BIG BREAKING: ಟ್ವಿಟ್ಟರ್​ ಬಂದ್ ಮಾಡ್ತೀವಿ.. – ರೈತ ಹೋರಾಟ ವೇಳೆ ಕೇಂದ್ರದಿಂದ ಬೆದರಿಕೆ – ಜಾಕ್ ಡೋರ್ಸಿ

ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ 2020-21ರಲ್ಲಿ ಅನ್ನದಾತರು ನಡೆಸಿದ್ದ ಮಹಾ ಹೋರಾಟದ ಸಂದರ್ಭದಲ್ಲಿ ಭಾರತ ಸರ್ಕಾರ ತಮ್ಮ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆದಿತ್ತು ಎಂದು ಟ್ವಿಟ್ಟರ್​ ಸಂಸ್ಥೆಯ ಮಾಜಿ ಸಿಇಓ ಜಾಕ್ ಡೋರ್ಸಿ ಗಂಭೀರ ಆರೋಪ ಮಾಡಿದ್ದಾರೆ.

ರೈತರ ಹೋರಾಟದ ಪರವಿರುವ ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳಿ.. ಸರ್ಕಾರವನ್ನು ವಿಮರ್ಶೆ ಮಾಡುತ್ತಿರುವ ಹಲವು ಪತ್ರಕರ್ತರ ಖಾತೆಗಳನ್ನು ಬಂದ್ ಮಾಡಿ.. ಇಲ್ಲವೇ ಭಾರತದಲ್ಲಿ ಟ್ವಿಟ್ಟರ್ ಜಾಲತಾಣವನ್ನೇ ಬಂದ್ ಮಾಡಿಸಿಬಿಡುತ್ತೇವೆ. ಅಷ್ಟೇ ಅಲ್ಲ, ನಿಮ್ಮ ಸಂಸ್ಥೆಯ ಉದ್ಯೋಗಿಗಳ ಮನೆಗಳ ಮೇಲೆ ರೇಡ್ ಮಾಡಿಸುತ್ತೇವೆ..

ನೀವು ನಮ್ಮ ಮಾತು ಕೇಳಲೇ ಬೇಕು.. ನಾವು ಸೂಚಿಸಿದ ಟ್ವಿಟ್ಟರ್ ಖಾತೆಗಳ ಮೇಲೆ ಕ್ರಮ ತೆಗೆದುಕೊಳ್ಳಲೇಬೇಕು.. ಇಲ್ಲ ಎಂದಲ್ಲಿ ನಿಮ್ಮ ಕಚೇರಿ ಬಾಗಿಲನ್ನು ಬಂದ್ ಮಾಡಿಕೊಂಡು ಹೋಗಿ.. ಇದು ಭಾರತ.. ಇದು ಪ್ರಜಾಪ್ರಭುತ್ವ ದೇಶ..

ಜಾಕ್ ಡೋರ್ಸಿ, ಟ್ವಿಟ್ಟರ್ ಸಂಸ್ಥೆ ಮಾಜಿ ಸಿಇಓ

ಹೀಗೆಂದು ಬ್ರೇಕಿಂಗ್ ಪಾಯಿಂಟ್ಸ್ ಹೆಸರಿನ ಯೂಟ್ಯೂಬ್​ ಚಾನಲ್​ಗೆ ಸಂದರ್ಶನ ನೀಡುವ ಸಂದರ್ಭದಲ್ಲಿ ಟ್ವಿಟ್ಟರ್ ಸಂಸ್ಥೆ ಮಾಜಿ ಸಿಇಓ ಜಾಕ್ ಡೋರ್ಸಿ ಸಂಚಲನಾತ್ಮಕ ಆರೋಪಗಳನ್ನು ಮಾಡಿದ್ದಾರೆ. ಮಾಧ್ಯಮಗಳ ಮೇಲೆ ಕೇಂದ್ರ ಸರ್ಕಾರ ಸವಾರಿ ಮಾಡುತ್ತಿದೆ.. ನಿಯಂತ್ರಣದಲ್ಲಿ ಇಟ್ಟುಕೊಳ್ಳುತ್ತಿದೆ ಎಂಬ ವಿಪಕ್ಷಗಳ ಆರೋಪಗಳಿಗೆ ಜಾಕ್ ಡೋರ್ಸಿ ಮಾತು ಪುಷ್ಠಿ ಕೊಡುತ್ತಿದೆ.

ಇದೀಗ ಜಾಕ್ ಡೋರ್ಸಿ ಮಾತುಗಳನ್ನು ಪ್ರಮುಖ ವಿರೋಧಪಕ್ಷ ಕಾಂಗ್ರೆಸ್​ ಅಸ್ತ್ರ ಮಾಡಿಕೊಂಡಿದೆ. ಜಾಕ್ ಡೋರ್ಸಿ ಸಂದರ್ಶನದ ತುಣಕುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಏನ್ ಹೇಳುತ್ತೆ ಎಂದು ಸವಾಲ್ ಹಾಕಿದ್ದಾರೆ.

ಆದರೆ, ಜಾಕ್ ಡೋರ್ಸಿಯ ಸ್ಫೋಟಕ ಆರೋಪಗಳನ್ನು ಎಂದಿನಂತೆ ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಡೋರ್ಸಿ ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿ ಆರೋಪ ಮಾಡಿದ್ದಾರೆ.

ಟ್ವಿಟ್ಟರ್ ಇತಿಹಾಸದಿಂದ ಒಂದು ಅನುಮಾನಾಸ್ಪದ ಕಾಲಮಾನವನ್ನು ತೊಲಗಿಸುವ ಉದ್ದೇಶದಿಂದ ಜಾಕ್ ಡೋರ್ಸಿ ಹೀಗೆಲ್ಲಾ ಹೇಳಿರಬಹುದು.

ಜಾಕ್ ಡೋರ್ಸಿ ಸಿಇಓ ಆಗಿದ್ದಂತಹ ಸಂದರ್ಭದಲ್ಲಿ ಟ್ವಿಟ್ಟರ್ ಸಂಸ್ಥೆ ನಿರಂತರವಾಗಿ ದೇಶದ ಕಾನೂನುಗಳನ್ನು ಉಲ್ಲಂಘಿಸುತ್ತಿತ್ತು.

ಅನ್ನದಾತರ ಪ್ರತಿಭಟನೆ ಸಂದರ್ಭದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಸಹಜವಾಗಿಯೇ ಕೇಂದ್ರ ಸರ್ಕಾರ, ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣದಿಂದ ತೊಲಗಿಸಿ ಎಂದು ಸೂಚನೆ ನೀಡಿತ್ತು.

ಜಾಕ್ ಡೋರ್ಸಿ ಅವಧಿಯಲ್ಲಿ ಟ್ವಿಟ್ಟರ್​ ಪಕ್ಷಪಾತದಿಂದ ಕೂಡಿತ್ತು. ಸುಳ್ಳು ಸುದ್ದಿಗಳನ್ನು ತೆಗೆಯಿರಿ ಎಂದಿದ್ದೇ ಅವರಿಗೆ ಸಮಸ್ಯೆ ಆಯಿತು. ಭಾರತದ ವಿಚಾರ ಬಂದಾಗ ಮಾತ್ರ ಏಕೆ ಹೀಗೆ.. ಅಮೆರಿಕಾದಲ್ಲಿಯೂ ಇಂಥಾದ್ದೇ ಸನ್ನಿವೇಶಗಳು ಉದ್ಭವಿಸಿದ್ದಾಗ ಟ್ವಿಟ್ಟರ್ ಬೇರೆಯದೇ ತೆರನಾಗಿ ವರ್ತಿಸಿತ್ತು

ಎಂದು ರಾಜೀವ್ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ. 

ಟ್ವಿಟ್ಟರ್ ಜಾಲತಾಣ ಸುಳ್ಳುಸುದ್ದಿಗಳ ವೆಪನ್ ಆಗಿಬಿಟ್ಟಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಆರೋಪ ಮಾಡಿದ್ದಾರೆ.