ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ – DCMಗೆ ಟಕ್ಕರ್​ ಕೊಟ್ಟು ಜಾಹೀರಾತು – ಏನಿದೆ ಅದರಲ್ಲಿ..?

ಝೀ ನ್ಯೂಸ್​ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯನ್ನು ಪ್ರಸಾರ ಮಾಡಿದ ಬೆನ್ನಲ್ಲೇ ಪ್ರಮುಖ ದಿನ ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ಏಕನಾಥ್​ ಶಿಂಧೆ ನೇತೃತ್ವದ ಶಿವಸೇನೆ ಬಣ ನೀಡಿರುವ ಜಾಹೀರಾತು ಈಗ ರಾಜಕೀಯ ಸಂಚಲನ ಸೃಷ್ಟಿಸಿದೆ.

ಏನಿದೆ ಜಾಹೀರಾತಿನಲ್ಲಿ..?

ಭಾರತಕ್ಕೆ ಮೋದಿ, ಮಹಾರಾಷ್ಟ್ರಕ್ಕೆ ಶಿಂಧೆ. ಎಲ್ಲರೂ ಪ್ರೀತಿಸುವ ಕನಸಿನ ತಂಡ. 

ಗೌರವ್ವಾನಿತ ಪ್ರಧಾಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಏಕನಾಥ್​ ಶಿಂಧೆ ಅವರ ಅದ್ಭುತ ಟೀಂ ವರ್ಕ್​ ಇತ್ತೀಚಿನ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಮಹಾರಾಷ್ಟ್ರದಲ್ಲಿ ಅತ್ಯುನ್ನತ ಸ್ಥಾನ ಗಳಿಸಿದೆ.

ಚುನಾವಣಾ ಸಮೀಕ್ಷೆಗಳ ಪ್ರಕಾರ ಶೇಕಡಾ 30.2ರಷ್ಟು ಮಹಾರಾಷ್ಟ್ರದ ಜನತೆ ಬಿಜೆಪಿಯನ್ನೂ ಶೇಕಡಾ 16.2ರಷ್ಟು ಮಹಾರಾಷ್ಟ್ರದ ಜನತೆ ಏಕ್​ನಾಥ್​ ಶಿಂಧೆ ನೇತೃತ್ವದ ಶಿವಸೇನೆಯನ್ನು ಬಯಸುತ್ತಿದ್ದಾರೆ.

ಈ ಅಂಕಿಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಒಟ್ಟು ಶೇಕಡಾ 46.4ರಷ್ಟು ಮಂದಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿ ಮತ್ತು ಏಕ್​ನಾಥ್​ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟದ ಮೇಲೆ ವಿಶ್ವಾಸವಿಟ್ಟಿದ್ದಾರೆ.

ಅದಕ್ಕಿಂತಲೂ ಹೆಚ್ಚಾಗಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮಾಡಲಾದ ಸಮೀಕ್ಷೆಯಲ್ಲಿ ಶೇಕಡಾ 26.1ರಷ್ಟು ಮಹಾರಾಷ್ಟ್ರದ ಜನತೆ ಏಕ್​ನಾಥ್​ ಶಿಂಧೆ ಅವರನ್ನೂ ಮತ್ತು ಶೇಕಡಾ 23.2ರಷ್ಟು ಮಂದಿ ದೇವೇಂದ್ರ ಫಡ್ನಾವೀಸ್​ ಅವರನ್ನು ಮುಂದಿನ ಮುಖ್ಯಮಂತ್ರಿಯಾಗಿ ಕಾಣಲು ಬಯಸಿದ್ದಾರೆ ಸಮೀಕ್ಷೆ ಹೇಳಿದೆ. 

ಈ ಮೂಲಕ ಶೇಕಡಾ 49.3ರಷ್ಟು ಮಹಾರಾಷ್ಟ್ರದ ಜನತೆ ರಾಜ್ಯದಲ್ಲಿ ನಾಯಕತ್ವಕ್ಕಾಗಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟವನ್ನು ಬಯಸಿದ್ದಾರೆ 

ಎಂದು ಶಿವಸೇನೆ ಜಾಹೀರಾತು ನೀಡಿದೆ.

ಮೋದಿ ಮತ್ತು ಶಿಂಧೆ ಭಾವಚಿತ್ರವಷ್ಟೇ ಬಳಕೆ:

ಈ ಜಾಹೀರಾತಿಯಲ್ಲಿ ಪ್ರಧಾನಿ ಮೋದಿ ಮತ್ತು ಸಿಎಂ ಶಿಂಧೆ ಒಟ್ಟಿಗಿರುವ ಫೋಟೋವಷ್ಟೇ ಬಳಕೆಯಾಗಿದೆ.

ಶಿವಸೇನೆಯಿಂದ ಸಂದೇಶ:

ಈ ಜಾಹೀರಾತಿನ ಮೂಲಕ ಬಿಜೆಪಿಗೆ ಶಿವಸೇನೆ ಸಂದೇಶ ರವಾನಿಸಿದೆ. ಮತ್ತೆ ಏಕ್​ನಾಥ್​ ಶಿಂಧೆ ಅವರೇ ಮುಖ್ಯಮಂತ್ರಿ ಆಗಬೇಕು, ಶಿಂಧೆ ಅವರೇ ಈಗಿನ ಸರ್ಕಾರದ ಅವಧಿ ಮುಗಿಯುವವರೆಗೆ ಸಿಎಂ ಆಗಿರಬೇಕು, ಮುಂದಿನ ಚುನಾವಣೆಯ ಬಳಿಕವೂ ಶಿವಸೇನೆಗೆ ಸಿಎಂ ಸ್ಥಾನ ಬಿಟ್ಟುಕೊಟ್ಟು ಬಿಜೆಪಿ ಕಿರಿಯ ಪಾಲುದಾರನಂತೆ ಇರಬೇಕು ಎನ್ನುವುದು ಸಂದೇಶ.

ಬಿಜೆಪಿ ಹೈಕಮಾಂಡ್​ ಕೃಪಾಕಟಾಕ್ಷ..?

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್​ ಶಾ ಅವರ ಕೃಪಾರ್ಶೀವಾದವಿಲ್ಲದೇ ಈ ಜಾಹೀರಾತನ್ನು ಶಿವಸೇನೆ ಹೇಗೆ ಕೊಡಲು ಸಾಧ್ಯ..? ಹಾಗಾದರೆ ಮಹಾರಾಷ್ಟ್ರ ಬಿಜೆಪಿಯಲ್ಲಿ ಅತೀ ಶೀಘ್ರದಲ್ಲೇ ದೊಡ್ಟ ಮಟ್ಟದ ಬದಲಾವಣೆಗಳಾಗಲಿದ್ಯಾ..? ಎಂಬ ಕುತೂಹಲ ಮಹಾರಾಷ್ಟ್ರ ರಾಜಕೀಯದಲ್ಲಿ ಗರಿಗೆದರಿದೆ.