EXCLUSIVE NEWS BREAK: ಪಶ್ಚಿಮಘಟ್ಟ ಬೆಂಕಿ ನಂದಿಸಲು ಹೆಲಿಕಾಪ್ಟರ್​ಗಾಗಿ ವಾರದ ಹಿಂದೆಯೇ ಮನವಿ- ತಲೆಕೆಡಿಸಿಕೊಳ್ಳದ ಸಿಎಂ ಬೊಮ್ಮಾಯಿ ಸರ್ಕಾರ..!

ಪಶ್ಚಿಮ ಘಟ್ಟಗಳಲ್ಲಿ ಕಾಣಿಸಿಕೊಂಡಿರುವ ದಟ್ಟ ಬೆಂಕಿಯನ್ನು ನಂದಿಸಲು ಹೆಲಿಕಾಪ್ಟರ್​​​ಗಳನ್ನು ಪೂರೈಸುವಂತೆ ಅರಣ್ಯ ಇಲಾಖೆ ಮಾಡಿಕೊಂಡಿರುವ ಮನವಿಗೆ ಕರ್ನಾಟಕ ಸರ್ಕಾರ ಇನ್ನೂ ಸ್ಪಂದಿಸಿಲ್ಲ.

ವಿಚಿತ್ರ ಎಂದರೆ ಸ್ವತಃ ಮುಖ್ಯಮಂತ್ರಿಗಳೇ ಅರಣ್ಯ ಇಲಾಖೆ ಸಚಿವರಾಗಿದ್ದರೂ ಕಾಡ್ಗಿಚ್ಚು ನಂದಿಸಲು ಹೆಲಿಕಾಪ್ಟರ್​ ಬಳಸುವ ಪ್ರಯತ್ನಕ್ಕೆ ಮುಂದಾಗಿಲ್ಲ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ದಟ್ಟ ಬೆಂಕಿ ಕಾಣಿಸಿಕೊಂಡು ಅಪಾರ ಅರಣ್ಯ ನಾಶವಾಗಿದೆ.

ಅರಣ್ಯ ರಕ್ಷಕ ಹುತಾತ್ಮ:

ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಬೆಂಕಿ ತಗುಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕಾಡಮನೆ ಅರಣ್ಯ ಪ್ರದೇಶದಲ್ಲಿ ಅರಣ್ಯ ರಕ್ಷಕ ಸುಂದರೇಶ್​ ಅವರು ಪ್ರಾಣ ಕಳೆದುಕೊಂಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಶಿಬಾಜೆ, ಭಂಡಿಹೊಳೆ, ಶಿಂಗಾನೆ ಗುಂಡಿಯಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದಿದ್ದು, ಆಕಾಶದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ.

ವಾರದ ಹಿಂದೆಯೇ ಮನವಿ:

ಬೆಂಕಿ ನಂದಿಸಲು ಹೆಲಿಕಾಪ್ಟರ್​ಗಳ ಬಳಕೆಗೆ ವಾರದ ಹಿಂದೆಯೇ ಅರಣ್ಯ ಅಧಿಕಾರಿಗಳು ತಮ್ಮ ಹಿರಿಯ ಅರಣ್ಯಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಇಷ್ಟೊಂದು ಪ್ರಮಾಣದಲ್ಲಿ ಕಾಡ್ಗಿಚ್ಚು ಹಬ್ಬುತ್ತಿದ್ದರೂ ಸರ್ಕಾರ ಇನ್ನೂ ಹೆಲಿಕಾಪ್ಟರ್​ ಮೂಲಕ ಬೆಂಕಿ ನಂದಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ.

ಅರಣ್ಯ ಸಿಬ್ಬಂದಿಗೆ ಸವಾಲು:

ಅರಣ್ಯಾಧಿಕಾರಿಗಳ ಮಾಹಿತಿ ಪ್ರಕಾರ 500 ಎಕರೆಯಷ್ಟು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಹಬ್ಬಿದೆ. ಉಪ್ಪಿನಗಂಡಿಯ ಶಿಬಾಜೆ ಭ೦ಡಿಹೊಳೆ ಶಿ೦ಗಾನೆ ಗುಂಡಿಯಲ್ಲಿ ಹಬ್ಬಿರುವ ಕಾಡ್ಗಿಚ್ಚುನ್ನು ನಂದಿಸಲು 20ಕ್ಕೂ ಅಧಿಕ ಅರಣ್ಯ ರಕ್ಷಕರು ನಿರತರಾಗಿದ್ದಾರೆ.

ಆದರೆ ಕಾಡಲ್ಲಿ ಹಬ್ಬಿರುವ ಬೆಂಕಿಯ ತೀವ್ರತೆ ಅಧಿಕವಾಗಿರುವ ಕಾರಣ ಬೆಂಕಿ ನಂದಿಸುವುದು ಅತ್ಯಂತ ಕಷ್ಟಕರವಾಗಿದೆ.

ಜೊತೆಗೆ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆಯ ವೇಳೆಯಷ್ಟೇ ಬೆಂಕಿ ನಂದಿಸಬಹುದು. ಆ ಬಳಿಕ ಬಿಸಿಲಿನ ತಾಪ ಏರಿಕೆ ಆಗುವುದರಿಂದ ಮತ್ತು ಕಾಡಲ್ಲಿ ಗಾಳಿಯ ವೇಗದ ತೀವ್ರತೆ ಹೆಚ್ಚಾಗುವ ಕಾರಣ ಬೆಂಕಿ ನಂದಿಸುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ.

ಜೊತೆಗೆ ದಟ್ಟ ಕಾಡಿನ ಭಾಗದಲ್ಲಿ ಆನೆಗಳ ಕಾರಿಡಾರ್​ ಇರುವುದರಿಂದ ಅರಣ್ಯ ಸಿಬ್ಬಂದಿಗೂ ಅದೂ ಕೂಡಾ ಸವಾಲು.

ಗೋವಾದಲ್ಲಿ ಹೆಲಿಕಾಪ್ಟರ್​ ಬಳಕೆ:

ಗೋವಾದಲ್ಲಿರುವ ಮಹದಾಯಿ ಸಂರಕ್ಷಿತರಾಣ್ಯದಲ್ಲಿ ಬಿದ್ದಿರುವ ಬೆಂಕಿಯನ್ನು ನಂದಿಸಲು ಕಳೆದ ಎರಡ್ಮೂರು ದಿನಗಳಿಂದ ಗೋವಾ ಸರ್ಕಾರ ಭಾರತೀಯ ನೌಕಾ ಸೇನೆಯ ನೆರವು ಪಡೆದಿದೆ. ನೌಕಾಸೇನೆಯ ಹೆಲಿಕಾಪ್ಟರ್​ಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತವಾಗಿವೆ.

ಕರ್ನಾಟಕದಲ್ಲಿ 28 ಸಂಸದರು, ಗೋವಾದಲ್ಲಿ ಇಬ್ಬರಷ್ಟೇ:

ಈ ನಡುವೆ ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಹಬ್ಬಿರುವ ಕಾಡುಗಳನ್ನು ಬೆಂಕಿಯಿಂದ ರಕ್ಷಿಸಲು ಸೇನಾ ಹೆಲಿಕಾಪ್ಟರ್​ಗಳನ್ನು ಇದುವರೆಗೆ ಬಳಸಲಾಗಿಲ್ಲ.

ಕರ್ನಾಟಕದಲ್ಲಿ 28 ಮಂದಿ ಸಂಸದರು, ಅವರಲ್ಲಿ 25 ಮಂದಿ ಬಿಜೆಪಿಯವರೇ. ಆದರೆ ಗೋವಾದಲ್ಲಿರುವುದು ಕೇವಲ ಇಬ್ಬರು ಸಂಸದರಷ್ಟೇ. ಆದರೆ ಚಿಕ್ಕ ರಾಜ್ಯ ಗೋವಾ ರಾಜಕಾರಣಿಗಳಿಗಿರುವ ಪ್ರಭಾವ ಕರ್ನಾಟಕದ ರಾಜಕಾರಣಿಗಳಿಗಿಲ್ವಾ ಎಂಬ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here