿ ಕೈಗೊಂಡಿದ್ದ ಮೋದಿ ರೋಡ್ಶೋಗೆ ಸರ್ಕಾರ ಬರೋಬ್ಬರೀ 52 ಲಕ್ಷ ರೂಪಾಯಿ ಖರ್ಚು ಮಾಡಿತ್ತು.
ADVERTISEMENT
ADVERTISEMENT