ಅಕ್ಷಯ್ ಕುಮಾರ್, ಮುಖ್ಯ ಸಂಪಾದಕರು
ಚುನಾವಣಾ ಪ್ರಕ್ರಿಯೆ ನಿಯಮ 1961:
ಚುನಾವಣಾ ಪ್ರಕ್ರಿಯೆ ನಿಯಮ 1961ರ ಅಡಿಯಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಯೂ ತಾನು ಮತ್ತು ತನ್ನ ಪತಿ ಅಥವಾ ಪತ್ನಿ ಮತ್ತು ಅವಲಂಬಿತ ಮಕ್ಕಳ ಹೆಸರಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿ ಮಾಹಿತಿಗಳನ್ನು ನಾಮಪತ್ರ ಸಲ್ಲಿಕೆಯ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯ.
ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳಲ್ಲಿರುವ ಠೇವಣಿ, ಆಭರಣ ಒಳಗೊಂಡಂತೆ ಎಲ್ಲ ರೀತಿಯ ಸ್ಥಿರಾಸ್ತಿ ಮತ್ತು ಚರಾಸ್ತಿಯ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನಮೂನೆ-26ರ ಮಾದರಿಯಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯ.
ಅನರ್ಹಗೊಳಿಸಬಹುದು:
ಒಂದು ವೇಳೆ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿಯೂ ಪತಿ ಅಥವಾ ಪತ್ನಿ ಮತ್ತು ಅವಲಂಬಿತ ಮಕ್ಕಳ ಹೆಸರಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟರೆ, ಆ ಅಭ್ಯರ್ಥಿ ಚುನಾವಣೆಯಲ್ಲಿ ಗೆದ್ದ ಬಳಿಕ ನಡೆಬಹುದಾದ ತನಿಖೆಯಲ್ಲಿ ಆಸ್ತಿ ಮಾಹಿತಿ ಮುಚ್ಚಿಟ್ಟಿದ್ದು ಸಾಬೀತಾದರೆ ಗೆದ್ದ ಆ ಅಭ್ಯರ್ಥಿಯನ್ನು ಅನರ್ಹಗೊಳಿಸಬಹುದು ಎಂದು ಹಲವು ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
90 ದಿನದೊಳಗೆ ಮಾಹಿತಿ ನೀಡಬೇಕು:
ಜನಪ್ರತಿನಿಧಿ ಕಾಯ್ದೆ 1951ರ 75ಎ ಪ್ರಕಾರ ಚುನಾಯಿತ ಸದಸ್ಯರು ತಾವು ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ 90 ದಿನದೊಳಗೆ ತಮ್ಮ ಮತ್ತು ತಮ್ಮ ಪತಿ ಅಥವಾ ಪತ್ನಿ ಮತ್ತು ಅವಲಂಬಿತ ಮಕ್ಕಳ ಹೆಸರಲ್ಲಿರುವ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಬಗ್ಗೆ ದಾಖಲೆಗಳನ್ನು ಸದನಕ್ಕೆ ಸಲ್ಲಿಸಬೇಕು.
ಲೋಕಾಯುಕ್ತಕ್ಕೂ ಮಾಹಿತಿ ಸಲ್ಲಿಕೆ ಕಡ್ಡಾಯ:
ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22ರ ಪ್ರಕಾರ ಪ್ರತಿ ವರ್ಷ ಜೂನ್ 30ರೊಳಗೆ ಸಾರ್ವಜನಿಕ ಸೇವಕರು ಅಂದರೆ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು, ನಿಗಮ/ಮಂಡಳಿ/ಪ್ರಾಧಿಕಾರ, ಸಮಿತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಾವು ಮತ್ತು ತಮ್ಮ ಪತಿ ಅಥವಾ ಪತ್ನಿ ಮತ್ತು ಅವಲಂಬಿತರ ಹೆಸರಲ್ಲಿರುವ ಆಸ್ತಿಗಳ ಬಗ್ಗೆ ಮಾಹಿತಿ ಸಲ್ಲಿಸುವುದು ಕಡ್ಡಾಯ.
2008ರ ವಿಧಾನಸಭಾ ಚುನಾವಣೆ: ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಸಿದ್ದ ಆಸ್ತಿ ವಿವರ:
ಒಟ್ಟು ಆಸ್ತಿ ಮೌಲ್ಯ: 1 ಕೋಟಿ 1 ಲಕ್ಷದ 68 ಸಾವಿರ ರೂಪಾಯಿ.
ಒಟ್ಟು ಸಾಲ: 33 ಲಕ್ಷದ 25 ಸಾವಿರ ರೂಪಾಯಿ.
ನಗದು: ಮಾಡಾಳ್ ವಿರೂಪಾಕ್ಷಪ್ಪ ಬಳಿ: 10 ಲಕ್ಷ ರೂ. ಪತ್ನಿ ಲೀಲಾವತಿ ಹೆಸರಲ್ಲಿ 5 ಲಕ್ಷ ರೂಪಾಯಿ.
ಠೇವಣಿ: ಮಾಡಾಳ್ ವಿರೂಪಾಕ್ಷಪ್ಪ ಹೆಸರಲ್ಲಿ: 10 ಲಕ್ಷ ರೂ. ಪತ್ನಿ ಹೆಸರಲ್ಲಿ 5 ಲಕ್ಷ ರೂಪಾಯಿ.
ಉಳಿತಾಯ ಠೇವಣಿ: ಮಾಡಾಳ್ ವಿರೂಪಾಕ್ಷಪ್ಪ ದಂಪತಿ ಹೆಸರಲ್ಲಿ: 2 ಲಕ್ಷದ 10 ಸಾವಿರ ರೂ.
ಜೀವವಿಮೆ ಹೂಡಿಕೆಗಳು: ಮಾಡಾಳ್ ವಿರೂಪಾಕ್ಷಪ್ಪ ದಂಪತಿ ಹೆಸರಲ್ಲಿ: 5 ಲಕ್ಷದ 50 ಸಾವಿರ ರೂ.
ಆಭರಣ: ಮಾಡಾಳ್ ವಿರೂಪಾಕ್ಷಪ್ಪ ಬಳಿ: 15 ಲಕ್ಷದ 75 ಸಾವಿರ ರೂ.
ಸ್ಥಿರಾಸ್ತಿ: ಕೃಷಿ ಭೂಮಿ:
2.21 ಎಕರೆ+1.02 ಎಕರೆ+1.08 ಎಕರೆ + 1.24 ಎಕರೆ+1.22 ಎಕರೆ+1.03 ಎಕರೆ +36 ಗುಂಟೆ+35 ಗುಂಟೆ + 36 ಗುಂಟೆ:
ಮಾಡಾಳ್ ವಿರೂಪಾಕ್ಷಪ್ಪ ಹೆಸರಲ್ಲಿದ್ದ ಈ ಕೃಷಿ ಭೂಮಿಯ ಒಟ್ಟು ಮೌಲ್ಯ 50 ಲಕ್ಷ ರೂಪಾಯಿ.
ಕೃಷಿಯೇತರ ಭೂಮಿ:
ಪತ್ನಿ ಹೆಸರಲ್ಲಿ ಶಿವಮೊಗ್ಗದ ವಿವೇಕಾನಂದ ಲೇಔಟ್ನಲ್ಲಿ 1 ಸೈಟ್. ಈ ನಿವೇಶನದ ಮೌಲ್ಯ 5 ಲಕ್ಷ ರೂಪಾಯಿ.
2018ರ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ನೀಡಿದ್ದ ಆಸ್ತಿ ವಿವರ:
ಒಟ್ಟು ಆಸ್ತಿ ಮೌಲ್ಯ: 5 ಕೋಟಿ 78 ಲಕ್ಷ ರೂ.
ಸಾಲ: ಯಾವುದೇ ಸಾಲ ಇಲ್ಲ
ವಾರ್ಷಿಕ ಆದಾಯ: 2016-17ರ ಅವಧಿಯಲ್ಲಿ ಸಲ್ಲಿಕೆ ಮಾಡಲಾದ ಆದಾಯ ತೆರಿಗೆ ಮಾಹಿತಿ ಪ್ರಕಾರ
ಮಾಡಾಳ್ ವಿರೂಪಾಕ್ಷಪ್ಪ ಅವರ ವಾರ್ಷಿಕ ಆದಾಯ: 5 ಲಕ್ಷದ 40 ಸಾವಿರ
ಮಾಡಾಳ್ ವಿರೂಪಾಕ್ಷಪ್ಪ ಅವರ ಪತ್ನಿ ಲೀಲಾವತಿ ಅವರ ವಾರ್ಷಿಕ ಆದಾಯ: 64 ಲಕ್ಷದ 21 ಸಾವಿರ. ಇದರಲ್ಲಿ 63 ಲಕ್ಷ ರೂಪಾಯಿ ಕೃಷಿ ಆದಾಯ ಎಂದು ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದರು.
ನಗದು: ಮಾಡಾಳ್ ವಿರೂಪಾಕ್ಷಪ್ಪ ಬಳಿ: 3 ಲಕ್ಷದ 37 ಸಾವಿರ ರೂಪಾಯಿ. ಪತ್ನಿ ಹೆಸರಲ್ಲಿ 45 ಸಾವಿರ ರೂಪಾಯಿ.
ಠೇವಣಿ: ಮಾಡಾಳ್ ವಿರೂಪಾಕ್ಷಪ್ಪ ಹೆಸರಲ್ಲಿ: 10 ಲಕ್ಷ ರೂ. ಪತ್ನಿ ಹೆಸರಲ್ಲಿ 5 ಲಕ್ಷ ರೂಪಾಯಿ.
ಉಳಿತಾಯ ಠೇವಣಿ: ಮಾಡಾಳ್ ವಿರೂಪಾಕ್ಷಪ್ಪ ದಂಪತಿ ಹೆಸರಲ್ಲಿ: 23 ಲಕ್ಷದ 86 ಸಾವಿರ ರೂಪಾಯಿ.
ಬಾಂಡ್ಗಳ ಮೇಲೆ ಹೂಡಿಕೆ: 26 ಸಾವಿರ ರೂಪಾಯಿ.
ಸಾಲ ಅಥವಾ ಮುಂಗಡ ರೂಪದಲ್ಲಿ ಕೊಟ್ಟಿದ್ದು: – 3 ಕೋಟಿ 10 ಲಕ್ಷ ರೂಪಾಯಿ.
ತುಮೋಸ್ಕ್ ಚನ್ನಗಿರಿ: 2 ಲಕ್ಷದ 55 ಸಾವಿರ ರೂಪಾಯಿ
ಮಹಾಲಕ್ಷ್ಮೀ ಟ್ರೇಡರ್ಸ್: 2 ಕೋಟಿ 6 ಲಕ್ಷ ರೂಪಾಯಿ
ಕನಕಗಿರಿ ಮಲ್ಲಿಕಾರ್ಜುನ ಸ್ಟೀಲ್ಸ್: 28 ಲಕ್ಷ ರೂಪಾಯಿ
ಶ್ರೀ ಪ್ರಸನ್ನ ಟ್ರೇಡರ್ಸ್ ಭೀಮಸಮುದ್ರ: 19 ಲಕ್ಷ ರೂಪಾಯಿ
ಮಹಾರುದ್ರಸ್ವಾಮಿ ಸ್ಟೋನ್ ಕ್ರಷರ್: 35 ಲಕ್ಷ ರೂಪಾಯಿ
ಶ್ರೀಪ್ರಸನ್ನ ಟ್ರೇಡರ್ಸ್: 18 ಲಕ್ಷದ 54 ಸಾವಿರ ರೂಪಾಯಿ
ಕರ್ನಾಟಕ ಸರ್ಕಾರ: 45 ಸಾವಿರ ರೂಪಾಯಿ
ಆಭರಣ: ಮಾಡಾಳ್ ವಿರೂಪಾಕ್ಷಪ್ಪ ಬಳಿ: 80 ಲಕ್ಷದ 64 ಸಾವಿರ ರೂ.
ಸ್ಥಿರಾಸ್ತಿ:
ಕೃಷಿ ಭೂಮಿ: ಮಾಡಾಳ್ ವಿರೂಪಾಕ್ಷಪ್ಪ ಹೆಸರಲ್ಲಿ ಚನ್ನೇಶಪುರದಲ್ಲಿ 16 ಎಕರೆ 31 ಗುಂಟೆ ಕೃಷಿ ಭೂಮಿ- ಮೌಲ್ಯ 68 ಲಕ್ಷ ರೂಪಾಯಿ. – ಇದು ವಂಶಪಾರಂಪರ್ಯವಾಗಿ ಬಂದಿದ್ದು
ಪತ್ನಿ ಹೆಸರಲ್ಲಿ ಹೊಳೆಹೊನ್ನೂರು ಹೋಬಳಿಯ ಯಡೇಹಳ್ಳಿ ಗ್ರಾಮದಲ್ಲಿ 3 ಎಕರೆ 9 ಗುಂಟೆ- 2010ರಲ್ಲಿ ಖರೀದಿ – 22 ಲಕ್ಷದ 85 ಸಾವಿರ ರೂಪಾಯಿಗೆ ಖರೀದಿ.
ಕೃಷಿಯೇತರ ಭೂಮಿ:
ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ವಂಶಪಾರಂಪರ್ಯವಾಗಿ ಬಂದಿರುವ ಭೂಮಿ – 35 ಗುಂಟೆ – ಚನ್ನೇಶಪುರದಲ್ಲಿರುವ ಆಸ್ತಿ
ಬೆಂಗಳೂರಿನ ಭೂಪಸಂದ್ರದಲ್ಲಿ 371.81 ಚದರ ಅಡಿ ವಿಸ್ತೀರ್ಣದ ಭೂಮಿ – 2012ರಲ್ಲಿ ಖರೀದಿಸಿದ್ದು – ಈ ಎರಡೂ ಆಸ್ತಿಗಳ ಮೌಲ್ಯ: 35 ಲಕ್ಷ ರೂಪಾಯಿ.
ಮಾಡಾಳ್ ಕೊಟ್ಟ ವಿವರಣೆ:
ಲೋಕಾಯುಕ್ತ ದಾಳಿ ವೇಳೆ ಮಾಡಾಳ್ ವಿರೂಪಾಕ್ಷ ಮನೆಯಲ್ಲಿ 6 ಕೋಟಿ ರೂಪಾಯಿ ನಗದು ಸಿಕ್ಕಿರುವುದಾಗಿ ಸ್ವತಃ ಲೋಕಾಯುಕ್ತ ಪೊಲೀಸರೇ ತಮ್ಮ ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ತಮ್ಮ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದಲ್ಲಿ ಟೆಂಡರ್ ಮಂಜೂರಾತಿ ಹಗರಣದಲ್ಲಿ ಜಾಮೀನು ಲಭಿಸಿದ ಬಳಿಕ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೊಟ್ಟ ವಿವರಣೆ:
ಚನ್ನಗಿರಿ ಅಡಿಕೆ ಬೆಳೆಯುವ ನಾಡು. ಇಲ್ಲಿ ಸಾಮಾನ್ಯ ಅಡಿಕೆ ಬೆಳೆಗಾರನ ಮನೆಯಲ್ಲೂ 3 ರಿಂದ 4 ಕೋಟಿ ರೂಪಾಯಿ ಹಣ ಇರುತ್ತೆ. ನನ್ನದು 125 ಎಕರೆ ಅಡಿಕೆ ತೋಟ ಇದೆ. ನನಗೆ ಸಾಕಷ್ಟು ಕೃಷಿಯಿಂದ ಆದಾಯ ಇದೆ. ನಂದು ಅಂದ್ರೆ ನಂದು ಮತ್ತು ಮಕ್ಕಳಿದ್ದು ಸೇರಿ. ಅದೇ ರೀತಿ ಎರಡು ಕ್ರಷರ್ ಇದೆ. 1 ಅಡಿಕೆ ಮಂಡಿಯಿದೆ. 1 ಪಾನ್ ಮಸಾಲಾ ಫ್ಯಾಕ್ಟರಿ ಇದೆ. ನ್ಯಾಯಯುತವಾಗಿ ಸಾಕಷ್ಟು ಆದಾಯ ಬರುತ್ತದೆ. ನೂರಕ್ಕೆ ನೂರು ಹೇಳ್ತೀನಿ ಭ್ರಷ್ಟಾಚಾರದಿಂದ ಬಂದ ಹಣ ಅಲ್ಲ.