ಮದ್ರಾಸ್ ರಬ್ಬರ್ ಫ್ಯಾಕ್ಟರಿ.. ಕ್ರಿಯೇಟ್ ಮಾಡಿತು ಹಿಸ್ಟರಿ.. ಎಂಆರ್‌ಎಫ್ ಸಕ್ಸಸ್ ಸ್ಟೋರಿ..

ಮದ್ರಾಸ್ ರಬ್ಬರ್ ಫ್ಯಾಕ್ಟರಿ ಎಂಬ ಕಂಪನಿ ಬಗ್ಗೆ ಕೇಳಿದ್ದೀರಾ? ಯಾವಾಗ್ಲೂ ಕೇಳಿದಂತೆ ಇಲ್ಲ ಅಲ್ವಾ? ಮದ್ರಾಸ್  ರಬ್ಬರ್ ಫ್ಯಾಕ್ಟರಿಯ ಸಂಕ್ಷಿಪ್ತ ನಾಮ ಎಂಆರ್‌ಎಫ್..  ಇದು ಟೈರ್ ಕಂಪನಿ.. ನಾವು ಈಗ ಹೇಳ್ತಾ ಇರೋದು ಇದರ ಬಗ್ಗೆಯೇ..

ಈ ಕಂಪನಿ ಷೇರು ಮೌಲ್ಯ ಮಂಗಳವಾರ 1ಲಕ್ಷ ಮಾರ್ಕ್ ದಾಟಿ ಇತಿಹಾಸ ಸೃಷ್ಟಿಸಿದೆ. ಭಾರತದ ಸ್ಟಾಕ್ ಮಾರ್ಕೆಟ್ ಇತಿಹಾಸದಲ್ಲಿ ಈ ಮೈಲುಗಲ್ಲು ತಲುಪಿದ ಮೊದಲ ಕಂಪನಿ ಎಂಬ ಗರಿಮೆಗೆ ಎಂಆರ್‌ಎಫ್ ಪಾತ್ರವಾಯಿತು.

ಒಂದು ಷೇರು ಮೌಲ್ಯ ಆ ಕಂಪನಿಯ ಕಾರ್ಯಚಟುವಟಿಕೆ, ಹೆಸರು-ಪ್ರತಿಷ್ಠೆ, ಭವಿಷ್ಯದ ಯೋಜನೆ, ಆಡಳಿತ ಮಂಡಳಿತ ಮೇಲೆ ಆಧಾರಿತವಾಗಿರುತ್ತದೆ. ಈಗ ಎಂಆರ್‌ಎಫ್ ಸ್ಟಾಕ್ ಮೌಲ್ಯ ಈ ಮಟ್ಟಕ್ಕೆ ಏರಿದೆ ಎಂದರೇ ಈ ಎಲ್ಲಾ ಅಂಶಗಳು ಎಂಆರ್​ಎಫ್​ ಕಂಪನಿಯಲ್ಲಿದೆ ಎಂದರ್ಥ

ಎಂಆರ್‌ಎಫ್ ಹೆಸರು ಭಾರತೀಯರಿಗೆಲ್ಲಾ ಚಿರಪರಿಚಿತ. ಈ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಇದೇ ಅಂಶವೇ ಎಂಆರ್‌ಎಫ್ ಕಂಪನಿಯ ಯಶಸ್ಸನ್ನು ಹೇಳುತ್ತದೆ.

ಬಲೂನ್ ತಯಾರಿಯೊಂದಿಗೆ ಶುರುವಾದ ಕಂಪನಿ, ವಿದೇಶಿ ಕಂಪನಿಗಳ ಪೈಪೋಟಿ ತಡೆಯಲಾರದೇ ಪಾತಳಕ್ಕೆ ಕುಸಿದು.. ನಂತರ ಅಲ್ಲಿಂದ ಚೇತರಿಸಿಕೊಂಡು ಗಟ್ಟಿ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ಹೇಗೆ ಯಶಸ್ಸು ಸಾಧಿಸಿತು ಎಂಬುದನ್ನು ನಿಮ್ಮ ಪ್ರತಿಕ್ಷಣ ನ್ಯೂಸ್​ ವಿವರಿಸಲಿದೆ.

ಎಂಆರ್‌ಎಫ್ ಕಂಪನಿಯನ್ನು ಕೆಎಂ ಮಮ್ಮನ್ ಮಾಪಿಳ್ಳೈ ಸ್ಥಾಪಿಸಿದರು.

ಮಮ್ಮನ್ ಮಾಪಿಳ್ಳೈ ತಂದೆ ಬ್ಯಾಂಕ್, ನ್ಯೂಸ್‌ಪೇಪರ್ ಹೊಂದಿದ್ದರು. ವಿವಿಧ ಕಾರಣಗಳಿಂದಾಗಿ ಆಗಿನ ಟ್ರಾವೆಂಕೋರ್ ಸಂಸ್ಥಾನ ಅವರ ಆಸ್ತಿಗಳನ್ನು ಸ್ವಾಧೀನ ಮಾಡಿಕೊಂಡಿತ್ತು.  2 ವರ್ಷ ಜೈಲಿನಲ್ಲಿ ಇಟ್ಟಿತ್ತು.

ಅಷ್ಟೊತ್ತಿಗೆ ಪದವಿ ಪೂರೈಸಿದ್ದ ಮಮ್ಮನ್ ಮಾಪಿಳ್ಳೈ ಜೀವನೋಪಾಯಕ್ಕಾಗಿ ಬಲೂನ್ ತಾಯಿಸಿ, ಅವುಗಳನ್ನು ಮದ್ರಾಸ್ ಬೀದಿಗಳಲ್ಲಿ ಪತ್ನಿ ಜೊತೆ ಮಾರಾಟ ಮಾಡುತ್ತಿದ್ದರು.

1949ರಲ್ಲಿ ಸ್ವಲ್ಪ ಹಣ ಕೂಡಿಟ್ಟ ಹಣ ಮಮ್ಮನ್ ಮಾಪಿಳ್ಳೈ ಲ್ಯಾಟೆಕ್ಸ್‌ನಿಂದ ತಯಾರಿಸುವ ಆಟಿಕೆ, ಕೊಡೆಗಳ ತಯಾರಿಯನ್ನು ಆರಂಭಿಸಿ, ಅದರಲ್ಲಿ ಯಶಸ್ಸು ಕಂಡರು.

ಅದೇ ಸಮಯದಲ್ಲಿ ಟೈರ್‌ಗಳ ಟ್ರೆಡ್ಡಿಂಗ್‌ನಲ್ಲಿ ಬಳಸುವ ರಬ್ಬರ್ ಅನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂಬ ವಿಚಾರ ತಿಳಿದು, ತಾವೇ ಏಕೆ ಉತ್ಪಾದನೆ ಮಾಡಬಾರದು ಎಂದು ಯೋಚಿಸಿದರು.

1952ರಲ್ಲಿ ಟ್ರೆಡ್ ರಬ್ಬರ್ ತಯಾರಿ ಶುರು ಮಾಡಿದರು. ಕ್ವಾಲಿಟಿ ಚನ್ನಾಗಿದ್ದ ಕಾರಣ ಅತೀ ಕಡಿಮೆ ಸಮಯದಲ್ಲಿಯೇ ಶೇಕಡಾ 50ರಷ್ಟು ಮಾರ್ಕೆಟ್ ಪಾಲನ್ನು ಸ್ವಂತ ಮಾಡಿಕೊಂಡರು.

ಆರಂಭದಲ್ಲಿಯೇ ಎಂಆರ್‌ಎಫ್‌ಗೆ ಹೊಡೆತ:

ಇದೇ ಉತ್ಸಾಹದಲ್ಲಿ 1961ರಲ್ಲಿ ಟೈರ್‌ಗಳ ತಯಾರಿಯನ್ನು ಕೂಡ ಶುರು ಮಾಡಿದರು. ಆರಂಭದಲ್ಲಿ ಅಮೆರಿಕಾಗೆ ಸೇರಿದ ಮ್ಯಾನ್‌ಫೀಲ್ಡ್ ಟೈರ್ ಅಂಡ್ ರಬ್ಬರ್ ಕಂಪನಿ ಜೊತೆ ಕೈ ಜೋಡಿಸಿದರು.

ಆಗಿನ ತಮಿಳುನಾಡು ಸಿಎಂ ಕಾಮರಾಜ್ ನಾಡಾರ್ ಮೊದಲ ಟೈರ್ ಬಿಡುಗಡೆ ಮಾಡಿದ್ದರು. ಅದೇ ವರ್ಷ ಈ ಕಂಪನಿ ಮದ್ರಾಸ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಲಿಸ್ಟಿಂಗ್ ಆಯಿತು.

ಆದರೆ, ಆರಂಭದಲ್ಲಿಯೇ ಎಂಆರ್‌ಎಫ್‌ಗೆ ಹೊಡೆತ ಬಿತ್ತು. ಮ್ಯಾನ್‌ಫೀಲ್ಡ್ ಉತ್ಪಾದನೆ ಮಾಡುವ ಟೈರ್ ಭಾರತದ ರೋಡಲ್ಲಿ ಉಪಯೋಗಕ್ಕೆ ಬರಲಿಲ್ಲ.

ಇದರೊಂದಿಗೆ ಭಾರತೀಯ ಕಂಪನಿಗಳು ಗುಣಮಟ್ಟದ ಟೈರ್ ಉತ್ಪಾದಿಸಲ್ಲ ಎಂದು ವಿದೇಶಿ ಕಂಪನಿಗಳು ಸುಳ್ಳುಪ್ರಚಾರ ಶುರು ಮಾಡಿಕೊಂಡವು.

ಕೇಂದ್ರ ಸರ್ಕಾರದಿಂದ ಸಿಕ್ಕಿತ್ತು ಸಪೋರ್ಟ್

ಆಗ ಭಾರತದ ಮಾರುಕಟ್ಟೆಯಲ್ಲಿ ವಿದೇಶಿ ಕಂಪನಿಗಳ ಅಧಿಪತ್ಯವಿತ್ತು. ಇದರಲ್ಲಿ ಒಂದು ಕಂಪನಿಗೆ ಕೇಂದ್ರ ಸರ್ಕಾರ ಆರ್ಡರ್​ಗಳನ್ನು ನೀಡುತ್ತಿತ್ತು.

ಆದರೆ, ಬಹಳಷ್ಟು ಕಾಲ ಹೀಗೆ ವಿದೇಶಿ ಕಂಪನಿ ಮೇಲೆ ಅವಲಂಬನೆ ಸರಿಯಲ್ಲ ಎಂಬುದನ್ನು ಗ್ರಹಿಸಿತು. ಯುದ್ಧದಂತಹ ಸಂದರ್ಭದಲ್ಲಿ ಕೈಕೊಟ್ಟರೇ ಹೇಗೆ ಎಂದು ಯೋಚಿಸಿತು.

ಮೇಲಾಗಿ ದಿನದಿಂದ ದಿನಕ್ಕೆ ಟೈರ್ ದರ ಹೆಚ್ಚಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿತು.

ಹೀಗಾಗಿ, ಕೇಂದ್ರ ಸರ್ಕಾರ ಹಂತ ಹಂತವಾಗಿ ಎಂಆರ್​ಎಫ್​ ಕಂಪನಿಗೂ ಆರ್ಡರ್ ಕೊಡಲು ಶುರು ಮಾಡಿತು.

ಎಂಆರ್​ಎಫ್​ಗೆ ಮಸಲ್ ಮ್ಯಾನ್​ ಬಲ:

1963ರಲ್ಲಿ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಎಂಆರ್​ಎಫ್  ಫ್ಯಾಕ್ಟರಿಗೆ ಬುನಾದಿ ಹಾಕಿದರು. ವಿದೇಶಿ ಕಂಪನಿಗಳ ಜೊತೆ ಸರ್ಕಾರಿ ಟೆಂಡರ್​ಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದರು.

ಹೀಗೆ ಆರಂಭಿಕ ಅಡೆತಡೆಗಳನ್ನು ನಿವಾರಿಸಿಕೊಂಡ ಕಂಪನಿ, ಕ್ರಮೇಣ ಭಾರತದಲ್ಲಿನ ರಿಟೈಲ್ ಕಸ್ಟಮರ್​​​ಗಳಿಗೆ ಹತ್ತಿರವಾಗಲು ವ್ಯೂಹಗಳನ್ನು ರಚಿಸಿತು.

ಇದಕ್ಕಾಗಿ ಭಾರತದ ಜಾಹೀರಾತು ಪಿತಾಮಹ ಎಂದು ಕರೆಯಲ್ಪಡುವ ಅಲಿಕ್ ಪದಮ್ಸಿಯನ್ನು ನೇಮಕ ಮಾಡಿಕೊಂಡಿತು.

ಅವರು ನೇರವಾಗಿ ರಸ್ತೆಗೆ ಇಳಿದು ಟ್ರಕ್ ಚಾಲಕರನ್ನು ಭೇಟಿ ಮಾಡಿದರು. ಅವರು ಎಂತಹ ಟೈರ್ ಬಯಸುತ್ತಾರೆ ಎಂಬುದನ್ನು ತಿಳಿದುಕೊಂಡರು. ಅವರೆಲ್ಲ ಶಕ್ತಿಯುತವಾದ ದೃಢವಾದ ಟೈರ್ ಬೇಕೆಂದು ತಿಳಿಸಿದ್ದರು.

ಇದಕ್ಕೆ ಅನುಗುಣವಾಗಿ ಟೈರ್​ಗಳನ್ನು ಪ್ರಮೋಟ್​ ಮಾಡುವ ಸಲುವಾಗಿ ಎಂಆರ್​ಎಫ್ ಮಸಲ್ ಮ್ಯಾನ್ (ಟೈರ್ ಎತ್ತಿ ಹಿಡಿದಿರುವ ದಷ್ಟಪುಷ್ಟ ವ್ಯಕ್ತಿ) ಅನ್ನು ಜಾಹೀರಾತಿಗಾಗಿ ಡಿಸೈನ್  ಬಳಸಿಕೊಂಡರು. ನಂತರ ಇದು ಟಿವಿ ಆಡ್ಸ್ ಗಳಲ್ಲಿ ಭಾರೀ ಜನಪ್ರಿಯತೆ ಪಡೆಯಿತು.

ವಿದೇಶಿ ಕಂಪನಿಗಳ ಜೊತೆ ಪೈಪೋಟಿ: 1967ರಲ್ಲಿ ಎಂಆರ್​ಎಫ್​ ಲೆಬನಾನ್​ನ ಬಿರುಟ್​ನಲ್ಲಿ ಮೊದಲ ವಿದೇಶಿ ಕಚೇರಿ ಶುರು ಮಾಡಿತು. ನಂತರ ಅಮೆರಿಕಾಗೂ ಟೈರ್ ರಫ್ತು ಶುರು ಮಾಡಿತು. ಒಂದು ಕಾಲದಲ್ಲಿ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಅಮೆರಿಕಾಗೆ ಟೈರ್​ಗಳನ್ನು ರಫ್ತು ಮಾಡುವ ಹಂತಕ್ಕೆ ಎಂಆರ್​ಎಫ್​ ಬೆಳೆಯಿತು. ದೇಶಿಯವಾಗಿಯೂ ಒಳ್ಳೆಯ ನೆಟ್​ವರ್ಕ್ ಬೆಳೆಸಿಕೊಂಡು ಅತ್ಯಂತ ಯಶಸ್ವಿ ಸಂಸ್ಥೆಯಾಗಿ ಆವತರಿಸಿತು. ನೈಲಾನ್ ಟೈರ್​ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ ಗರಿಮೆ ಕೂಡ ಇದಕ್ಕೆ ಲಭಿಸಿತು.

ಇತರೆ ರಂಗದಲ್ಲಿ :

ಎಂಆರ್​ಎಫ್​ ಕೇವಲ ಟೈರ್​ಗಳಿಗೆ ಸೀಮಿತ ಆಗಲಿಲ್ಲ. ಎಂಆರ್​ಎಫ್​ ಬ್ರಾಂಡ್ ಅನ್ನು ಕಸ್ಟಮರ್​ಗಳ ಮೈಂಡ್​ನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಲು ಮೋಟಾರ್ ಸ್ಪೋರ್ಟ್, ಕ್ರಿಕೆಟ್​ನಲ್ಲಿ ಎಂಆರ್​ಎಫ್ ಹೂಡಿಕೆ ಮಾಡಿತು. ಟ್ಯೂಬ್​, ಪೇಂಟ್​, ಕನ್ವೆಯರ್ ಬೆಲ್ಟ್​, ಆಟಿಕೆ ತಯಾರಿ ವಲಯವನ್ನು ಪ್ರವೇಶಿಸಿತು.

2007ರಲ್ಲಿ ಬಿಲಿಯನ್ ಡಾಲರ್​ಗಳ ವಾರ್ಷಿಕ ಟರ್ನೋವರ್​ ತಲುಪಿದ ಕಂಪನಿ ಎಂಬ ಗರಿಮೆಗೆ ಪಾತ್ರವಾಯಿತು. ನಾಲ್ಕು ವರ್ಷಗಳ ಅವಧಿಯಲ್ಲಿ ಇದು ದುಪ್ಪಟ್ಟಾಯಿತು. ಈ ಯಶಸ್ಸಿನ ಗಾಥೆಯೇ ಕಂಪನಿಗಳ ಷೇರುಗಳ ಮೌಲ್ಯವನ್ನು1 ಲಕ್ಷದ ವರೆಗೂ ಹೆಚ್ಚಿಸಿದೆ.

ಈ ಮಧ್ಯೆ ಓರ್ವ ಇನ್ವೆಸ್ಟರ್ ಕತೆ ವೈರಲ್ ಆಗುತ್ತಿದೆ.

1990ರಲ್ಲಿ 20ಸಾವಿರ ಮೌಲ್ಯದ ಎಂಆರ್​ಎಫ್ ಷೇರುಗಳನ್ನು ಖರೀದಿಸಿ ಮರೆತೇಬಿಟ್ಟಿದ್ದ.. ಅದನ್ನು 2017ರಲ್ಲಿ ನೆನಪಿಸಿಕೊಂಡು ಚೆಕ್​ ಮಾಡಿದಾಗ ಆ ಷೇರುಗಳ ಮೌಲ್ಯ 130 ಕೋಟಿ ತಲುಪಿತ್ತಂತೆ.